Advertisement

ಆ ಗೆಜ್ಜೆಯಿಲ್ಲದೇ ಬದುಕೇ ಸಪ್ಪೆ ಎನಿಸಿತ್ತು!

06:00 AM Aug 21, 2018 | |

ರಜೆ ಮುಗಿಸಿ ಕಾಲೇಜಿಗೆ ಬಂದು ಮಾಡಿದ ಮೊದಲ ಕೆಲಸವೇ ಗೆಜ್ಜೆ ಪ್ರದರ್ಶನ. ಗೆಜ್ಜೆ ಕಾಣದಿದ್ದರೆ ಎಂದು ಉದ್ದದ ಚೂಡಿದಾರ್‌ ಬಿಟ್ಟು ಸ್ಕರ್ಟ್‌ ಹಾಕಿದ್ದಾಯ್ತು. ಮಣಿಪಾಲದಲ್ಲಿ ನನ್ನ ಸಹಪಾಠಿಗಳು “ಪ್ರಟ್ಟಿ’, “ಬ್ಯೂಟಿಪುಲ್‌’ ಎಂದು ಉದ್ಗಾರ ತೆಗೆದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು. 

Advertisement

“ಏ, ಬಂದ್ಲು’ ಎಂದು ಹಾಸ್ಟೆಲ್ಲಿನಲ್ಲಿ ಹುಡುಗಿಯರೆಲ್ಲಾ ಪಿಸುಗುಡುತ್ತಿದ್ದರು. ಎಲ್ಲರ ಮೆಚ್ಚುಗೆ-ಆಸೆ ಮಿಶ್ರಿತ ನೋಟ ನನ್ನತ್ತಲೇ! ಯಾವುದನ್ನೂ ಲೆಕ್ಕಿಸದ ಹಾಗೆ ನಾನು ಮಾತ್ರ ಘನಗಂಭೀರಳಾಗಿ ನಡೆಯುತ್ತಿದ್ದೆ. ಮನಸ್ಸು ಮಾತ್ರ “ಯಾಹೂ!’ ಎಂದು ಭೂಮಿಯಿಂದ ಜಿಗಿದು ಆಕಾಶದಲ್ಲಿ ಚಿಮ್ಮಿ ಕುಣಿಯುತ್ತಿತ್ತು. ಅಷ್ಟಕ್ಕೂ ಎಲ್ಲರ ಗಮನ ಸೆಳೆಯುವ ಘನಂದಾರಿ ಕೆಲಸವನ್ನೇನೂ ನಾನು ಮಾಡಿರಲಿಲ್ಲ. ಘಲ್‌ ಘಲ್‌ ಎನ್ನುವ ಗೆಜ್ಜೆಯನ್ನು ಕಟ್ಟಿಕೊಂಡು ಬಂದಿದ್ದೆ. ಹೂವಿನಿಂದ ನಾರೂ ಸ್ವರ್ಗಕ್ಕೆ ಎನ್ನುವ ಹಾಗೆ ಅದರಿಂದ ನನಗೂ ಗೌರವ!

