ಅದೊಂದು ರಜೆಯ ದಿನ. ಮಳೆ ಸುರಿಯುತ್ತಿತ್ತು. ಬಾಲ್ಕನಿಯಲ್ಲಿ ಕುಳಿತು ಟೀ ಕುಡಿಯುತ್ತಿದ್ದೆ. ಹಾಗೆ ಮಳೆ ನೋಡಿಕೊಂಡು ಕೂರುವುದು ನನ್ನ ನೆಚ್ಚಿನ ಹವ್ಯಾಸ. ಸುರಿಯುವ ಮಳೆಯಲ್ಲಿ ಎಲ್ಲವನ್ನೂ ಮರೆತು ಲೀನವಾಗುವ ಭಾವ. ಧೋ ಎಂದು ಸುರಿಯುವ ಶಬ್ದದಲ್ಲಿ ಕಳೆದೇ ಹೋಗುವ ತನ್ಮಯತೆ ಇದೆ ಎನಿಸುತ್ತದೆ ಪ್ರತೀ ಬಾರಿ.
ಮನೆ ಎದುರಿನ ರಸ್ತೆ ನೋಡುತ್ತಿದ್ದೆ. ಬಣ್ಣ, ಬಣ್ಣದ ಕೊಡೆ ಚಲಿಸುವುದು ಕಾಣಿಸುತ್ತಿತ್ತು. ಕೆಲವರು ಮಳೆಯನ್ನು ಆಸ್ವಾದಿಸಿಕೊಂಡು ಸಾಗುತ್ತಿದ್ದರೆ, ಇನ್ನು ಕೆಲವರು ಕೊಡೆ ಇದ್ದರೂ ಒದ್ದೆಯಾಗುವ ಸುಖ ಅನುಭವಿಸುತ್ತಿದ್ದರು. ಇನ್ನು ಕೆಲವರು ಅಸಮಾಧಾನಗೊಂಡಂತಿತ್ತು. ಒಟ್ಟಿನಲ್ಲಿ ಒಟ್ಟು ಸಮಾಜದ ಪ್ರತಿನಿಧಿಗಳೇ ಇದ್ದರು ಅಲ್ಲಿ.
ಮಳೆ ಜೋರಾದ ಹಾಗೆ ಇಡೀ ಬೀದಿ ನಿರ್ಮಾನುಷ್ಯವಾಯಿತು. ಮಳೆಯಲ್ಲಿ ನೆನೆದು ಚಳಿಯಲ್ಲಿ ನಡುಗುತ್ತಿದ್ದ ಬೀದಿ ನಾಯಿಯೊಂದು ಛಾವಣಿಯ ಆಶ್ರಯ ಪಡೆಯಲು ಅಂಗಡಿ ಹೊಕ್ಕಿತು. ಮಾಲಕ ಕೋಲು ಎತ್ತಿ ಅದನ್ನು ಓಡಿಸಿದ. ರಸ್ತೆಗೆ ಬಂದ ನಾಯಿ ಏನೂ ತೋಚದೆ ನಡುಗುತ್ತಾ ನಿಂತಿತ್ತು. ಪಾಪ ಎನಿಸಿ ಮನೆಗೆ ಕರೆದುಕೊಂಡು ಬರಲು ಯೋಚಿಸಿದೆ.
