ಕೆಂಗೇರಿ: “ಬಿಜೆಪಿಯವರು ರಾಜ್ಯಾದ್ಯಂತ ಕೈಗಂಡಿರುವುದು ಅಭಿಯಾನಕ್ಕೆ “ಪರಿವರ್ತನಾ ರ್ಯಾಲಿ’ ಎನ್ನುವ ಬದಲು “ಪಶ್ಚಾತಾಪ ರ್ಯಾಲಿ’ ಎಂದು ಕರೆದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು,’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು. ರಾಮೋಹಳ್ಳಿ ಗ್ರಾ.ಪಂ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಸುಳ್ಳು ಆಶ್ವಾಸನಗಳಲ್ಲೆ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯಕ್ಕೆ ಕೊಡಿಸಬೇಕಾದ ಸೌಲಭ್ಯಗಳು, ಮಹದಾಯಿ ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಪ್ರಧಾನಿ ಮುಂದೆ ತುಟಿಬಿಚ್ಚದೆ ರಾಜ್ಯದ ಜನತೆಗೆ ದ್ರೋಹಬಗೆದಿದ್ದಾರೆ,’ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಭಾರತ ಸ್ವಾತಂತ್ರ ಪಡೆದ ಆರಂಭದಲ್ಲಿ ದೇಶದಲ್ಲಿ ಕೈಗಾರಿಕೆಗಳು, ಕೃಷಿ, ಶಿಕ್ಷಣದಂತಹ ವ್ಯವಸ್ಥೆಗಳಿಲ್ಲದ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ನಿರಂತರ ಪ್ರಯತ್ನದ ಮೂಲಕ ಅಭಿವೃದ್ಧಿಗೆ ಒತ್ತು ನೀಡಿ, ದೇಶವನ್ನು ಪ್ರಗತಿ ಪಥಕ್ಕೆ ಕೊಂಡೊಯ್ದಿದೆ. ಆದರೂ ಕಾಂಗ್ರೆಸಿಗರು ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಗ್ರಾ.ಪಂ ಉಪಾಧ್ಯಕ್ಷ ಬಿ.ಎಚ್.ಪ್ರಭು, ಗ್ರಾ.ಪಂ ಸದಸ್ಯರಾದ ಆನಂದ್, ಚಂದ್ರು, ಜಗದೀಶ್ ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಶಾಸಕ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮೋಹಳ್ಳಿ ಗ್ರಾ.ಪಂ ಅಧ್ಯಕ್ಷೆ ರೂಪಾ ವೇಣುಗೋಪಾಲ್, ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚೇತನ್‌ಗೌಡ, ಬೆಂಗಳೂರು ದಕ್ಷಿಣ ತಾ.ಪಂ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.