Advertisement

ಮುಗಿಯಿತು ಕೊಹ್ಲಿ-ಅನುಷ್ಕಾ ಮದುವೆ ರಹಸ್ಯ: ಇಟಲಿಯಲ್ಲಿ ಕೂಡಿತು ಕಂಕಣ

06:00 AM Dec 12, 2017 | Team Udayavani |

ಮಿಲಾನ್‌ (ಇಟಲಿ): ಹಲವು ದಿನಗಳ ಕಾಲ ಹೌದೋ, ಅಲ್ಲವೋ ಎಂಬ ಗೊಂದಲದಲ್ಲೇ ಎಲ್ಲರನ್ನೂ ಇಟ್ಟಿದ್ದ ಸಂಗತಿ  ಈಗ ಖಚಿತವಾಗಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಹೌದೆನ್ನುವುದು ಈಗ ಜಗಜ್ಜಾಹೀರು. ಅದನ್ನು ಕೊಹ್ಲಿಯೇ ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ. ಈ ಟ್ವೀಟನ್ನು ಕೆಲವೇ ನಿಮಿಷದಲ್ಲಿ 26 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ.

Advertisement

ಇಟಲಿಯ ಐತಿಹಾಸಿಕ ರೋಮ್‌ ನಗರಕ್ಕೆ ಕೇವಲ 2 ಗಂಟೆ ದೂರವಿರುವ ಟಸ್ಕನಿ ಎಂಬ ಹಳ್ಳಿಯ ಬೋರ್ಗೋ ಫಿನೊಶಿಯೆಟೊ ಎಂಬ ರೆಸಾರ್ಟ್‌ನಲ್ಲಿ ಮದುವೆ ಸೋಮವಾರ ಮುಗಿದಿದೆ. ಇಂತಹ ರಸಗಳಿಗೆಯನ್ನು ಕೊಹ್ಲಿ ಟ್ವೀಟ್‌ನಲ್ಲಿ ಹೇಳಿದ್ದು ಹೀಗೆ: “ಇವತ್ತು ನಾವು ಶಾಶ್ವತವಾಗಿ ಪ್ರೀತಿಯಲ್ಲಿ ಒಂದಾಗಿದ್ದೇವೆಂದು ಪರಸ್ಪರ ಭಾಷೆ ನೀಡಿದ್ದೇವೆ. ಇಂತಹ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಿಜಕ್ಕೂ ಸಂಭ್ರಮವಾಗುತ್ತಿದೆ. ಅಭಿಮಾನಿಗಳು, ಹಿತಚಿಂತಕರ ಪ್ರೀತಿ ಮತ್ತು ಬೆಂಬಲದಿಂದ ಇದು ವಿಶೇಷ ಗಳಿಗೆಯಾಗಿ ಪರಿಣಮಿಸಿದೆ. ನಮ್ಮ ಬಾಂಧವ್ಯದ ಮಹತ್ತರ ಹೊತ್ತಿನಲ್ಲಿ ನೀವೂ ಒಂದಾಗಿದ್ದಕ್ಕೆ  ಧನ್ಯವಾದಗಳು’.

ಮುಗಿದ ಗೊಂದಲ: ಇಟಲಿಯ ದುಬಾರಿ ರೆಸಾರ್ಟ್‌ನಲ್ಲಿ ಕೊಹ್ಲಿ ಜೋಡಿ ಮದುವೆಯಾಗಲಿದೆ ಎಂದು ಸುದ್ದಿಯಾಗಿದ್ದರೂ ಅದು ಯಾವಾಗ ಎನ್ನುವುದು ಗೊತ್ತಾಗಿರಲಿಲ್ಲ. ಈ ಬಗ್ಗೆ ದಿನಕ್ಕೊಂದು ಸುದ್ದಿ ಹರಡುತ್ತಿತ್ತು. ಕೆಲವು ಮೂಲಗಳು ಮೊನ್ನೆ ಶನಿವಾರವೇ ಮದುವೆ ಮುಗಿದಿದೆ ಘೋಷಣೆಯಷ್ಟೇ ಬಾಕಿ ಎಂದು ಹೇಳಿದ್ದವು. ಇನ್ನು ಕೆಲವು ಮೂಲಗಳು ಮಂಗಳವಾರವೇ ಮದುವೆ ಎಂದಿದ್ದವು. ಅಂತೂ ಸೋಮವಾರ ಕೊಹ್ಲಿ ಅದನ್ನೆಲ್ಲ ಒಂದು ಟ್ವೀಟ್‌ ಮೂಲಕ ಇಲ್ಲ ಮಾಡಿದ್ದಾರೆ.

ಅತಿಥಿಗಳು ಯಾರು?: ಇಂತಹ ಮಹತ್ವದ ಸಮಾರಂಭ ಅತ್ಯಂತ ಖಾಸಗಿಯಾಗಿ ನಡೆಯಿತು. ಕೊನೆಯ ಹಂತದವರೆಗೂ ಮದುವೆ ನಡೆಯುತ್ತದೆ ಎನ್ನುವುದನ್ನು ಕೊಹ್ಲಿ ಜೋಡಿ ಯಾರಿಗೂ ಬಾಯ್ಬಿಟ್ಟಿರಲಿಲ್ಲ. ಅತಿಥಿಗಳು ಯಾರು ಎನ್ನುವುದು ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಕೊಹ್ಲಿ ಕಡೆಯಿಂದ ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಸಿಂಗ್‌, ಅನುಷ್ಕಾ ಕಡೆಯಿಂದ ಶಾರುಖ್‌ ಖಾನ್‌, ಅಮೀರ್‌ ಖಾನ್‌ ಮಾತ್ರ ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next