ಮಹಾನಗರ: ಐಟಿಐ ಉತ್ತೀರ್ಣರಾದವರಲ್ಲಿ ವೃತ್ತಿಕೌಶಲಗಳನ್ನು ಉನ್ನತೀಕರಿಸಿ ಕೈಗಾರಿಕೆಗಳ ಆವಶ್ಯಕತೆಗಳಿಗೆ ಪೂರಕವಾಗಿ ಸಿದ್ಧಗೊಳಿಸುವ ಯೋಜನೆ “ಸ್ಕಿಲ್ ಸ್ಟ್ರೆಂಥನಿಂಗ್ ಫಾರ್ ಇಂಡಸ್ಟ್ರಿಯಲ್ ವ್ಯಾಲ್ಯೂ ಎನ್‌ಹೇನ್ಸ್‌ಮೆಂಟ್'(ಸ್ಟ್ರೈವ್) ಕ್ಲಸ್ಟರ್ ಮಂಗಳೂರಿನಲ್ಲಿ ಆರಂಭಗೊಂಡಿದೆ. ದೇಶದ 19 ಕ್ಲಸ್ಟರ್‌ಗಳಲ್ಲಿ ಮಂಗಳೂರು ಕ್ಲಸ್ಟರ್ ಒಂದಾಗಿದೆ.
ದ.ಕ., ಉಡುಪಿ ಜಿಲ್ಲೆ ಕೈಗಾರಿಕೆಗಳಿಗೆ ಪೂರಕವಾದ ವೃತ್ತಿ ಕೌಶಲಗಳನ್ನು ಒಳ ಗೊಂಡ ಮಾನವ ಸಂಪನ್ಮೂಲವನ್ನು ನಿರೀಕ್ಷಿಸುತ್ತಿರುವ ಎಂಎಸ್‌ಎಂಇ ಕೈಗಾರಿ ಕೆಗಳು, ವೃತ್ತಿ ತರಬೇತಿ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಿದೆ.
ಸ್ಟ್ರೈವ್ ವಿಶ್ವಬ್ಯಾಂಕ್ ಆರ್ಥಿಕ ನೆರವಿನ ಕೇಂದ್ರ ಸರಕಾರದ ಯೋಜನೆ ಯಾಗಿದ್ದು ಪ್ರಥಮ ಹಂತದಲ್ಲಿ ದೇಶದ 19 ಕ್ಲಸ್ಟರ್‌ಗಳಲ್ಲಿ ಅನುಷ್ಠಾನಗೊಳ್ಳುತ್ತಿದ್ದು ರಾಜ್ಯದಲ್ಲಿ ದ.ಕ. , ಬೀದರ್ ಹಾಗೂ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಗೆ ಲಭಿಸಿದೆ. ಮಂಗಳೂರು ಕ್ಲಸ್ಟರ್ ಕೆನರಾ ಸಣ್ಣ ಕೈಗಾರಿಕೆ ಸಂಘದ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡಿದೆ.
ಹೇಗೆ ಅನುಷ್ಠಾನ:
ಕೆನರಾ ಸಣ್ಣ ಕೈಗಾರಿಕೆ ಸಂಸ್ಥೆ ಅಧೀನದಲ್ಲಿ ಇದಕ್ಕಾಗಿ ಪ್ರತ್ಯೇಕ ಮಂಡಳಿ ಯೊಂದನ್ನು ರಚಿಸಲಾಗಿದ್ದು ಸಂಘದ ಅಧ್ಯಕ್ಷರನ್ನು ಒಳಗೊಂಡ ಸಹಿತ ಸದಸ್ಯರನ್ನು ಒಳಗೊಂಡಿದೆ. ಈ ಮಂಡಳಿ ಐಟಿಐಗಳಿಗೆೆ ಭೇಟಿ ನೀಡಿ ಐಟಿಐ ಆದವರನ್ನು ಆಯ್ಕೆ ಮಾಡುತ್ತದೆ. ಮಂಗಳೂರ ಕ್ಲಸ್ಟರ್ ಮೂಲಕ ಪ್ರಸ್ತುತ ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಕಲ್, ಮೋಟಾರ್ ಮೆಕ್ಯಾನಿಕ್ ಹಾಗೂ ಪ್ರೋಗ್ರಾಮಿಂಗ್ ಆ್ಯಂಡ್ ಸಿಸ್ಟಮಿಂಗ್ ಕೋರ್ಸ್‌ಗಳನ್ನು ಪೂರ್ತಿಗೊಳಿಸಿದವರನ್ನು ಆಯ್ಕೆ ಮಾಡಿ ಅವರಿಗೆ ಕೈಗಾರಿಕೆಗಳ ಜತೆ ಸಮನ್ವಯ ಸಾಧಿಸಿ ಒಂದು ವರ್ಷದ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಶಿಷ್ಯವೇತನ ( ಸ್ಟೈಫಂಡ್) ಇದ್ದು ತರಬೇತಿ ಮುಗಿದ ಬಳಿಕ ದೃಢಪತ್ರಿಕೆ ನೀಡಲಾಗುತ್ತದೆ. ತರಬೇತಿ ಪಡೆದ ಕೈಗಾರಿಕೆಯಲ್ಲೂ ಉದ್ಯೋಗ ಲಭಿಸಬಹುದು. ಇಲ್ಲವೇ ಬೇರೆ ಕಡೆ ಉದ್ಯೋಗಕ್ಕೆ ಹೋಗಬಹುದು. ವಿಶ್ವಸಂಸ್ಥೆ ಅನುದಾನಿತ ಯೋಜನೆಯಾಗಿ ರುವುದರಿಂದ ಸ್ಟ್ರೈವ್ ದೃಢಪತ್ರಕ್ಕೆ ಹೆಚ್ಚಿನ ಮಹತ್ವವಿರುತ್ತದೆ. ಈಗಾಗಲೇ ಉಭಯ ಜಿಲ್ಲೆಗಳ 50 ಐಟಿಐ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ವಿವಿಧ ಕೈಗಾರಿಕೆ ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಏನಿದು ಸ್ಟ್ರೈವ್ ? :
ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಕೈಗಾರಿಕೆಗಳ ಆವಶ್ಯಕತೆ ಗನುಗುಣವಾಗಿ ಕೌಶಲಗಳನ್ನು ಉನ್ನತೀಕರಣಗೊಳಿಸುವುದು ಸ್ಟ್ರೈವ್‌ನ ಮುಖ್ಯ ಉದ್ದೇಶ. ಯೋಜನೆಯಲ್ಲಿ ಕೇಂದ್ರ ಕೌಶಲ ಅಭಿವೃದ್ಧಿ ಮಂಡಲಿ ಕ್ಲಸ್ಟರ್‌ಗಳನ್ನು ಆಯ್ಕೆ ಮಾಡಿ ಅವುಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ. ಕ್ಲಸ್ಟರ್‌ಗಳ ನಿರ್ವಹಣೆಗೆ ಕೇಂದ್ರ ಸರಕಾರ ದೇಶಾದ್ಯಂತ ಕೈಗಾರಿಕೆ ಸಂಘಗಳಿಂದ ಅರ್ಜಿಗಳನ್ನು ಕರೆದು ಅವುಗಳ ಬಗ್ಗೆ ಮೌಲ್ಯಮಾಪನ ನಡೆಸಿದ್ದು, ಇದರಲ್ಲಿ ಕೆನರಾ ಸಣ್ಣ ಕೈಗಾರಿಕೆಗಳ ಸಂಘ ಆಯ್ಕೆಯಾಗಿದೆ. ಇವುಗಳ ಮೂಲಕ ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಮೂಲಕ ತರಬೇತಿ ನೀಡಲಾಗುತ್ತಿದೆ.
ಕೆನರಾ ಸಣ್ಣ ಕೈಗಾರಿಕೆ ಸಂಘವನ್ನು ಭಾರತ ಸರಕಾರ ಸ್ಟ್ರೈವ್‌ಗೆ ಕ್ಲಸ್ಟರ್ ಆಗಿ ಆಯ್ಕೆ ಮಾಡಿದ್ದು ಈಗಾಗಲೇ ಕಾರ್ಯಾರಂಭ ಮಾಡಿದೆ. ಕೆನರಾ ಸಣ್ಣ ಕೈಗಾರಿಕೆ ಸಂಘ ದೇಶದ 19 ಕ್ಲಸ್ಟರ್‌ಗಳಲ್ಲಿ ಒಂದಾಗಿದೆ. ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು ಐಟಿಐ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಕೈಗಾರಿಕೆಗಳಲ್ಲಿ ಒಂದು ವರ್ಷದ ತರಬೇತಿ ನೀಡಿ ವೃತ್ತಿಕೌಶಲವನ್ನು ಉನ್ನತಿಗೊಳಿಸಲಾಗುತ್ತದೆ.
–ಅಜಿತ್ ಕಾಮತ್, ಅಧ್ಯಕ್ಷರು ಕೆನರಾ ಸಣ್ಣ ಕೈಗಾರಿಕೆಗಳ ಸಂಘ