ಸಿನಿಮಾ ಅಂದಮೇಲೆ ಮನರಂಜನೆ ಇರಲೇಬೇಕು. ಮನರಂಜನೆ ಅಂದಮೇಲೆ ಫೈಟು, ಲವ್ವು, ಹಾಸ್ಯ ಇತ್ಯಾದಿ ಇರಲೇಬೇಕು. ಇದರೊಂದಿಗೆ ಇನ್ನಷ್ಟು ಎಲಿಮೆಂಟ್ಸ್ ಇದ್ದರೆ ಅದನ್ನು ಭರಪೂರ ಮನರಂಜನೆಯ ಸಿನಿಮಾ ಎನ್ನಲು ಅಡ್ಡಿಯಿಲ್ಲ. ಅಂಥದ್ದೊಂದು ಭರಪೂರ ಮನರಂಜನೆಯ ಅಂಶಗಳೊಂದಿಗೆ ಇದೀಗ ಪ್ರೇಕ್ಷಕರ ಮುಂದೆ ಬರಲು ಸಿನಿಮಾವೊಂದು ತಯಾರಾಗಿದೆ. ಹೆಸರು “ಇತ್ಯರ್ಥ’. ಈಗಾಗಲೇ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ಎ.ಜಿ ಶೇಷಾದ್ರಿ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇನ್ನು, ಹಲವಾರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಸಿನಿಮಾ ಪ್ಯಾಷನ್ ಇಟ್ಟುಕೊಂಡಿರುವ ಎನ್.ಎಲ್.ಎನ್ ಮೂರ್ತಿ ಅವರು ಈ ಚಿತ್ರ ನಿರ್ಮಿಸಿದ್ದಾರೆ. ತಮ್ಮ ಸಿನಿಮಾ ಕುರಿತು ಹೇಳಿಕೊಳ್ಳುವ ನಿರ್ದೇಶಕ ಎ.ಜಿ.ಶೇಷಾದ್ರಿ, “ಚಿತ್ರ ಇದೀಗ ಸೆನ್ಸಾರ್ ಅಂಗಳಕ್ಕೆ ಹೊರಡುವ ಸಿದ್ಧತೆಯಲ್ಲಿದೆ. ಬುಧವಾರ ಮೊದಲ ಪ್ರತಿ ಬರುತ್ತಿದ್ದು, ಆ ಬಳಿಕ ಸೆನ್ಸಾರ್ ಮುಗಿಸಿ, ಚಿತ್ರಮಂದಿರಕ್ಕೆ ಬರುವ ಯೋಚನೆ ಇದೆ. “ಇತ್ಯರ್ಥ’ ಒಂದು ನಿರ್ದಿಷ್ಟವಾದ ಜಾನರ್‌ಗೆ ಸೇರಿದ ಸಿನಿಮಾ ಎಂದು ಹೇಳುವುದಕ್ಕಾಗಲ್ಲ.
ಇಲ್ಲಿ ಲವ್ ಇದೆ, ರೊಮ್ಯಾನ್ಸ್ ಇದೆ, ಥ್ರಿಲ್ಲರ್, ಹಾರರ್, ಸಸ್ಪೆನ್ಸ್, ಕಾಮಿಡಿ, ಸೆಂಟಿಮೆಂಟ್, ಎಮೋಷನಲ್ ಎಲ್ಲವನ್ನೂ ಹದವಾಗಿ ಬೆರೆಸಲಾಗಿದೆ. ಚಿತ್ರ ಇನ್ನೇನು ನಾಲ್ಕು ನಿಮಿಷದಲ್ಲಿ ಮುಗಿಯುತ್ತೆ ಅನ್ನುವಾಗ, ಸಿನಿಮಾದ ಇಡೀ ಆಶಯ ಬಿಚ್ಚಿಕೊಳ್ಳುತ್ತದೆ. ಸಿನಿಮಾ ನೋಡುಗರಿಗೆ ತಲೆಗೆ ಕೆಲಸ ಕೊಡುವಂತಹ ಅಂಶಗಳು ಇಲ್ಲಿವೆ. ನಿರೀಕ್ಷೆ ಮಾಡದಿರುವ ಕ್ಲೈಮ್ಯಾಕ್ಸ್ ಇಲ್ಲಿದೆ. ಹೇಳುವುದಕ್ಕಿಂತ “ಇತ್ಯರ್ಥ’ ನೋಡಬೇಕು’ ಎನ್ನುತ್ತಾರೆ ನಿರ್ದೇಶಕ ಎ.ಜಿ.ಶೇಷಾದ್ರಿ.
ಚಿತ್ರದಲ್ಲಿ ಮೋಹನ್ ಮತ್ತು ನವೀನ್ ಕೃಷ್ಣ ನಾಯಕರಾದರೆ, ಮುಂಬೈ ಮೂಲದ ಖುಷಿ ಮುಖರ್ಜಿ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಮೇಶ್ ಪಂಡಿತ್, ಬಿ. ಜಯಶ್ರೀ, ಶ್ರೀನಿವಾಸ ಪ್ರಭು, ಅರವಿಂದ ರಾವ್, “ಬೆನಕ’ ಪವನ್ ಇತರರು ನಟಿಸಿದ್ದಾರೆ. ಕುಮುಟ, ಕಳಸ, ಚಿಕ್ಕಮಗಳೂರು, ಗಾಳಿಗುಡ್ಡ, ಬೆಂಗಳೂರು ಸೇರಿತೆ ಇತರೆಡೆ ಚಿತ್ರೀಕರಣ ನಡೆದಿದೆ. ಮೋಹನ್ ಇಲ್ಲಿ ನಟನೆ ಜೊತೆ ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ.
ಕನ್ನಡ, ಹಿಂದಿ, ತಮಿಳು, ತೆಲುಗು,ಮಲಯಾಳಂ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಹಿರಿಯ ಛಾಯಾಗ್ರಾಹಕ ಡಿ.ಪ್ರಸಾದ್ ಬಾಬು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಬಹುತೇಕ ಚಿತ್ರಗಳಿಗೆ ಇವರು ಕ್ಯಾಮೆರಾ ಹಿಡಿದಿದ್ದಾರೆ. ಗೌತಮ್ ಶ್ರೀವತ್ಸ ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಅಂದಹಾಗೆ, “ಇತ್ಯರ್ಥ’ ಶೀರ್ಷಿಕೆಗೆ ಅರ್ಥ ಕ್ಲೈಮ್ಯಾಕ್ಸ್‌ನಲ್ಲೇ ಗೊತ್ತಾಗಲಿದೆ ಎನ್ನುವ ನಿರ್ದೇಶಕರು ಕಥೆಗೆ ಪೂರಕವಾಗಿರುವಂತಹ ಶೀರ್ಷಿಕೆ ಕೊಟ್ಟಿದ್ದು ಕೂಡ ನಿರ್ಮಾಪಕರು ಎನ್ನುತ್ತಾರೆ.