Advertisement

ಹೊಸತೇನಲ್ಲ ಮಹಾ ‘ಜಲ’ಮೊಂಡುತನ

09:35 AM Jun 09, 2019 | Team Udayavani |

ಹುಬ್ಬಳ್ಳಿ: ಕೊಯ್ನಾದಿಂದ ಕೃಷ್ಣಾ ನದಿಗೆ ನೀರು ಬಿಡುವುದು ಸೇರಿದಂತೆ ನೀರಿನ ವಿಚಾರಲ್ಲಿ ಕರ್ನಾಟಕದ ಬಗ್ಗೆ ಮಹಾರಾಷ್ಟ್ರ ಮೊಂಡುತನ ತೋರುತ್ತಲೇ ಬಂದಿದೆ. ಭೀಕರ ಬರದ ಸಂದರ್ಭದಲ್ಲೂ ನೀರು ನೀಡುವ ಮಾನವೀಯತೆ ತೋರದೆ ಮೊಂಡುತನ ಮುಂದುವರೆಸಿದೆ.

Advertisement

ಈ ಹಿಂದೆ ಕೇಂದ್ರದ ಮೇಲೆ ಪ್ರಭಾವ ಬಳಸಿ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹ ಮಟ್ಟ ಕಡಿಮೆ ಮಾಡಬೇಕು ಎಂಬ ಒತ್ತಡ ತಂದಿದ್ದ ಮಹಾರಾಷ್ಟ್ರ, ಸಂಕಷ್ಟ ಸ್ಥಿತಿಯಲ್ಲಿ ಕೊಯ್ನಾದಿಂದ ನೀರು ನೀಡಿಕೆಗೆ ತಾನೇ ಪ್ರಸ್ತಾಪಿಸಿದ್ದ ನೀರಿಗೆ ನೀರು ಒಡಂಬಡಿಕೆಗೆ ಕರ್ನಾಟಕ ಒಪ್ಪಿದ್ದರೂ ನೀರು ನೀಡದೆ ಸತಾಯಿಸುತ್ತಿದೆ.

ಮಹಾರಾಷ್ಟ್ರದಿಂದ ನೀರು ಪಡೆಯುವ ಬೇಡಿಕೆಯ ಚೆಂಡು ಈಗ ರಾಜ್ಯಪಾಲರ ಅಂಗಳವನ್ನು ಪ್ರವೇಶಿಸಿದಂತಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಹಾರಾಷ್ಟ್ರದಿಂದ ನೀರು ಪಡೆಯುವ ವಿಚಾರವಾಗಿ ಮಧ್ಯ ಪ್ರವೇಶಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಮಾಡಿದ್ದು, ರಾಜ್ಯಪಾಲರ ಮಧ್ಯಪ್ರವೇಶ ಕುರಿತು ಹೊಸ ನಿರೀಕ್ಷೆಯೊಂದು ಗರಿಗೆದರುವಂತೆ ಮಾಡಿದೆ.

ಮೊಂಡುತನ ಹೊಸತೇನಲ್ಲ: ನೀರಿನ ವಿಚಾರ ಬಂದಾಗಲೆಲ್ಲ ಮಹಾರಾಷ್ಟ್ರ ಕರ್ನಾಟಕದ ಮೇಲೆ ಗದಾಪ್ರಹಾರ ಮಾಡುವ, ಮೊಂಡುತನ ತೋರುತ್ತಲೇ ಬಂದಿದೆ. ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವಿದ್ದಾಗ ಅಂದಿನ ಕೇಂದ್ರ ಸರಕಾರದ ಮೇಲೆ ಪ್ರಭಾವ ಬೀರಿ, ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ನೀರು ನಿಲ್ಲಿಸುವುದರಿಂದ ತನ್ನ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತಿದೆ ಎಂಬ ಸುಳ್ಳಿನ ಕಥೆಯೊಂದನ್ನು ಸೃಷ್ಟಿಸಿತ್ತಲ್ಲದೆ, ನೀರು ಸಂಗ್ರಹ ಪ್ರಮಾಣ ಕಡಿಮೆ ಮಾಡುವಂತೆ ಒತ್ತಾಯಿಸಿತ್ತು.