ಅದೇನೋ, ಬುದ್ಧಿ ಬಂದಾಗಲಿಂದ ಗೆಜ್ಜೆ ಎಂದರೆ ಎಲ್ಲಿಲ್ಲದ ಪ್ರೀತಿ ನನಗೆ. ಮನೆಯಲ್ಲಿ ಪುಟ್ಟ ತಂಗಿ ಹಾಸಿಗೆಯಲ್ಲಿ ಮಲಗಿ ಕಾಲು ಕುಣಿಸುವಾಗ ಗೆಜ್ಜೆ “ಘಲ್‌ ಘಲ್‌’ ಎಂದಾಗಲೆಲ್ಲಾ ನನ್ನ ಮನಸ್ಸು ಕುಣಿವ ನವಿಲಾಗುತ್ತಿತ್ತು. ಚಿಕ್ಕವರು ಎಂಬ ಕಾರಣಕ್ಕೆ ದುಬಾರಿಯಾದ ಬೆಳ್ಳಿ ಗೆಜ್ಜೆಯನ್ನು ನಿತ್ಯ ಹಾಕುವಂತಿರಲಿಲ್ಲ. ಒಮ್ಮೆ ಅಪ್ಪನೊಂದಿಗೆ ಆಭರಣದ ಅಂಗಡಿಗೆ ಹೋಗಿ ಬೆಳ್ಳಿ ಗೆಜ್ಜೆಯನ್ನು ನಾನೇ ಆರಿಸಿ, ಕೊಂಡು ತಂದಿದ್ದೆ. ಅದನ್ನು ಅಮ್ಮ ಬೀರುವಿನಲ್ಲಿ ಜೋಪಾನವಾಗಿ ಇಟ್ಟಿದ್ದಳು. ಅಪರೂಪಕ್ಕೆ ಮದುವೆ- ಮುಂಜಿಗೆ ಹೋಗುವಾಗ, ಹಬ್ಬ- ಹರಿದಿನ ಬಂದಾಗ‌ “ನನ್ನ ಗೆಜ್ಜೆ ಕೊಡು’ ಎಂಬ ರಾಗ ಇದ್ದೇ ಇರುತ್ತಿತ್ತು! ನಾಲ್ಕನೇ ಕ್ಲಾಸಿನಲ್ಲಿದ್ದಾಗ ಗಣೇಶ ಹಬ್ಬದಲ್ಲಿ ಹೀಗೇ ಗಲಾಟೆ ಮಾಡಿದ್ದೆ. ಗಲಾಟೆಗೆ ಸೋತ ಅಮ್ಮ ಬೀರುವಿನಿಂದ ಗೆಜ್ಜೆ ತೆಗೆದು ಕೊಟ್ಟಿದ್ದರು. ಗೆಜ್ಜೆ ಹಾಕಿಕೊಂಡು ಮನೆಯಲ್ಲಿ ಕುಣಿದು- ಕುಪ್ಪಳಿಸಿದ್ದಲ್ಲದೇ, ಸಂಜೆಯ ಸಮಯ ಸರ್ವಾಲಂಕಾರಭೂಷಿತೆಯಾಗಿ ಊರೆಲ್ಲಾ ಸುತ್ತಿ ನೂರೆಂಟು ಗಣೇಶನನ್ನು ನೋಡಿ ಮನೆಗೆ ಬಂದಿದ್ದೆ. ಯಾರ ಕಣ್ಣು ತಾಗಿತೋ ಗೊತ್ತಿಲ್ಲ, ಅಚಾತುರ್ಯವೊಂದು ನಡೆದುಹೋಗಿತ್ತು. ಒಂದು ಕಾಲಿನ ಗೆಜ್ಜೆ ಮಾಯವಾಗಿತ್ತು! ಸಾಕಷ್ಟು ಹಣ ಕೊಟ್ಟು ಖರೀದಿಸಿದ್ದ ಬೆಳ್ಳಿ ಗೆಜ್ಜೆ ಕಳೆದುಕೊಂಡಿದ್ದಕ್ಕೆ ಅಪ್ಪ ಅಮ್ಮನಿಗಿಂತ ಸಿಕ್ಕಾಪಟ್ಟೆ ಬೇಸರವಾಗಿದ್ದು ನನಗೇ!! ಅಂದಿನಿಂದ “ಗೆಜ್ಜೆ ಬೇಕು’ ಎಂದು ಕೇಳಲೇ ಇಲ್ಲ. ಅಪ್ಪ ಕೊಡಿಸುತ್ತೇನೆ ಎಂದರೂ ನನಗೇ ಯಾಕೋ ಹಾಕಬೇಕು ಅನ್ನಿಸಿರಲಿಲ್ಲ.

