Advertisement

ಮತಗಟ್ಟೆ ಕೇಂದ್ರದಲ್ಲಿ ಹೀಗೊಂದು ಸುತ್ತು..

10:56 AM Apr 19, 2019 | Sriram |

ಮತಯಂತ್ರಗಳ ಸಣ್ಣಪುಣ್ಣ ದೋಷದ ನಡುವೆಯೂ ಮೊದಲನೇ ಹಂತದ ಚುನಾವಣೆ
ಮುಕ್ತಾಯಗೊಂಡಿದೆ. ಮತಗಟ್ಟೆ ಕೇಂದ್ರ ಬಳಿ ಮತದಾನಕ್ಕೂ ಮುನ್ನ ಮತ್ತು ನಂತರ ಸಾಕಷ್ಟು ಕುತೂಹಲಕಾರಿ ಪ್ರಸಂಗಗಳಿಗೂ ಮೊದಲನೇ ಹಂತ ಸಾಕ್ಷಿಯಾಯಿತು.ಎಲ್ಲೆಲ್ಲಿ,
ಏನೇನಾಯಿತು ಎಂಬ ಝಲಕ್‌ ಇಲ್ಲಿದೆ.

Advertisement

ಮುಖಂಡರ ಹೆಸರೇ ಡಿಲೀಟ್‌!
ರಾಮನಗರದ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಹೋಬಳಿ ಅವರಗೆರೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ದೇವಿ ಸೇರಿ ಸುಮಾರು 10 ಮಂದಿ ಮತದಾರರ ಹೆಸರು ಮತಪಟ್ಟಿಯಲ್ಲಿ ನಾಪತ್ತೆಯಾಗಿತ್ತು. ಲಕ್ಷ್ಮಿದೇವಿ ತಮ್ಮ ಗ್ರಾಮದ ಮತಗಟ್ಟೆ ಸಂಖ್ಯೆ 225ಕ್ಕೆ ಚುನಾವಣಾ ಸಿಬ್ಬಂದಿ ನೀಡಿದ್ದ ಮತಚೀಟಿ ಮತ್ತು ಎಪಿಕ್‌ ಕಾರ್ಡಿನೊಂದಿಗೆ ತೆರಳಿದರು. ಆದರೆ, ಮತಪಟ್ಟಿಯಲ್ಲಿ ಅವರ ಹೆಸರು ಕಾಣೆಯಾಗಿದ್ದನ್ನು ಕಂಡು ಸಿಡಿಮಿಡಿಗೊಂಡರು. ಇದೇ ವೇಳೆಗೆ ಇನ್ನೂ 10-15 ಮಂದಿ ತಮ್ಮ ಹೆಸರು ಮತಪಟ್ಟಿಯಲ್ಲಿಲ್ಲ ಎಂದು ದೂರಿ ಪ್ರತಿಭಟನೆ ನಡೆಸಿದರು.