ಆಗ ಮಹಾರಾಷ್ಟ್ರದ ಪ್ರಭಾವಕ್ಕೊಳಗಾದ ಕೇಂದ್ರ ಜಲಸಂಪನ್ಮೂಲ ಸಚಿವ ಪ್ರಿಯರಂಜನ ದಾಸ್‌ ಮುನ್ಶಿ ಅವರು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಪತ್ರ ಬರೆದು, ಜೂನ್‌ನಿಂದ ಸೆಪ್ಟಂಬರ್‌ವರೆಗೆ ಆಲಮಟ್ಟಿ ಜಲಾಶಯದಲ್ಲಿ 519 ಮೀಟರ್‌ ಬದಲಾಗಿ 509 ಮೀಟರ್‌ಗೆ ನೀರು ನಿಲ್ಲಿಸುವಂತೆ ಸೂಚಿಸಿದ್ದರು. ಇದಕ್ಕೆ ರಾಜ್ಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಿನ ಸಮ್ಮಿಶ್ರ ಸರಕಾರ ಕೇಂದ್ರ ಜಲಸಂಪನ್ಮೂಲ ಸಚಿವರ ಸೂಚನೆ ಪಾಲನೆಗೆ ಮುಂದಾಗಿರಲಿಲ್ಲ.

Advertisement

ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಮರ್ಪಕ ಮಳೆ ಆಗದೆ ರಾಜ್ಯದಲ್ಲಿ ನದಿ, ಹಳ್ಳ, ಕೆರೆ-ಕಟ್ಟೆಗಳಲ್ಲೆ ಬತ್ತಿ ಹೋಗಿವೆ. ಜನ-ಜಾನುವಾರು ಹನಿ ನೀರಿಗೂ ಪರದಾಡುವಂತಾಗಿದೆ. ಸಂಕಷ್ಟ ಸ್ಥಿತಿಯಲ್ಲಿ ಕೊಯ್ನಾದಿಂದ ಕೃಷ್ಣಾ ನದಿಗೆ ಸುಮಾರು ನಾಲ್ಕು ಟಿಎಂಸಿ ಅಡಿ ನೀರು ಬಿಡುವಂತೆ ಮಾಡಿದ ಮನವಿಗೆ ಇಂದಿಗೂ ಸ್ಪಂದನೆ ದೊರೆತಿಲ್ಲ.

ಕೊಯ್ನಾದಿಂದ ನೀರು ಬಿಡಲು ಹಣದ ಬದಲು ನೀರಿಗೆ ನೀರು ಒಡಂಬಡಿಕೆಗೆ ಮುಂದಾಗಿ ಎಂಬ ಮಹಾರಾಷ್ಟ್ರದ ಸಲಹೆಗೂ ಕರ್ನಾಟಕ ಒಪ್ಪಿಗೆ ನೀಡಿತ್ತು. ಕೊಯ್ನಾದಿಂದ ನೀಡುವ 4 ಟಿಂಎಂಸಿ ನೀರಿಗೆ ಬದಲಾಗಿ, ವಿಜಯಪುರ ಜಿಲ್ಲೆಯ ತುಬಚಿ-ಬಬಲೇಶ್ವರ ಜಲಾಶಯದಿಂದ ಮಹಾರಾಷ್ಟ್ರದ ಜತ್‌ ತಾಲೂಕಿಗೆ ನಾಲ್ಕು ಟಿಎಂಸಿ ಅಡಿ ನೀರು ನೀಡಬೇಕೆಂಬ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿತ್ತು.

