Advertisement

ಬೆಂಬಲ ಬೆಲೆಗೆ ತೊಗರಿ ಕೊಡಲು ಅನ್ನದಾತರ ಹಿಂದೇಟು

09:25 AM Feb 18, 2019 | |

ಹೂವಿನಹಿಪ್ಪರಗಿ: ಕರ್ನಾಟಕದ ಎರಡನೇ ತೊಗರಿ ಕಣಜ ಎಂದೇ ಹೆಸರಾದ ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಈ ವರ್ಷ ತೊಗರಿ ಬೆಳೆ ಇಳುವರಿ ತುಂಬಾ ಕಡಿಮೆಯಾಗಿದೆ. ಎಕರೆಗೆ 10 ಕ್ವಿಂಟಲ್‌ ಬೆಳೆಯುವ ಬದಲಿಗೆ 3ರಿಂದ 4 ಕ್ವಿಂಟಲ್‌ ತೊಗರಿ ಬೆಳೆದಿದೆ.

Advertisement

ಸರಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಜಿಲ್ಲೆಯಾದ್ಯಂತ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಕೇಂದ್ರ ಸರಕಾರ 5675 ರೂ., ಹಾಗೂ ರಾಜ್ಯ ಸರಕಾರ 425 ರೂ. ಸೇರಿ ಒಟ್ಟು 6,100 ರೂ. ಬೆಂಬಲ ಬೆಲೆ ನೀಡುತ್ತಿದೆ. ಇದಕ್ಕಾಗಿ ಬೀಜ, ಗೊಬ್ಬರ, ಆಳು, ತೊಗರಿ ಸಾಗಣಿ ವೆಚ್ಚ ಸೇರಿ ಸಾವಿರಾರು ರೂ. ಖರ್ಚು ತೆಗೆಯಬೇಕು. ಕಳೆದ ವರ್ಷ ಬೆಂಬಲ ಬೆಲೆಗೆ ಕೊಟ್ಟ ತೊಗರಿ ಹಣ ವರ್ಷದ ಬಳಿಕ ರೈತರಿಗೆ ತಲುಪಿದೆ. ಸರಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಿ ಸುಮಾರು ದಿನ ಕಳೆದರೂ ಖಾತೆಗೆ ಹಣ ಬರದಿರುವುದಕ್ಕೆ ಬಹುತೇಕ ರೈತರು ರೋಸಿ ಹೋಗಿದ್ದಾರೆ.

ಬೆಲೆಯಲ್ಲಿ ವ್ಯತ್ಯಾಸವಿಲ್ಲ, ಸರಕಾರದ ಬೆಂಬಲ ಬೆಲೆ 6,100 ರೂ. ಆದರೆ, ಹೊರಗಡೆ ಖಾಸಗಿ ವ್ಯಾಪರಸ್ಥರ ಬೆಲೆಯಲ್ಲಿ ಕ್ವಿಂಟಲ್‌ ತೊಗರಿಗೆ 5,500 ರಿಂದ 5,700 ರೂ. ಇದ್ದು, ವರ್ಷವಿಡಿ ಭೂಮಿಯಿಂದ ಯಾವುದೇ ಲಾಭ ಪಡೆಯದ ರೈತರಿಗೆ ಕೈಯಲ್ಲಿ ಹಣ ಬೇಕಿದೆ. ಇದನ್ನು ನೋಡಿದರೆ ಖಾಸಗಿ ವ್ಯಾಪಾರಿಗಳಿಗೆ ಕೊಡುವುದೆ ಉತ್ತಮ ಎನ್ನುತ್ತಾರೆ ರೈತರು.

ಕಳೆದ ವರ್ಷ ತೊಗರಿ ಹಣ ನೀಡಲು ರೈತರಿಂದ ಅವರ ಬ್ಯಾಂಕ್‌ ಖಾತೆ ವಿವರ ಪಡೆಯಲಾಗಿತ್ತು. ಆದರೆ ಈ ಬಾರಿ ತೊಗರಿ ಸರದಿಗೆ ಬರುವಾಗ ರೈತರಿಂದ ಕೇವಲ ಫಹಣಿ ಉತಾರೆ, ಆಧಾರ್‌ ನಂಬರ್‌, ದೂರವಾಣಿ ಸಂಖ್ಯೆ ಮಾತ್ರ ಪಡೆಯಲಾಗಿದೆ. ರೈತರಲ್ಲಿ ಮುಜುಗುರ ಉಂಟಾಗಿ ಬ್ಯಾಂಕ್‌ ಖಾತೆ ಸಂಖ್ಯೆ ಪಡೆಯದ ಇವರು ನಮ್ಮ ಹಣ ಹೇಗೆ ನೀಡುತ್ತಾರೆ ಎಂದು ಪಾಳಿ ಬಂದ ತೊಗರಿಯನ್ನು ಕೊಡುವುದು ಬೇಡವೆಂದು ನಿರಾಕರಿಸಿ ಖಾಸಗಿ ವ್ಯಾಪಾರಿಗಳಿಗೆ ಕೊಡುತ್ತಿರುವ ಉದಾಹರಣೆ ಸಾಕಷ್ಟಿವೆ.

ಸರಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಆದೇಶ ಮಾಡಿದಾಗ ರಾತ್ರಿ ಹಗಲು ಲೆಕ್ಕಿಸದೆ ನಾ ಮುಂದೆ ತಾ ಮುಂದೆ ಎಂದು ಸರದಿ ಹಚ್ಚಿದ ರೈತರು ಬೆಂಬಲ ಬೆಲೆಗೆ ತೊರಿಯನ್ನು ಕೊಡಲು ಹಿಂದೇಟು ಹಾಕುತ್ತಿರುವುದಂತು ನಿಜ. ಒಟ್ಟನಲ್ಲಿ ಇಷ್ಟೆಲ್ಲ ಷರತ್ತುಗಳನ್ನು ನೋಡಿದರೆ ತೊಗರಿ ಪಾಳಿ ಹಚ್ಚುವಾಗ ಇದ್ದ ರೈತರ ಮುಖದಲ್ಲಿನ ಕಳೆ ಮಾರಾಟ ಮಾಡುವ ಸಮಯದಲ್ಲಿ ಕಾಣುತ್ತಿಲ್ಲ.

Advertisement

ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ತೊಗರಿ ಖರೀದಿ ಕೇಂದ್ರದಲ್ಲಿ ಯಾವುದೇ ಗದ್ದಲದ ವಾತಾವರಣ ಇಲ್ಲ, ಕೆಲಸವಿಲ್ಲದೆ ಹಮಾಲರು ಕೂಡುವ ಸ್ಥಿತಿ, ಒಂದೊಮ್ಮೆ ನಾವೇ ರೈತರ ಮನೆಗೆ ಹೊಗಿ ತೊಗರಿಯನ್ನ ತರುವ ಪ್ರಸಂಗ ಬಂದೊದಗಿದೆ. 
 ಶಾಂತು ಹಾದಿಮನಿ, ವ್ಯವಸ್ಥಾಪಕ, ಪಿಕೆಪಿಎಸ್‌ ಹೂವಿನಹಿಪ್ಪರಗಿ

ದಿನಕ್ಕೆ ನಾವು ಇಪ್ಪತ್ತು ರೈತರಿಗೆ ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ತೊಗರಿ ಪಾಳಿ ಬಂದಿದೆ. ತೊಗರಿಯನ್ನು ತಗೊಂಡು ಬನ್ನಿ ಎಂದಾಗ ಸರ್‌ ನಾವು ನಮ್ಮ ತೊಗರಿಯನ್ನು ಖಾಸಗಿ ವ್ಯಾಪಾರಸ್ಥರಿಗೆ ಕೊಡುತ್ತೇವೆ, ಇಲ್ಲ ನಾವು ಇನ್ನೂ ಧಾರಣಿ ಹೆಚ್ಚಾದಾಗ ಮಾರುತ್ತೇವೆ, ಈಗಾಗಲೆ ಮಾರಾಟ ಮಾಡಿದ್ದೇವೆ ಎಂಬ ಉತ್ತರಗಳು ಬರುತ್ತಿವೆ.
 ಅನಿಲಕುಮಾರ ದೇಸಾಯಿ, ವ್ಯವಸ್ಥಾಪಕ, ಪಿಕೆಪಿಎಸ್‌ ಕುದರಿ ಸಾಲವಾಡಗಿ

ಹತ್ತು ಹಲವು ಷರತ್ತುಗಳನ್ನು ವಿ ಧಿಸುವ ಸರಕಾರದ ಕ್ರಮಕ್ಕೆ ಹೆದರಿ ನಾವು ನಮ್ಮ ತೊಗರಿಯನ್ನು ಖಾಸಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಕೈಯಲ್ಲಿ ದುಡ್ಡು ಪಡೆದಿದ್ದೇವೆ.
ಕುದರಿ ಸಾಲವಾಡಗಿ, ರೈತ

ದಯಾನಂದ ಬಾಗೇವಾಡಿ

Advertisement

Udayavani is now on Telegram. Click here to join our channel and stay updated with the latest news.

Next