ತಾಂಬಾ: ಪ್ರಪಂಚದಲ್ಲಿ ಏನಾದರೂ ಕದಿಯಬಹುದು. ಆದರೆ ಕಲಿತ ವಿದ್ಯೆ ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರು ಭೌತಿಕ ಸಂಪತ್ತಿನ ಆಸ್ತಿ ಗಳಿಸುವುದಕ್ಕಿಂತ ವಿದ್ಯೆಯನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಚಾಂದಕವಠೆ ಎಸ್‌ಪಿ ಹೈಸ್ಕೂಲ್ ಮುಖ್ಯಶಿಕ್ಷಕ ಎಸ್.ಬಿ. ಹಂಚನಾಳ ಹೇಳಿದರು.
ಅಥರ್ಗಾ ಗ್ರಾಮದ ಜ್ಞಾನಭಾರತಿ ವಿದ್ಯಾಮಂದಿರ ಪೂರ್ವ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪೌಢ ಶಾಲೆಯ 18ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ನೈತಿಕ ಮೌಲ್ಯ, ರಾಷ್ಟ್ರಪ್ರೇಮ ಬೆಳೆಸಬೇಕೆಂದು ಸಲಹೆ ನೀಡಿದರು.
ರೇವಣಸಿದ್ದಪ್ಪ ಬಂಗಾರಿ ಮಾತನಾಡಿ, ಸಮಾಜದಿಂದ ನಾವು ಏನನ್ನೂ ನಿರೀಕ್ಷಿಸದೇ ಸಮಾಜ ನಮ್ಮಿಂದ ನಿರೀಕ್ಷಿಸಿದ್ದನ್ನು ಈಡೇರಿಸಬೇಕು. ಬದುಕುವುದಕ್ಕೆ ನೂರಾರು ಮಾರ್ಗಗಳಿವೆ. ಆದರೆ ಬದುಕನ್ನು ಕಟ್ಟಿಕೊಡುವ ಮಾರ್ಗದ ಆಯ್ಕೆಯಲ್ಲಿ ಎಡವದೇ ಸರಿಯಾದ ದಾರಿಯಲ್ಲಿ ಹೋದರೆ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಅಥರ್ಗಾ ವಿರಕ್ತಮಠದ ಮುರಘೇಂದ್ರ ಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋದರೆ ಶೇ.100ರಷ್ಟು ಫಲಿತಾಂಶ ಸಾಧಿಸಲು ಸಾಧ್ಯ. ಅಲ್ಲದೆ ಮಕ್ಕಳು ಕೂಡ ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು. ಭಾರತಿ ಶಿವುರ ವರದಿ ವಾಚಿಸಿದರು. ಗ್ರಾಪಂ ಅಧ್ಯಕ್ಷ ಗಿರೀಶ ಚಾಂದಕವಠೆ ಉದ್ಘಾಟಿಸಿದರು. ತಾಪಂ ಸದಸ್ಯ ಗಣಪತಿ ಬಾಣಿಕೋಲ್, ಶಿವಾನಂದ ನಿಂಬಾಳ, ಶರಣಪ್ಪ ಸಿಂದಗಿ, ನಾಗುಗೌಡ ಪಾಟೀಲ, ಶ್ರೀಶೈಲ ನಾಗಣಸೂರ, ವಿದ್ಯಾಧರ ಜೇವುರ, ಪರಶುರಾಮ ಜಿಗಜಿಣಿಗಿ, ಸುನೀಲ ರಬಶಟ್ಟಿ, ಜಯರಾಮ ರಾಠೊಡ, ಐ.ಆರ್. ಕಲ್ಲೂರಮಠ, ಶರಣು ಗುಣಕಿ ಇದ್ದರು. ಸೀಮಾ ಹಳ್ಳಿ ಪ್ರಾರ್ಥಿಸಿದರು. ಸಿ.ಎಸ್. ಮೇತ್ರಿ ಸ್ವಾಗತಿಸಿದರು. ತುಕಾರಾಮ ಚವ್ಹಾಣ ನಿರೂಪಿಸಿದರು. ಕೆ.ಟಿ. ಜಾಧವ ವಂದಿಸಿದರು.