ಹೊಸದಿಲ್ಲಿ: ಭಾರತದ ಹೆಸರಾಂತ ಕಂಪನಿ ಐಟಿಸಿಯ ಮುಖ್ಯಸ್ಥ ವೈ.ಸಿ. ದೇವೇಶ್ವರ್ (72) ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೇವಲ ಸಿಗರೇಟ್ ತಯಾರಿಕಾ ಕಂಪನಿಯಾಗಿದ್ದ ಐಟಿಸಿಯನ್ನು, ವಿವಿಧ ಕ್ಷೇತ್ರಗಳಿಗೆ ಕಾಲಿಡುವಂತೆ ಮಾಡಿ, ಹಲವಾರು ಜನಪ್ರಿಯ ಉತ್ಪಾದನೆಗಳನ್ನು ಕೈಗೊಳ್ಳುವ ಮೂಲಕ ಆ ಕಂಪನಿಯನ್ನು ಉತ್ತುಂಗಕ್ಕೇರಿಸಿದ ಹೆಗ್ಗಳಿಕೆ ಇವರದ್ದು. 1968ರಲ್ಲಿ ಐಟಿಸಿ ಸಂಸ್ಥೆಗೆ (ಇಂಡಿಯನ್ ಟೊಬ್ಯಾಕೋ ಕಂಪನಿ) ಉದ್ಯೋಗಿಯಾಗಿ ಸೇರಿದ್ದ ದೇವೇಶ್ವರ್, 1984ರ ಏ. 11ರಂದು ಕಂಪನಿಯ ನಿರ್ದೇಶಕರಾಗಿ ನೇಮಕಗೊಂಡಿದ್ದರು. 1996ರ ಜ.1ರಂದು ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡರು. 90ರ ದಶಕದ ಮಧ್ಯಭಾಗದಲ್ಲಿ ಕಂಪ ನಿಯ ಆದಾಯ 5,200 ಕೋಟಿ ರೂ.ಗಳಿಗಿಂತಲೂ ಕಡಿಮೆ ಇತ್ತು. ಲಾಭ 452 ಕೋಟಿ ರೂ.ಗಳಷ್ಟಿತ್ತು. 2017-18ರಲ್ಲಿ ಈ ಕಂಪನಿಯ ಆದಾಯ 44, 329.77 ಕೋಟಿ ರೂ.ಗಳಷ್ಟಾಗಿತ್ತಲ್ಲದೆ, ನಿವ್ವಳ ಲಾಭ 11,223.25 ಕೋಟಿ ರೂ.ಗೇರಿತ್ತು. ಆ ಮಟ್ಟಕ್ಕೆ ಕಂಪನಿಯನ್ನು ಬೆಳೆಸಿದ ಹೆಗ್ಗಳಿಕೆ ಅವರದ್ದಾಗಿದೆ.