Advertisement
ಕಳೆದ ವರ್ಷ ಮೇ 29ರಂದು ನಗರದಲ್ಲಿ ಸುರಿದ ಮಹಾ ಮಳೆಯ ಸಂದರ್ಭ ಅನುಭವಿಸಿದ್ದ ತೊಂದರೆಯನ್ನು “ಸುದಿನ’ ಜತೆಗೆ ಕುದ್ರೋಳಿ ನಿವಾಸಿ ಭವಾನಿ ಅವರು ಈ ರೀತಿ ನೆನಪಿಸಿಕೊಂಡರು. “ಆ ಮಳೆಗೆ ನಮ್ಮ ಮನೆಯ ಸುಮಾರು 50 ಸಾವಿರ ರೂ. ಮೌಲ್ಯದ ವಸ್ತುಗಳು ಹಾಳಾಗಿದ್ದವು. ಆದರೆ, ಸರಕಾರದಿಂದ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ’ ಎಂದು ಅವರು ನೋವು ತೋಡಿಕೊಂಡರು.
Related Articles
Advertisement
ಮಹಾಮಳೆಗೆ ಇದೇ ರಸ್ತೆಯಲ್ಲಿರುವ ಲಕ್ಷ್ಮಣ್ ಅವರ ಮನೆ ತುಂಬ 5 ಅಡಿ ಎತ್ತರಕ್ಕೆ ನೀರು ಬಂದಿದ್ದು, ಮನೆಯೊಳಗಿದ್ದ ಕಂಪ್ಯೂಟರ್ ಸಹಿತ ಬೆಲೆಬಾಳುವ ವಸ್ತುಗಳು ನೀರಿಗೆ ಕೊಚ್ಚಿ ಹೋಗಿದ್ದವು. ಲಕ್ಷ್ಮಣ್ ಅವರು ತಮ್ಮ ಮನೆಯಲ್ಲಿಯೇ ಕೃಷಿ ಪಂಪ್‌ಸೆಟ್ ರಿಪೇರಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಗ್ರಾಹಕರ ಪಂಪ್‌ಸೆಟ್‌ಗಳಿದ್ದವು. ಅವೆಲ್ಲವೂ, ಮಳೆ ನೀರಿಗೆ ಹಾನಿಯಾಗಿದ್ದವು. ತನ್ನ ಸ್ವಂತ ಖರ್ಚಿನಿಂದ ಗ್ರಾಹಕರಿಗೆ ಪಂಪ್‌ಸೆಟ್ ನೀಡಬೇಕಾಯಿತು. ಲಕ್ಷ್ಮಣ್ ಅವರು ಹೇಳುವ ಪ್ರಕಾರ ಅವರಿಗೆ ಮಳೆಯಿಂದ ಸುಮಾರು 8 ಲಕ್ಷ ರೂ. ನಷ್ಟು ಸ್ವತ್ತು ಹಾನಿಯಾಗಿತ್ತು.
ಕೊಟ್ಟಾರ ಚೌಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿತ್ತು. ಇಲ್ಲಿನ ಹೊಟೇಲ್‌ಗಳು, ಜೆರಾಕ್ಸ್ ಅಂಗಡಿ, ದಿನಸಿ ಅಂಗಡಿ, ವಾಹನಗಳ ಶೋರೂಂಗಳಿಗೆ ನೀರು ಬಂದು ಅಪಾರ ನಷ್ಟ ಉಂಟಾಗಿತ್ತು. ಕೊಟ್ಟಾರ ಚೌಕಿಯಲ್ಲಿರುವ ಜೆರಾಕ್ಸ್ ಅಂಗಡಿಯ ಯತೀಶ್ “ಸುದಿನ’ ಜತೆ ಮಾತನಾಡಿ, ಭಾರೀ ಮಳೆಗೆ ನಮ್ಮ ಅಂಗಡಿಯೊಳಗೆ ನೀರು ನುಗ್ಗಿತ್ತು. ಜೆರಾಕ್ಸ್ ಯಂತ್ರ ಸಹಿತ ಇನ್ನಿತರ ಪರಿಕರಗಳಿಗೆ ಹಾನಿಯಾಗಿತ್ತು. ಪರಿಹಾರ ಸಂಬಂಧ ಸ್ಥಳೀಯಾಡಳಿತಕ್ಕೆ ಅರ್ಜಿ ಹಾಕಿದ್ದೆವು. ಆದರೆ, ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ.