ಆಗಲೇ ಎದುರು ಮನೆಯ ಹುಡುಗಿ ಹೊರಬಂದವಳೇ ಮಕ್ಕಳನ್ನು ಎತ್ತುವ ಹಾಗೆ ನಾಯಿಯನ್ನು ಎತ್ತಿಕೊಂಡಳು. ಅದರ ನೆತ್ತಿ ಸವರಿ ಹೆಗಲಲ್ಲಿ ತಬ್ಬಿ ಹಿಡಿದು ಮನೆಗೆ ಕರೆ ತಂದಳು. ಸಿಟೌಟ್‌ನಲ್ಲಿ ನಾಯಿಯನ್ನು ಕೂರಿಸಿ ಟವಲ್ ತಂದು ಅದರ ಮೈ ಒರೆಸಿ ಅದಕ್ಕೆ ಮಲಗಲು ಬೆಚ್ಚನೆ ಬಟ್ಟೆ ಹಾಸಿದಳು. ಒಳಗೆ ಹೋಗಿ ಬಟ್ಟಲಲ್ಲಿ ಹಬೆಯಾಡುವ ಬಿಸಿ ಬಿಸಿ ಹಾಲು ತಂದು ನಾಯಿ ಮುಂದೆ ಇರಿಸಿದಳು. ನಾಯಿ ಕುಡಿದು ಕೃತಜ್ಞತೆಯಿಂದ ಅವಳನ್ನೊಮ್ಮೆ ನೋಡಿ ಕಾಲ ಬುಡದಲ್ಲಿ ಮಲಗಿತು. ಆ ಕ್ಷಣ ಇಂತಹ ಸಣ್ಣ ಸಣ್ಣ ಕಾರ್ಯಗಳಿಂದಲೂ ಮನುಷ್ಯತ್ವ ಸಾರ್ಥಕತೆ ಪಡೆಯಲು ಸಾಧ್ಯ ಎನಿಸಿತು.
ಆತ್ಮತೃಪ್ತಿ ಮುಖ್ಯ: ಅಪರಿಚಿತ ಊರಲ್ಲಿ ದಿಕ್ಕೆಟ್ಟು ನಿಂತಾಗಲೋ, ಮೊಬೈಲ್, ಪರ್ಸ್ ಮುಂತಾದ ವಸ್ತು ಕಳೆದುಕೊಂಡಾಗಲೋ ಅಥವಾ ದಾರಿ ಮಧ್ಯೆ ಗಾಡಿ ಕೆಟ್ಟು ನಿಂತಾಗಲೋ ಇಲ್ಲ ಇನ್ಯಾವಾಗಲಾದರೂ ನಿಮ್ಮ ಸಹಾಯಕ್ಕೆ ಯಾರಾದರೂ ಬಂದೇ ಬರುತ್ತಾರೆ. ಹಾಗಂತ ನೀವು ನೆರವಾಗುವಾಗ ಯಾವುದೇ ನಿರೀಕ್ಷೆ ಬೇಡ. ಆದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿಗೆ, ಆತ್ಮತೃಪ್ತಿಗೆ ಅಪರಿಚಿತರಾದರೂ ನೆರವಾಗಿ…..
ಸಹಾಯಹಸ್ತ ಚಾಚಿ
ಎಲ್ಲಿಗಾದರೂ ಹೋಗುತ್ತಿದ್ದಾಗ ಯಾರಾದರೂ ಸಣ್ಣ-ಪುಟ್ಟ ಸಹಾಯ ಕೇಳುತ್ತಾರೆ. ಅಥವಾ ಅಪರಿಚಿತರಾದರೂ ಕಷ್ಟಪಡುತ್ತಿರುವುದನ್ನು ನೋಡಿ ಸಹಾಯ ಮಾಡಬೇಕು ಎನಿಸುತ್ತದೆ. ಆದರೆ ಸಮಯ ಮೀರಿತು, ಇಲ್ಲ ಬೇರೆ ಏನಾದರೂ ಕಾರಣಕ್ಕೆ ನೀವು ಅದನ್ನು ನಿರ್ಲಕ್ಷಿಸಿ ಮುಂದೆ ಹೋಗುತ್ತೀರಿ ಅಂದಿಟ್ಟುಕೊಳ್ಳಿ. ಆ ದಿನ ನಿಮ್ಮ ಮನಸ್ಸಿಗೆ ಏನೋ ಒಂದು ಕಸಿವಿಸಿ ತಪ್ಪುವುದಿಲ್ಲ. “ಛೇ! ನಾನು ಸಹಾಯ ಮಾಡಬೇಕಿತ್ತು. ಹಾಗೇ ಮುಖ ತಿರುಗಿಸಿ ಬಂದದ್ದು ಸರಿಯಲ್ಲ’ ಎನ್ನುವ ಅಂಶವೇ ನಿಮ್ಮನ್ನು ಕೊರೆಯತೊಡಗುತ್ತದೆ. ಆದ್ದರಿಂದ ನಿಮ್ಮಿಂದ ಆಗುವ ಸಹಾಯ ಖಂಡಿತಾ ಮಾಡಿ.
- ರಮೇಶ್ ಬಳ್ಳಮೂಲೆ