ಶಿರಸಿ: ಕ್ಷೀರ ಉತ್ಪಾದನೆಯಲ್ಲಿ ತನ್ನದೇ ಆದ ದಾಪುಗಾಲು ಇಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸ್ವಂತ ಕಟ್ಟಡವೇ ಇಲ್ಲ. ಕಳೆದ ಮೂರು ದಶಕಗಳಿಂದಲೂ ಬಾಡಿಗೆ ಕಟ್ಟಡದಲ್ಲೇ ದಿನಕ್ಕೆರಡು ಬಾರಿ ತೆರೆಯುತ್ತಿದೆ. ಬಹುತೇಕ ಹಾಲು ಸಂಘಗಳಿಗೆ ಸ್ವಂತ ಕಟ್ಟಡ ಗಗನ ಕುಸುಮವೇ ಆಗಿದೆ.
ಜಿಲ್ಲೆಯಲ್ಲಿ 241 ಸಹಕಾರಿ ಹಾಲು ಉತ್ಪಾದಕರ ಸಂಘಗಳಿವೆ. ಅವುಗಳಲ್ಲಿ ಕೇವಲ 60 ಸಂಘಗಳಿಗೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದ 181 ಸಂಘಗಳು ಬಾಡಿಗೆ ಕಟ್ಟಡದಲ್ಲೇ ದಿನ ದೂಡುತ್ತಿವೆ. ಸಂಘದ ಸಹಕಾರಿಗಳಿಗೆ ಸ್ವಂತ ಕಟ್ಟಡ ಹಾಗೂ ಸ್ಥಳ ಎರಡೂ ಗಗನ ಕುಸುಮವೇ ಆಗಿದೆ.
ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಗೆ ಸೇರಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಿನ ಉತ್ಪನ್ನಗಳ ಗಣನೀಯ ಏರಿಕೆ ಆಗುತ್ತಿದೆ. ಇದಕ್ಕಾಗಿ ಕೇವಲ 80ರಷ್ಟಾಗಿದ್ದ ಸಂಘಗಳು ಕಳೆದ ದಶಕದಿಂದೀಚೆಗೆ ಏರಿಕೆಯೂ ಆಗಿದೆ. 12-13 ಸಾವಿರ ಲೀ. ಉತ್ಪಾದನೆಗೆ ತತ್ವಾರ ಕಾಣುತ್ತಿದ್ದ ಹಾಲು ಇಂದು 40 ಸಾವಿರ ಲೀ. ದಾಟಿದೆ.
ಇವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ದಿನಕ್ಕೆರಡು ಸಲ ಒಕ್ಕೂಟಕ್ಕೆ ನೀಡುವ ಹಾಲು ಸಂಘಗಳಿಗೆ ಮಾತ್ರ ಸ್ವಂತ ಕಟ್ಟಡ ಹೊಂದಿಲ್ಲ. ಜೊತೆಗೆ ಸರಕಾರದ ಯಾವುದೇ ಅನುದಾನ ದೊರೆತೂ ಇಲ್ಲ. ಹೀಗಾಗಿ ನೂರಾರು ಸಂಘಗಳು ಇನ್ನೂ ಸಂಘ ಸಂಸ್ಥೆಗಳ ಬಾಡಿಗೆ ಕಟ್ಟಡದಲ್ಲಿ ದಿನ ಕಳೆಯುತ್ತಿರುವುದು ವಿಪರ್ಯಾಸವಾಗಿದೆ. ಹೆಚ್ಚಿನ ಸಂಘಗಳು ಸರಾಸರಿ ದಿನಕ್ಕೆ 200-250ಲೀಟರ್ ಹಾಲು ಉತ್ಪಾದನೆ ಮಾಡುತ್ತವೆ. ಕೆಲವು ಸಂಘಗಳು ಇದಕ್ಕೂ ಹೆಚ್ಚು ಕಡಿಮೆ ಉತ್ಪಾದಿಸುವುದಿದೆ. ಎಷ್ಟೇ ಉತ್ಪಾದನೆಯಾದರೂ ಸಂಘಗಳಿಗೆ ಲಾಭ ಅಷ್ಟಕಷ್ಟೇ. ಈ ಲಾಭದಲ್ಲಿ ಸಂಘಕ್ಕೆ ಬೇಕಾದ ಕಟ್ಟಡ ನಿರ್ಮಾಣ ಕಷ್ಟಸಾಧ್ಯ. ಹೀಗಿರುವಾಗ ಸರಕಾರದ ಅನುದಾನ ಕಟ್ಟಡಗಳ ನಿರ್ಮಾಣಕ್ಕೆ ದೊರೆತರೆ ಅನುಕೂಲವಾಗಲಿದೆ ಎಂಬುದು ಸಾರ್ವತ್ರಿಕ ಅಭಿಮತವಾಗಿದೆ.
