ಹುರ್ಘಡ: ಈಜಿಪ್ಟ್ ನ ಹುರ್ಘಡ ನಗರ ಕೆಂಪು ಸಮುದ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಸ್ಕೂಬಾ ಡೈವಿಂಗ್ ಬಹಳ ಪ್ರಸಿದ್ಧ. ಈ ಖ್ಯಾತ ಪ್ರವಾಸೀ ಕೇಂದ್ರದಲ್ಲಿ ದುರಂತವೊಂದು ಕೆಲವೇ ಸೆಕೆಂಡ್‌ಗಳಲ್ಲಿ ನಡೆದುಹೋಗಿದೆ. ಜನ ತತ್ತರಿಸಿ ಹೋಗಿದ್ದಾರೆ. ರಷ್ಯಾದ 23 ವರ್ಷದ ಪ್ರವಾಸಿ ವ್ಲಾಡಿಮಿರ್ ಪೊಪೊವ್ ತಮ್ಮ ರೆಸಾರ್ಟ್‌ನಿಂದ ಹೊರಬಂದು ಈಜಲು ಸಮುದ್ರ ಪ್ರವೇಶಿಸಿದ್ದಾರೆ.
ಕೂಡಲೇ ನುಗ್ಗಿ ಬಂದ ಟೈಗರ್ ಶಾರ್ಕ್ (ಶಾರ್ಕ್‌ಗಳಲ್ಲೇ ಒಂದು ಪ್ರಭೇದ) ಯುವಕನನ್ನು ಕಚ್ಚಿ ಎಳೆದೊಯ್ದಿದೆ. ಯುವಕ ಅಪ್ಪಾ ಅಪ್ಪಾ ಎಂದು ಕೂಗಿಕೊಳ್ಳುತ್ತಲೇ ಇದ್ದ, ಅಪ್ಪ ಪೊಪೊವ್ ಅದನ್ನು ಅಸಹಾಯಕತೆಯಿಂದ ನೋಡುತ್ತಲೇ ಇದ್ದರು. ಮಗ ಕಣ್ಣೆದುರೇ ಸಾವನ್ನಪ್ಪಿದ!
ಇತರೆ ಪ್ರವಾಸಿಗಳು ತಕ್ಷಣ ಜಾಗೃತರಾದರು, ಆದರೆ ಯಾರೂ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಈಜಿಪ್ಟ್ ಅಧಿಕಾರಿಗಳು ಕೆಂಪು ಸಮುದ್ರದ 74 ಕಿ.ಮೀ. ಉದ್ದದವರೆಗಿನ ಕರಾವಳಿ ತೀರವನ್ನು ಭಾನುವಾರದವರೆಗೆ ಬಂದ್ ಮಾಡಿದ್ದಾರೆ. ಮುಂದಿನ ನಿರ್ಧಾರವನ್ನು ಸದ್ಯದಲ್ಲೇ ತೆಗೆದುಕೊಳ್ಳಲಾಗುತ್ತದೆ. ಈಜಿಪ್ಟ್ ನ ಅಧಿಕಾರಿಗಳಿಂದ ಪ್ರವಾಸಿಗಳವರೆಗೆ ಆಘಾತಗೊಂಡಿದ್ದಾರೆ. ಶಾರ್ಕ್ ಈ ರೀತಿಯ ಒಂದು ಅನಾಹುತ ಮಾಡುತ್ತದೆಂದು ಯಾರೂ ಭಾವಿಸಿರಲಿಲ್ಲ. ಸಾಮಾನ್ಯವಾಗಿ ಇಂತಹ ಘಟನೆಗಳು ಇಲ್ಲಿ ಸಂಭವಿಸುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಈಜಿಪ್ಟ್ ನ ಪರಿಸರ ಸಚಿವಾಲಯದ ಸಿಬ್ಬಂದಿ ನಂತರ ಶಾರ್ಕ್ ಅನ್ನು ಹಿಡಿದಿದ್ದಾರೆ. ಅದನ್ನು ಪ್ರಯೋಗಾಲಯದಲ್ಲಿ ಇಟ್ಟು ಯಾವ ಕಾರಣಕ್ಕೆ ಶಾರ್ಕ್ ಈ ಕೃತ್ಯ ಮಾಡಿದೆ ಎಂದು ಪರೀಕ್ಷಿಸುತ್ತಿದ್ದಾರೆ. ಭೂಮಿಯ ಮೇಲೆ ರಕ್ತಸಿಕ್ತ ಶಾರ್ಕ್ ಬಿದ್ದುಕೊಂಡಿರುವ ಚಿತ್ರಗಳು ಅಂತರ್ಜಾಲದಲ್ಲಿ ಓಡಾಡುತ್ತಿವೆ.
ಅಪರೂಪದ ದಾಳಿ ಪ್ರಕರಣ: ಹುರ್ಘಡದ ಕೆಂಪು ಸಮುದ್ರದ ಕರಾವಳಿಯಲ್ಲಿ ಶಾರ್ಕ್ ದಾಳಿ ಬಹಳ ಅಪರೂಪ. 2022ರಲ್ಲಿ ಕೆಲವೇ ದಿನಗಳಲ್ಲಿ ಎರಡು ಭೀಕರ ದಾಳಿಗಳಾಗಿದ್ದವು. ಆಸ್ಟ್ರಿಯ, ರೊಮೇನಿಯದ ಇಬ್ಬರು ಪ್ರಜೆಗಳು ಹತ್ಯೆಗೀಡಾಗಿದ್ದರು.