ಸಿಬ್ಬಂದಿ ವಿರುದ್ಧ ಪ್ರತಿಭಟನೆ
ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ತೇಗನಹಳ್ಳಿ ಗ್ರಾಮದಲ್ಲಿ ಸಿದ್ದಮ್ಮ ಎಂಬ ಹಿರಿಯ ಮತದಾರರ ಮತವನ್ನು ಚುನಾವಣೆ ಕರ್ತವ್ಯ ಮಾಡುತ್ತಿದ್ದ ಸಿಬ್ಬಂದಿಯೇ ಚಲಾವಣೆ ಮಾಡಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು ಮತಗಟ್ಟೆಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದಮ್ಮ(80) ಎಂಬ ಮಹಿಳೆಯನ್ನು ಕರೆತಂದಿದ್ದ ಆಕೆಯ ಮಗನಿಗೆ ಮತಗಟ್ಟೆ ಒಳಗೆ ಪ್ರವೇಶ
ನೀಡದೆ ಚುನಾವಣಾ ಸಿಬ್ಬಂದಿಯೇ ಮತ ಚಲಾಯಿಸಿದ್ದಾರೆಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದು, ಅಮಾನತು ಮಾಡುವಂತೆ ಒತ್ತಾಯಿಸಿದರು. ಅಧಿಕಾರಿಗಳು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಪತಿ ಅಂತ್ಯಕ್ರಿಯೆ ಬಳಿಕ ಮತದಾನ
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ನಿವಾಸಿ ಮಧು ಜೈನ್‌ ಪತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬಳಿಕ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿದರು. ಬುಧವಾರವಷ್ಟೇ ಮಧು ಜೈನ್‌ ಪತಿ ಸತೀಶ್‌ ಹೃದಯಾಘಾತದಿಂದ ಮೃತಪಟ್ಟಿದ್ದರು. ಗುರುವಾರ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಕೆಆರ್‌ಎಸ್‌ನ ಮತಗಟ್ಟೆ ಸಂಖ್ಯೆ 212ರಲ್ಲಿ ಮಧು ಮತದಾನ ಮಾಡಿದರು.ಮಂಡ್ಯ ತಾಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದ ಬೊಮ್ಮೇಗೌಡ ಎಂಬುವರು ಮತ ಚಲಾಯಿಸಿದ ಬಳಿಕ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ನೀರಿಗಾಗಿ ಆಗ್ರಹಿಸಿ ಬಹಿಷ್ಕಾರ
ಕೋಲಾರ ತಾಲೂಕಿನ ಗಡಿ ಗ್ರಾಮವಾದ ಮಲ್ಲಸಂದ್ರದಲ್ಲಿ ಕೆಸಿ ವ್ಯಾಲಿ ನೀರನ್ನು ತಮ್ಮೂರಿನ ಕೆರೆಗೂ ಹರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮತ ಚಲಾಯಿಸಿರಲಿಲ್ಲ. ಸುಮಾರು 450 ಮತಗಳಿರುವ ಈ ಗ್ರಾಮ ಮಾಲೂರು ತಾಲೂಕು ಹಾಗೂ ಬೆಂಗಳೂರು ಗ್ರಾ. ಜಿಲ್ಲೆಗಳ ಗಡಿಗೆ ಹೊಂದಿಕೊಂಡಿದೆ. ಜಿಲ್ಲಾಡಳಿತ ಕೆಸಿ ವ್ಯಾಲಿ ನೀರು ಹರಿಸುವ
ಗ್ಯಾರಂಟಿ ಪತ್ರ ನೀಡಿದರೆ ಮಾತ್ರವೇ ಮತದಾನದಲ್ಲಿ ಪಾಲ್ಗೊಳ್ಳುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದರು.
ಮಧ್ಯಾಹ್ನ ವೇಳೆಗೆ ಸಹಾಯಕ ಚುನಾವಣಾಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿಗಳು ಕ್ರಮ ವಹಿಸುವ ಭರವಸೆ ನೀಡಿರುವ ಬಗ್ಗೆ ತಿಳಿಸಿದ ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮತದಾನ ಆರಂಭಗೊಂಡಿತು.

Advertisement

ಮಾಜಿ ಸಭಾಪತಿ ಹೆಸರೇ ನಾಪತ್ತೆ!
ಕೋಲಾರ ತಾಲೂಕಿನ ವೇಮಗಲ್‌ನ ಮತಗಟ್ಟೆಗೆ ತೆರಳಿದ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ರ ಹೆಸರು ಮತಪಟ್ಟಿಯಲ್ಲಿ ಇಲ್ಲದ ಕಾರಣ ಮತದಾನದಿಂದ ವಂಚಿತರಾಗಬೇಕಾಯಿತು. ಪ್ರತಿ ಚುನಾವಣೆಯಲ್ಲೂ ಕಡ್ಡಾಯವಾಗಿ ಮತ ಚಲಾಯಿಸಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಿ.ಆರ್‌. ಸುದರ್ಶನ್‌ ಪ್ರಸ್ತುತ ಕಾಂಗ್ರೆಸ್‌ ಪಕ್ಷದ ವಕ್ತಾರರೂ ಹೌದು.
“ತಾವೇನು ಊರು ಬಿಟ್ಟಿಲ್ಲ, ಡಿಲೀಟ್‌ ಮಾಡಲು ಪತ್ರವನ್ನೂ ನೀಡಿಲ್ಲ, ಎಲ್ಲೋ ತಪ್ಪಾಗಿದೆ” ಎಂದು ತಿಳಿಸಿ ಮತದಾನದಿಂದ ದೂರ ಉಳಿದರು.

ಗೌಡರ ಎದುರು ಮೋದಿ ಘೋಷಣೆ
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲ್ಲಿಗೆರೆ ಗ್ರಾಮಕ್ಕೆ ಮೈತ್ರಿ ಅಭ್ಯರ್ಥಿ ಎಚ್‌
.ಡಿ.ದೇವೇಗೌಡರು ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ದೇವೇಗೌಡರ ವಾಹನದ ಎದುರು “ಮೋದಿ ಮೋದಿ..’ ಎಂಬ ಘೋಷಣೆ ಕೂಗುವ ಮೂಲಕ ಮಾಜಿ ಪ್ರಧಾನಿಗೆ ಇರಿಸುಮುರಿಸು ಉಂಟು ಮಾಡಿದ ಘಟನೆಯೂ ನಡೆಯಿತು.