ಶಿರಸಿ ತಾಲೂಕಿನಲ್ಲಿ 83ರಲ್ಲಿ 37ಕ್ಕೆ ಸ್ವಂತ ಕಟ್ಟಡ, ಸಿದ್ದಾಪುರದಲ್ಲಿ 50ಕ್ಕೆ 15, ಯಲ್ಲಾಪುರದಲ್ಲಿ 33ರಲ್ಲಿ 8ಕ್ಕೆ, ಮುಂಡಗೋಡ 26ರಲ್ಲಿ 26, ಕುಮಟಾದಲ್ಲಿ ಏಳಕ್ಕೆ ಏಳು, ಭಟ್ಕಳದಲ್ಲಿ 9ಕ್ಕೆ 9, ಹೊನ್ನಾವರಲ್ಲಿ 9ಕ್ಕೆ 9, ಅಂಕೋಲಾದಲಿ 6ಕ್ಕೆ ಆರು, ಹಳಿಯಾಳದಲ್ಲಿ 18ಕ್ಕೆ ಹದನೆಂಟೂ ಕಟ್ಟಡ ಇಲ್ಲವಾಗಿದೆ.
ಹಾಲಿ ಸಂಘಗಳಲ್ಲಿ ಹಾಲಿನ ಸಂಗ್ರಹಣೆ ಜತೆಗೆ ಅವುಗಳ ಉಪಕರಣ, ಪಶು ಆಹಾರಗಳ ಚೀಲಗಳನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಮಾಸಿಕ ಮೀಟಿಂಗ್, ಕಂಪ್ಯೂಟರ್ ಕೂಡ ಇರುತ್ತವೆ. ಬಾಡಿಗೆ ಕಟ್ಟಡಕ್ಕೆ 250 ರೂ.ಗಳಿಂದ ಎರಡೂವರೆ ಸಾವಿರ ರೂ. ತನಕ ಮಾಸಿಕ ಬಾಡಿಗೆ ಕೊಟ್ಟೇ ಹೋಗುತ್ತದೆ. ಇದು ಒಂದು ಕಡೆ ನಷ್ಟವಾದರೆ, ಇನ್ನೊಂದು ಕಡೆ ಉಪಕರಣ, ಪಶು ಆಹಾರ ಇಟ್ಟುಕೊಳ್ಳುವ ವ್ಯವಸ್ಥಿತ ಗೋದಾಮೂ ಇಲ್ಲದಂತಾಗುತ್ತದೆ. ಸ್ವಂತ ಬಂಡವಾಳ ಬಳಸಿ ಸಂಘದ ಕಟ್ಟಡ ಸ್ಥಾಪಿಸಿಕೊಳ್ಳುವಷ್ಟು ಸಿರಿವಂತರಾಗದ ಕಾರಣ ಸಂಘಗಳಿಗೆ ಸರಕಾರದ ನೆರವು ಅಗತ್ಯವಾಗಿದೆ.
•ರಾಘವೇಂದ್ರ ಬೆಟ್ಟಕೊಪ್ಪ