Advertisement

ಜಾಗೃತರಾಗದೆ ಮುಖ್ಯವಾಹಿನಿಗೆ ಬರೋದು ಕಷ್ಟ: ಮೂರ್ತಿ

11:53 AM Jun 25, 2017 | |

ದಾವಣಗೆರೆ: ಆದಿವಾಸಿಗಳು, ದಲಿತರು ಜಾಗೃತರಾಗದೇ ಹೋದರೆ, ಸಮಾಜದ ಮುಖ್ಯವಾಹಿನಿಗೆ ಬರುವ ಕನಸು ನನಸಾಗದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮೂರ್ತಿ ಬಣ)ಯ ಸಂಸ್ಥಾಪಕ ಡಾ| ಎನ್‌. ಮೂರ್ತಿ ಎಚ್ಚರಿಸಿದ್ದಾರೆ. 

Advertisement

ಶನಿವಾರ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಸಮಿತಿಯ ಜಿಲ್ಲಾ ಘಟಕ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯ 2ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ಸ್ಮರಣ ಸಂಚಿಕೆ ಬಿಡುಗಡೆ, ಸಾಧಕರಿಗೆ ಸನ್ಮಾನ, ಜಾನಪದ ಸಂಸ್ಕೃತಿ ಮತ್ತು ಜಾಗತಿಕರಣ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡಿದರು.

ನೂರಾರು ವರ್ಷಗಳಿಂದ ತುಳಿತಕ್ಕೆ ಒಳಗಾದ ಆದಿವಾಸಿ, ದಲಿತರು ಜಾಗೃತರಾಗಬೇಕಿದೆ. ಸಮಾಜದ ಮುಖ್ಯವಾಹಿನಿಗೆ ಬರುವ ಅವರ ಕನಸು ನನಸಾಗಬೇಕಾದರೆ ಹೆಚ್ಚಿನ ಮಟ್ಟದ ಜಾಗೃತಿ, ಸಂಘಟನೆ ಅಗತ್ಯ ಎಂದರು. ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. 

ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ವರದಿ ಆಂಗೀಕಾರಕ್ಕೆ ಸ್ಪೃಶ್ಯ ಸಮಾಜದವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ, ತಡೆಯುತ್ತಿದ್ದಾರೆ. ನಮ್ಮ ಸಮಾಜದ ಶಾಸಕ, ಸಚಿವರು ವರದಿ ಕುರಿತು ಯಾವುದೇ ದನಿ ಎತ್ತುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಪರಿಶಿಷ್ಟ ಜಾತಿಗೆ ಸುಪ್ರೀಂ ಕೋರ್ಟ್‌ ಶೇ.50ರಷ್ಟು ಮೀಸಲಾತಿ ಮಾತ್ರ ನೀಡಬೇಕು ಎಂದು ಹೇಳಿದೆ. ಆದರೆ, ತಮಿಳುನಾಡಿನಲ್ಲಿ ಪರಿಶಿಷ್ಠರಿಗೆ ಶೇ.69ರಷ್ಟು ಮೀಸಲಾತಿ ಕಲ್ಪಿಸಿದೆ. ಇದನ್ನೇ ನಮ್ಮ ರಾಜ್ಯದಲ್ಲೂ ಮಾಡಬೇಕಿದೆ. ನಮ್ಮ ರಾಜ್ಯದಲ್ಲಿ ಜನಸಂಖ್ಯೆ ಆಧರಿಸಿ, ಶೇ.70ರಷ್ಟು ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದರು. 

Advertisement

ಸುಪ್ರೀಂ ಕೋರ್ಟ್‌ನಲ್ಲಿ ಬಡ್ತಿ ಮೀಸಲಾತಿಗೆ ತಡೆಯಾಗಿದೆ. ಇದರಿಂದ 16 ಸಾವಿರ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರ ಈ ಅನ್ಯಾಯದ ಕುರಿತು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಬಡ್ತಿ ಮೀಸಲಾತಿ ತಡೆಗೆ ನ್ಯಾಯಾಲಯ ನೀಡಿರುವ ಆದೇಶದ ಮರು ಪರಿಶೀಲನೆಗೆ ಸರ್ಕಾರ ಮೇಲ್ಮನವಿಗೆ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು. 

ವಿರಕ್ತಮಠ ಬಸವಪ್ರಭು ಸ್ವಾಮೀಜಿ ಮಾತನಾಡಿ, ಕೃಷಿ ಪರಂಪರೆ ಹೊಂದಿರುವ ದೇಶದಲ್ಲಿ ಕ್ಷಣಿಕ ಸುಖಕ್ಕಾಗಿ ಜನರು ಮಾರು ಹೋಗುತ್ತಿದ್ದಾರೆ. ಇದರಿಂದ ತಮ್ಮ ಆಸ್ತಿ ಪಾಸ್ತಿ, ಸಂಪತ್ತು ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಕೃಷಿಯಲ್ಲಿ ಆಸಕ್ತಿ ಕುಂಠಿತಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮವನ್ನು ಎದುರಿಸುವ ಪರಿಸ್ಥಿತಿ ಬರಲಿದೆ ಎಂದರು. 

ಪ್ರೊ.ಎ.ಬಿ.ರಾಮಚಂದ್ರಪ್ಪ, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್‌. ಮಲ್ಲೇಶಪ್ಪ ಕುಕ್ಕವಾಡ, ಮುಸ್ಲಿಂ ಸಮಾಜದ ಮುಖಂಡ ಜೆ.ಅಮಾನುಲ್ಲಾ ಖಾನ್‌, ಪತ್ರಕರ್ತ ವೀರಪ್ಪ ಎಂ.ಬಾವಿ, ರಿಯಲ್‌ ಎಸ್ಟೇಟ್‌ ಉದ್ಯಮಿ ಅಜಯ್‌ ಕುಮಾರ್‌, ಪ್ರೊ. ಡಿ.ಅಂಜಿನಪ್ಪ, ಗಂಗಾಧರ್‌ ಬಿ.ಎಲ್‌.ನಿಟ್ಟೂರು, ಜಿ.ಎಚ್‌. ಶಂಭುಲಿಂಗಪ್ಪ ವೇದಿಕೆಯಲ್ಲಿದ್ದರು. 

ವಿವಿಧ ಸಾಧಕರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌, ಡಾ.ಜಗಜೀವನ್‌ ರಾಂರ ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ, ಡಾ.ಎನ್‌.ಮೂರ್ತಿ ರಾಜ್ಯ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ 2ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಹೊರತಂದ ಸಾಧನೆ ಹಾದಿಯಲ್ಲಿ ಸಂಗಮವಾಣಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next