Advertisement

ಮಕ್ಕಳಿಗೂ ಇರಲಿ ಒಂದು ಪ್ರಣಾಳಿಕೆ!

12:24 AM Apr 10, 2019 | Lakshmi GovindaRaju |

ಬೆಂಗಳೂರು: ಮಕ್ಕಳನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುವುದು ಕಡಿಮೆ. ಅವರಿಗಾಗಿ ಪ್ರಣಾಳಿಕೆ ದೂರದ ಮಾತು. ಮಕ್ಕಳ ಹಕ್ಕು, ಆಸಕ್ತಿ ಮತ್ತು ಅವಶ್ಯಕತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಬಾರಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಮಕ್ಕಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಒತ್ತಾಯಿಸಿದೆ.

Advertisement

ರಾಜ್ಯದ 30 ಜಿಲ್ಲೆಗಳಲ್ಲಿ 120ಕ್ಕೂ ಹೆಚ್ಚು ಸಂಸ್ಥೆಗಳು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ (ಗುಂಪು)ಕೇಂದ್ರದೊಂದಿಗೆ ಕೈಜೋಡಿಸಿವೆ. “ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಲವು ಭರವಸೆಗಳನ್ನು ನೀಡುತ್ತವೆ. ಆದರೆ, ಮಕ್ಕಳ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ.

ಅವರನ್ನು ಮುಂದಿನ ಪ್ರಜೆಗಳು ಎಂದು ಪರಿಗಣಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಮುಂದಿನ ಪ್ರಜೆಗಳು ಮುಂದೆ ನೋಡಿಕೊಳ್ಳೋಣ ಎನ್ನುವ ಉದಾಸೀನತೆಯೂ ಇದರ ಹಿಂದೆ ಇದೆ’ ಎನ್ನುತ್ತಾರೆ ಚೆಲ್ಡ್‌ ರೈಟ್ಸ್‌ ಟ್ರಸ್ಟ್‌ನ ಸಂಸ್ಥಾಪಕ ವಾಸುದೇವ ಶರ್ಮಾ.

“2011ರ ಜನಗಣತಿಯ ಅನ್ವಯ ದೇಶದಲ್ಲಿ 50 ಕೋಟಿಯಷ್ಟು ಮಕ್ಕಳು 18 ವರ್ಷದ ಒಳಗಿನವರಾಗಿದ್ದಾರೆ. ಇವರಲ್ಲಿ ಶೇ.70 ಮಕ್ಕಳು ಗ್ರಾಮೀಣ ಪ್ರದೇಶದಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು ಮಕ್ಕಳನ್ನು ಕಡೆಗಣಿಸಿವೆ’ ಎನ್ನುವುದು ಅವರ ಆರೋಪ.

ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಮಕ್ಕಳ ಬಗ್ಗೆ ಕಾಳಜಿವಹಿಸಬೇಕು. ಮಕ್ಕಳಿಗೆ ಇರುವ ಅವಕಾಶಗಳನ್ನು ನ್ಯಾಯಬದ್ಧವಾಗಿ ನೀಡಬೇಕು ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಅಭ್ಯರ್ಥಿಗಳ ಮುಂದೆ ಅಜೆಂಡಾ ಮಂಡಿಸಿದೆ.

Advertisement

ಮಕ್ಕಳ ಹಕ್ಕುಗಳ ಪ್ರಣಾಳಿಕೆ ಪ್ರಮುಖಾಂಶಗಳು
* ಮಕ್ಕಳ ಸಮಗ್ರ ನೀತಿಯನ್ನು ಹೊರಡಿಸುವುದರ ಮೂಲಕ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಕಳ್ಳ ಸಾಗಾಣಿಕೆ ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡಬೇಕು.

* 0-3 ವರ್ಷದ ಒಳಗಿನ ಮಕ್ಕಳ ಸಮಗ್ರ ಅಭಿವೃದ್ಧಿ, ಆರೋಗ್ಯ, ಬೆಳವಣಿಗೆ ಅಪೌಷ್ಠಿಕತೆ ಮತ್ತು ರಕ್ಷಣೆ ವಿಷಯ ಸಾರ್ವತ್ರಿಕ ಮತ್ತು ಉಚಿತವಾಗಬೇಕು.

* ಸಮನ್ವಯ ಶಿಕ್ಷಣ ಹಾಗೂ ಸಮಾನ ಶಿಕ್ಷಣ ಹಿನ್ನೆಲೆ ಕಡ್ಡಾಯ ಶಿಕ್ಷಣ ಆರ್‌ಟಿಇ ಕಾಯ್ದೆ 2009ಕ್ಕೆ ಸೂಕ್ತ ತಿದ್ದುಪಡಿಯನ್ನು ತಂದು ಹುಟ್ಟಿನಿಂದ 18 ವರ್ಷದ ಒಳಗಿನ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸದಿಂದ ಪಿಯು ವರೆಗೆ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಬೇಕು.

* ಮಕ್ಕಳಿಗೆ ಪ್ರತ್ಯೇಕ ಆರೋಗ್ಯ ನೀತಿಯನ್ನು ಜಾರಿಗೆ ತರಬೇಕು.

* ಲೋಕಸಭೆ ಮತ್ತು ವಿಧಾನಸಭೆ ನಡವಳಿಕೆಗಳಲ್ಲಿ ತಿದ್ದುಪಡಿ ಮಾಡಿ ಅಧಿವೇಶನಗಳಲ್ಲಿ ಮೂರರಿಂದ ನಾಲ್ಕುದಿನ ಮಕ್ಕಳ ಭವಿಷ್ಯದ ಬಗ್ಗೆ ಚರ್ಚೆಯಾಗಬೇಕು.

* ಹದಿಹರೆಯದವರಿಗೆ ಆಪ್ತಸಮಾಲೋಚನಾ ಸಹಾಯ ಕೇಂದ್ರಗಳನ್ನು ತೆರೆಯಬೇಕು.

* ಬಿಸಿಯೂಟದಲ್ಲಿ ಪೌಷ್ಠಿಕಾಂಶ ಒಳಗೊಂಡ ಸ್ಥಳೀಯ ಧಾನ್ಯಗಳನ್ನು ಬಳಸಬೇಕು ಎನ್ನುವುದು.

Advertisement

Udayavani is now on Telegram. Click here to join our channel and stay updated with the latest news.

Next