ಮನೆಯ ಅಡಿಪಾಯ ಕುಸಿದಿದೆಭಾರೀ ಮಳೆಗೆ ಕುದ್ರೋಳಿ ನಿವಾಸಿ ಭವಾನಿ ಅವರ ಮನೆಯ ಅಡಿಪಾಯ ಕುಸಿದು ಹೋಗಿತ್ತು. ಇಂದಿಗೂ ಅದು ಅದೇ ಪರಿಸ್ಥಿತಿಯಲ್ಲಿದೆ. ಮತ್ತೂಮ್ಮೆ ಜೋರು ಮಳೆ ಬಂದರೆ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಇನ್ನು, ಮನೆಯ ಒಳಗಡೆ ನೀರು ಹೋಗಿ ಮಣ್ಣಿನ ಗೋಡೆ ಬಿರುಕು ಬಿಟ್ಟಿತ್ತು. ಇದೀಗ ಬಿರುಕುಬಿಟ್ಟಲ್ಲಿಗೆ ಸಿಮೆಂಟ್ ತೇಪೆ ಹಾಕಲಾಗಿದೆ. 41.38 ಲಕ್ಷ ರೂ. ನಷ್ಟ
ಕಳೆದ ಬಾರಿಯ ಮಹಾಮಳೆಗೆ ಪಾಲಿಕೆ ವ್ಯಾಪ್ತಿಯಲ್ಲಿ 16 ಮನೆಗಳು ಸಂಪೂರ್ಣ ನಾಶವಾಗಿದ್ದು, 41.38 ಲಕ್ಷ ರೂ. ನಷ್ಟ ಉಂಟಾಗಿತ್ತು. ಅಂದಿನ ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಅವರು ನಗರದಲ್ಲಿ ಮಳೆಯಿಂದ ಹಾನಿಯುಂಟಾದ ಕೆಲವು ಪ್ರದೇಶಕ್ಕೆ ಭೇಟಿ ನೀಡಿ ಬಿಜೈ ಆನೆಗುಂಡಿಯಲ್ಲಿ ಮನೆ ಕಳೆದುಕೊಂಡಿದ್ದ ಭವಾನಿ ಮತ್ತು ಅನುರಾಧಾ ಎಂಬವವರಿಗೆ 1 ಲಕ್ಷ 19 ಸಾವಿರ ರೂ. ಪರಿಹಾರ ನೀಡಿದ್ದರು. ಇನ್ನುಳಿದಂತೆ ಹಾನಿಗೊಳಗಾದ ಮನೆಗಳಿಗೆ ಇನ್ನೂ, ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ. ಮತ್ತೂ ಕೆಲವು ವಾಣಿಜ್ಯ ಮಳಿಗೆಗಳಿಗೂ ಪರಿಹಾರವಿನ್ನೂ ಸಿಕ್ಕಿಲ್ಲ. ಆತಂಕವಾಗುತ್ತದೆ
ಕಳೆದ ಬಾರಿಯ ಮಳೆ ಯೋಚಿಸಿದರೆ ಇಂದಿಗೂ ಆತಂಕವಾಗುತ್ತದೆ. ಸ್ಥಳೀಯಾಡಳಿತ ಇನ್ನೂ, ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಂಡಿಲ್ಲ. ಕೇವಲ ಕಾಟಾಚಾರಕ್ಕಾಗಿ ಕುದ್ರೋಳಿಯಲ್ಲಿ ಹರಿಯುವ ತೋಡಿನ ಹೂಳು ತೆಗೆದಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೃತಕ ನೆರೆ ಬಂದರೂ ಆಶ್ಚರ್ಯವಿಲ್ಲ.
– ಪುಷ್ಪಾ, ಕುದ್ರೋಳಿ ನಿವಾಸಿ