ಸೈಕಲ್‌ನಲ್ಲೇ ಬಂದು ಮತದಾನ
ಯುವಕರಲ್ಲಿ ಮತ ಜಾಗೃತಿ ಮೂಡಿಸುವುದಕ್ಕಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸೈಕಲ್‌ ಮೂಲಕ ಮತದಾನ ಮಾಡಲು ಆಗಮಿಸಿದ ವಾಮಂಜೂರಿನ ಯುವಕ ಅನಿಕೇತ್‌ ಜೆ. ಅವರು ವಾಮಂಜೂರಿನ ಸೈಂಟ್‌ ಜೋಸೆಫ್‌ ಶಾಲೆಯಲ್ಲಿ ಮತದಾನ ಮಾಡಿದರು.ಮತಗಟ್ಟೆಗೂ ಸೈಕಲ್‌ನಲ್ಲೇ ಆಗಮಿಸಿ ಮತ ಚಲಾಯಿಸಿದರು. ವಾಮಂಜೂರು ಮೂಲದ ಶೇಖರ್‌-ನೀಲಾ ದಂಪತಿ ಅನಿಕೇತ್‌ ಜೆ. ಅವರು ಬೆಂಗಳೂರಿನಿಂದ ಮಂಗಳೂರಿಗೆ ಸೈಕಲ್‌ ಸವಾರಿಯ ಮೂಲಕ ಮತ ಜಾಗೃತಿ ಯಾತ್ರೆ ಹಮ್ಮಿಕೊಂಡಿದ್ದರು. ಏ.17ರಂದು ಬೆಳಗ್ಗೆ 4.45ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ ಸಕಲೇಶಪುರದಲ್ಲಿ
ಉಳಿದುಕೊಂಡಿದ್ದರು. 18 ರಂದು ಮುಂಜಾನೆ 3.30ಕ್ಕೆ ಸಕಲೇಶಪುರದಿಂದ ಹೊರಟು ಮಧ್ಯಾಹ್ನ 1.45ರ ವೇಳೆಗೆ ಮಂಗಳೂರು ತಲುಪಿದ್ದರು. ಬಳಿಕ 2.30ಕ್ಕೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ನೋವಿನ ನಡುವೆಯೂ ಓಟು
ಮಂಗಳೂರಿನ ಅಶೋಕ್‌ ಇಂಡಸ್ಟ್ರೀಸ್‌ನ ಮಾಲೀಕ 90ರ ಹರೆಯದ ದಾಮೋದರ ನಾಯಕ್‌ ಕಲ್ಯಾಣ್‌ಪುರ್‌ ಅವತಲೆಯಲ್ಲಿ ಕಾಣಿಸಿಕೊಂಡ ಕುರವನ್ನು ಅಪಾಯಕಾರಿ ಶಸ್ತ್ರಚಿಕಿತ್ಸೆಮೂಲಕ ತೆಗೆಸಬೇಕಾದ ಅನಿವಾರ್ಯ ಇತ್ತು. ಯೇನೆಪೋಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿ ಮನೆಗೆ ಸೋಮವಾರ ವಾಪಸಾಗಿದ್ದರು. ಬುಧವಾರ ಅವರ ಪತ್ನಿ ಶಾಂತಿ ನಾಯಕ್‌ (79) ನಿಧನ ಹೊಂದಿದರು. ಅಂತ್ಯಸಂಸ್ಕಾರದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಬಂಧುಮಿತ್ರರೆಲ್ಲರೂ ಪಾಲ್ಗೊಂಡಿದ್ದಾರೆ. ಈ ಎಲ್ಲ ನೋವು, ಆಘಾತಗಳ ನಡುವೆಯೇ ದಾಮೋದರ ನಾಯಕ್‌ ಅವರು ತಮ್ಮ ಕರ್ತವ್ಯ ಮರೆಯದೆ, ಮತ ಚಲಾಯಿಸಿದರು.

ಮತದಾನಕ್ಕೆ ಬಹಿಷ್ಕಾರ
ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಕಾಗಾನಪಲ್ಲಿ, ಮೈನಗಾನಪಲ್ಲಿ,ಸಿದ್ದನಪಲ್ಲಿ ಹಾಗೂ ಮರವಪಲ್ಲಿ ಗ್ರಾಮದ 552 ಮತದಾರರ ಬೇಡಿಕೆಗಳ ಈಡೇರಿಕೆಗೆ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ಮತ ಚಲಾಯಿಸದೆ ಮತದಾನಕ್ಕೆ ಬಹಿಷ್ಕಾರ ಹಾಕಿದ್ದರಿಂದ ಮತಗಟ್ಟೆ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್‌ ಆದರು.

Advertisement

Udayavani is now on Telegram. Click here to join our channel and stay updated with the latest news.

Next