Advertisement

ITF tennis tournaments 2023: ರಾಮಕುಮಾರ್ ರಾಮನಾಥನ್‌ ಗೆ ಸಿಂಗಲ್ಸ್ ಕಿರೀಟ

05:35 PM Oct 22, 2023 | Team Udayavani |

ಧಾರವಾಡ: ನಾಲ್ಕನೇ ಶ್ರೇಯಾಂಕಿತ ಆಟಗಾರ ರಾಮಕುಮಾರ ರಾಮನಾಥನ್ ಅವರು ಸಿಂಗಲ್ಸ್ ಪಂದ್ಯದಲ್ಲಿ ವಿಜಯಿಯಾಗುವುದರೊಂದಿಗೆ ನಗರದ ಜಿಲ್ಲಾ ಲಾನ್ ಟೆನಿಸ್ ಆಯೋಜನೆಗೊಂಡಿದ್ದ ಐಟಿಎಫ್ ಪುರುಷರ ಟೆನಿಸ್ ಪಂದ್ಯಾವಳಿ-2023ಕ್ಕೆ ತೆರೆ ಬಿದ್ದಿತು.

Advertisement

ರಾಮನಾಥನ್ ಅವರು ಮೂರನೇ ಶ್ರೇಯಾಂಕಿತ ಆಟಗಾರ ದಿಗ್ವಿಜಯ ಪ್ರತಾಪಸಿಂಗ್ ಅವರಿಗೆ ಸೋಲುಣಿಸುವ ಮೂಲಕ 25 ಸಾವಿರ ಡಾಲರ್ ಬಹುಮಾನ ಮೊತ್ತದ ಟೆನಿಸ್ ಪಂದ್ಯಾವಳಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ರಾಮನಾಥನ್ ಅವರು ದಿಗ್ವಿಜಯ ಅವರನ್ನು 7-6 (5), 7-6 (6) ಅಂಕಗಳಿಂದ ಪರಾಭವಗೊಳಿಸಿದರು.

ಅತ್ಯಂತ ತುರುಸಿನಿಂದ ನಡೆದ ಸಿಂಗಲ್ಸ್ ಫೈನಲ್ ಪಂದ್ಯದ ಮೊದಲ ಸೆಟ್‌ ನಲ್ಲಿ ರಾಮನಾಥನ್ ತಮ್ಮ ಕೌಶಲ್ಯಪೂರ್ಣ ಹೊಡೆತಗಳು ಮತ್ತು ಆಕ್ರಮಣಶೀಲ ಆಟದಿಂದ ಎದುರಾಳಿಯನ್ನು ಕಂಗೆಡಿಸಿದರು. ಹೀಗಾಗಿ ಮೊದಲ ಸೆಟ್‌ನ್ನು 7-6 (5) ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ತಿರುಗಿ ಬಿದ್ದ ದಿಗ್ವಿಜಯ ಪ್ರತಾಪಸಿಂಗ್ ಹೋರಾಟದ ಆಟ ಆಡಿದರು. ಆದರೆ ಅನುಭವಿ ರಾಮನಾಥನ್ ಸಂಯೋಜಿತ ಆಟದಿಂದಾಗಿ ಟೈಬ್ರೇಕರ್ ಆಯಿತು. ದಿಗ್ವಿಜಯಸಿಂಗ್ 3-0 ಅಂಕಗಳ ಲೀಡ್ ಪಡೆದರು. ಆದರೂ ಕೆಲವು ತಪ್ಪುಗಳಿಂದಾಗಿ ಜಯ ದಕ್ಕಲಿಲ್ಲ. ಇಷ್ಟಾಗಿಯೂ ದಿಗ್ವಿಜಯ ಪ್ರತಾಪಸಿಂಗ್ ತಾವೊಬ್ಬ ಅರ್ಹ ಅಂತಿಮ ಸುತ್ತು ಪ್ರವೇಶಿಸಿದ ಆಟಗಾರ ಎನ್ನುವುದನ್ನು ಸಾಬೀತುಗೊಳಿಸಿದರು.

ಕಳೆದ ಕೆಲವು ವಾರಗಳಿಂದ ನಾನು ಸಹಜ ಆಟಕ್ಕೆ ಕುದುರಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಿದ್ದೆ. ಈ ಜಯ ನಮ್ಮ ಮುಂದಿನ ಪಂದ್ಯಗಳಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಆಡಲು ಸಹಾಯಕವಾಗಲಿದೆ ಎಂದು ವಿಜೇತ ರಾಮಕುಮಾರ ರಾಮನಾತನ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಸಿಂಗಲ್ಸ್ ವಿಜೇತ ರಾಮನಾಥನ್ 3,600 ಯುಎಸ್ ಡಾಲರ್ ಬಹುಮಾನ ಪಡೆದರೆ, ರನರ್ ಅಪ್ ಸ್ಥಾನ ಪಡೆದ ದಿಗ್ವಿಜಯಸಿಂಗ್ 2,120 ಯುಎಸ್ ಡಾಲರ್ ಬಹುಮಾನ ಗಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next