ಆದರೆ ಕಳ್ಳ ಬೆಕ್ಕಿನ ಸನ್ಯಾಸದಂತೆ ನನ್ನ ಗೆಜ್ಜೆಯ ನಿರ್ಲಿಪ್ತತೆ ಮುರಿದು ಬಿದ್ದದ್ದು ಮಣಿಪಾಲದಲ್ಲಿ ಓದುವಾಗ! ಅದಕ್ಕೆ ಕಾರಣ ಸಮಾರಂಭವೊಂದರಲ್ಲಿ ಗೆಳತಿ ಹಾಕಿದ್ದ ಬಂಗಾರ ಬಣ್ಣದ ಗೆಜ್ಜೆ. “ಮೈಸೂರಿನಿಂದ ತಂದ ಸ್ಪೆಷಲ್‌ ಗೆಜ್ಜೆ ಇದು. ನೀರು ಬಿದ್ದರೂ ಕಲರ್‌ ಗ್ಯಾರಂಟಿ ಹೋಗಲ್ಲ’ ಅಂತ ಗೆಳತಿ ಬೀಗಿದ್ದಳು. ಅದನ್ನು ಕಂಡಿದ್ದೇ ತಡ, ಆ ಗೆಜ್ಜೆಯಿಲ್ಲದೇ ಬದುಕೇ ಸಪ್ಪೆ ಎನ್ನಿಸಿತ್ತು. ರಜೆ ಸಿಕ್ಕಾಗ ಮನೆಯವರನ್ನು ಮೈಸೂರಿಗೆ ಹೊರಡಿಸಿದ್ದೆ. ಅವರೆಲ್ಲರೂ ಅರಮನೆ, ಝೂ, ಕೆ.ಆರ್‌.ಎಸ್‌ ಅಂತ ಸುತ್ತಿದರೆ ನಾನು ಮಾತ್ರ ಗೆಜ್ಜೆ ಅಂಗಡಿಯತ್ತ ಹೆಜ್ಜೆಯಿಟ್ಟಿದ್ದೆ. ಅಂಗಡಿ ಮಾಲೀಕ “ಆ ಗೆಜ್ಜೆ ಖಾಲಿಯಾಗಿದೆ. ಆರ್ಡರ್‌ ಕೊಟ್ಟರೆ 15 ದಿನ ಬೇಕು’ ಎಂದಿದ್ದ. ನಿರಾಶೆಯಿಂದ ಅಳು ಬರುವಂತಾಗಿತ್ತು. ಆದರೆ ಅದಕ್ಕಿಂತ ಚೆಂದದ ಗೆಜ್ಜೆಯೊಂದು ಕಣ್ಣಿಗೆ ಬಿದ್ದು, ಮನಸ್ಸು ಕುಣಿದಿತ್ತು. ಬೇರೇನನ್ನೂ ಯೋಚಿಸದೇ ಅದನ್ನು ಖರೀದಿಸಿದೆ. ಹಿಂದೆ ಬೆಳ್ಳಿ ಗೆಜ್ಜೆ ಕಳೆದುಕೊಂಡಿದ್ದು ನೆನಪಾಗಿ ಅಂಗಡಿಯವರ ಬಳಿ ತೆರಳಿ ಹೊಸ ಗೆಜ್ಜೆಯನ್ನು ಬಿಗಿ ಮಾಡಿಸಿಕೊಂಡೂ ಬಂದೆ.

ರಜೆ ಮುಗಿಸಿ ಕಾಲೇಜಿಗೆ ಬಂದು ಮಾಡಿದ ಮೊದಲ ಕೆಲಸವೇ ಗೆಜ್ಜೆ ಪ್ರದರ್ಶನ. ಗೆಜ್ಜೆ ಕಾಣದಿದ್ದರೆ ಎಂದು ಉದ್ದದ ಚೂಡಿದಾರ್‌ ಬಿಟ್ಟು ಸ್ಕರ್ಟ್‌ ಹಾಕಿದ್ದಾಯ್ತು. ಮಣಿಪಾಲದಲ್ಲಿ ನನ್ನ ಸಹಪಾಠಿಗಳು “ಪ್ರಟ್ಟಿ’, “ಬ್ಯೂಟಿಪುಲ್‌’ ಎಂದು ಉದ್ಗಾರ ತೆಗೆದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು. ಆ ದಿನ ಕಾಲೇಜಿನಲ್ಲಿ, ಲೈಬ್ರರಿಯಲ್ಲಿ ನನ್ನ ಗೆಜ್ಜೆಯದೇ ಮಾತು- ಕತೆ!!