ಕರ್ನಾಟಕ ಜಲಸಂಪನ್ಮೂಲ ಸಚಿವರ ಮನವಿ, ಬಿಜೆಪಿ ಜನಪ್ರತಿನಿಧಿಗಳ ನಿಯೋಗದ ಬೇಡಿಕೆಯೊಂದೇ ಸಾಲದು..ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಪತ್ರ ಬರಬೇಕು ಎಂಬ ಮಹಾರಾಷ್ಟ್ರದ ಬೇಡಿಕೆಯಂತೆ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು. ರಾಜ್ಯ ಜಲಸಂಪನ್ಮೂಲ ಇಲಾಖೆಯಿಂದಲೂ ಮನವಿ ಹೋಗಿತ್ತು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಭೇಟಿಗೆ ಸಮಯ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ವೇಳೆ ಖುದ್ದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಜತೆ ಮಾತನಾಡಿ, ನೀರು ನೀಡುವಂತೆ ಮನವಿ ಮಾಡಿದ್ದರು. ಇಷ್ಟಾದರೂ ಇದುವರೆಗೂ ಮಹಾರಾಷ್ಟ್ರ ಜಲಸಂಪನ್ಮೂಲ ಇಲಾಖೆಗೆ ಯಾವುದೇ ಸೂಚನೆ ಹೋಗಿಲ್ಲ ಎನ್ನಲಾಗುತ್ತಿದೆ.

ಕಳೆದ ಎರಡು ತಿಂಗಳ ಹಿಂದೆ ಮುಂಬೈನಲ್ಲಿ ನಡೆದ ಕರ್ನಾಟಕ-ಮಹಾರಾಷ್ಟ್ರದ ಜಲಸಂಪನ್ಮೂಲ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರದ ಜತ್‌ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು ನೀರು ಲಿಫ್ಟ್ಗೆ ಜಾಗ ನೀಡುವುದಾಗಿಯೂ ಕರ್ನಾಟಕ ತಿಳಿಸಿತ್ತು. ಇದಕ್ಕೂ ಮಹಾರಾಷ್ಟ್ರದಿಂದ ಸ್ಪಂದನೆ ಇಲ್ಲವಾಗಿದೆ. ಜತೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮಹಾರಾಷ್ಟ್ರದ ಜಲಮೂಲದಿಂದ ಟ್ಯಾಂಕರ್‌ ನೀರು ಖರೀದಿಗೂ ತಡೆಯೊಡ್ಡಿದೆ. ಹೀಗೆ ನೀರು ನೀಡಿಕೆ ಹಾಗೂ ನೀರಿಗೆ ನೀರು ವಿಚಾರವಾಗಿ ಮಹಾರಾಷ್ಟ್ರ ಬಾಯ್ಮಾತಲ್ಲಿ ಸಾಕಾರಾತ್ಮಕ ಭಾವನೆ ಹೊಂದಿದ್ದಾಗಿ ಹೇಳುವುದು ಬಿಟ್ಟರೆ ಕೃತಿಯಲ್ಲಿ ತೋರುತ್ತಿಲ್ಲ. ಬದಲಾಗಿ ತನ್ನದೇ ಮೊಂಡುತನ ಮುಂದುವರೆಸಿದೆ.

ಬಿಜೆಪಿ ತೋರಬೇಕಿದೆ ಹೆಚ್ಚಿನ ಜವಾಬ್ದಾರಿ:

ಮಹಾರಾಷ್ಟ್ರದಿಂದ ನೀರು ಪಡೆಯುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಈಗಾಗಲೇ ಮಹಾರಾಷ್ಟ್ರಕ್ಕೆ ನಿಯೋಗ ಹೋಗಿ ಅಲ್ಲಿನ ಮುಖ್ಯಮಂತ್ರಿ ಹಾಗೂ ನಮ್ಮ ಮುಖ್ಯಮಂತ್ರಿಗೂ ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳೇ ಇರುವುದರಿಂದ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ನಾಯಕರ ಜವಾಬ್ದಾರಿ ಹೆಚ್ಚಿದೆ. ಕೊಯ್ನಾದಿಂದ ನೀರು ಪಡೆಯುವ ವಿಚಾರದಲ್ಲಿ ರಾಜಕೀಯ ಬದಿಗಿರಿಸಿ, ಮುಕ್ತ ಮನಸ್ಸಿನಿಂದ ಮಹಾರಾಷ್ಟ್ರದ ಮೇಲೆ ಒತ್ತಡ ತರುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ.
•ಅಮರೇಗೌಡ ಗೋನವಾರ
Advertisement

Udayavani is now on Telegram. Click here to join our channel and stay updated with the latest news.

Next