Advertisement

ಮಾರನೇ ದಿನ ನನ್ನ ಪ್ರೊಫೆಸರ್‌ರಿಂದ ಕರೆ ಬಂತು. ಯಾವಾಗಲೂ ಬಹಳ ಪ್ರೀತಿಯಿಂದ ಮಾತನಾಡಿಸುವ ಹಿರಿಯರವರು. ಕುರ್ಚಿಯಲ್ಲಿ ಕೂರಿಸಿ ಅವರು ಕೇಳಿದ ಪ್ರಶ್ನೆ “ಗೆಜ್ಜೆ ಹೊಸದಾ?’ ನಾನು ಬಹಳ ಹೆಮ್ಮೆಯಿಂದ “ಹೌದು ಸರ್‌, ಮೈಸೂರಿನಿಂದ ತಂದದ್ದು’ ಎಂದೆ. ಆಮೇಲೆ ಒಂದು ನಿಮಿಷ ಮೌನ. ಆಮೇಲೆ ನಿಧಾನವಾಗಿ “ಬಟ್ಟೆ, ಆಭರಣ ಎಲ್ಲಾ ಅವರವರ ಆಯ್ಕೆ ಮತ್ತು ಹಕ್ಕು ನಿಜ. ಹಾಗಾಗಿ ಹೀಗೆ ಹೇಳುವುದು ತಪ್ಪಿರಬಹುದು. ಆದರೆ ಎಲ್ಲರೂ ಗಂಭೀರವಾಗಿ ಕುಳಿತು ಓದುವ ಲೈಬ್ರರಿಯಲ್ಲಿ ನೀವು ನಿನ್ನೆ ಗೆಜ್ಜೆ ಹಾಕಿಕೊಂಡು ಬಂದಾಗ “ಘಲ್‌ಘಲ್‌’ ಎನ್ನುವ ಸದ್ದು ಜೋರಾಗಿ ಕೇಳಿತು. ಓದುತ್ತಿದ್ದ ನಾನೇ ತಿರುಗಿ ನೋಡಿದೆ. ಇನ್ನು ಹರೆಯದ ವಿದ್ಯಾರ್ಥಿಗಳ ಕತೆ? ಗೆಜ್ಜೆಯ ಸದ್ದು ಸಣ್ಣದಾದರೂ ಆ ಮೌನದಲ್ಲಿ ಬೆಲ್‌ ಹೊಡೆದ ಹಾಗಿರುತ್ತೆ. ಪರೀಕ್ಷೆ ಸಮಯ ಬೇರೆ. ಈ ಸದ್ದು ಮನಸ್ಸನ್ನು ಚಂಚಲಗೊಳಿಸುತ್ತೆ. ದಯಮಾಡಿ ಕಾಲೇಜಿಗೆ, ಲೈಬ್ರರಿಗೆ ಆ ಗೆಜ್ಜೆ ಹಾಕಬೇಡಿ’ ಎಂದರು. ನಾನು ಮುಂದೆಂದೂ ಗೆಜ್ಜೆ ಹಾಕಲಿಲ್ಲ.

ಮರುದಿನ ಗೆಳತಿಯರು “ಎಲ್ಲಿ ಗೆಜ್ಜೆ?’ ಎಂದು ಕೇಳಿದಾಗ “ಕಾಲಿಗೆ ಭಾರ. ಅದಕ್ಕೇ ತೆಗೆದಿಟ್ಟೆ’ ಎಂದಿದ್ದೆ. ಆ ದಿನದಿಂದ‌ ಪೆಟ್ಟಿಗೆ ಸೇರಿದ ನನ್ನ ಮೆಚ್ಚಿನ ಗೆಜ್ಜೆ ಹೊರಬರುತ್ತಿದ್ದದ್ದು ಮನೆಗೆ ಹೋದಾಗ ಮಾತ್ರ!! 

ಡಾ. ಕೆ.ಎಸ್‌.ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next