ಹೊಸದಿಲ್ಲಿ : ಐಟಿಸಿ ಅಧ್ಯಕ್ಷ ವೈ ಸಿ ದೇವೇಶ್ವರ್ ಅವರು ಇಂದು ಶನಿವಾರ (ಮೇ 11) ನಸುಕಿನ ವೇಳೆ ನಿಧನ ಹೊಂದಿದರು. ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಪುತ್ರನನ್ನುಅಗಲಿದ್ದಾರೆ.
1947ರ ಫೆಬ್ರವರಿ 4ರಂದು ಪಾಕಿಸ್ಥಾನದ ಲಾಹೋರ್ ನಲ್ಲಿ ಜನಿಸಿದ್ದ ದೇವೇಶ್ವರ್, ದಿಲ್ಲಿ ಐಐಟಿ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನ ಹಳೆ ವಿದ್ಯಾರ್ಥಿ. ಇವರು 1968ರಲ್ಲಿ ಐಟಿಸಿ ಸೇರಿದ್ದರು.
1984ರ ಎಪ್ರಿಲ್ 11ರಂದು ದೇವೇಶ್ವರ್ ಅವರನ್ನು ಐಟಿಸಿ ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. 1996ರ ಜನವರಿ 1ರಂದು ಅವರು ಕಂಪೆನಿಯ ಚೀಫ್ ಎಕ್ಸಿಕ್ಯುಟಿವ್ ಮತ್ತು ಚೇರ್ಮನ್ ಆದರು.
ಎರಡು ದಶಕಗಳಿಗೂ ಮೀರಿದ ಅವಧಿಗೆ ಐಟಿಸಿಯ ಉನ್ನತ ಹುದ್ದೆಯನ್ನು ಅಲಂಕರಿಸಿರುವ ದೇವೇಶ್ವರ್ ಅವರು ಭಾರತದಲ್ಲಿ ಅತಿ ದೀರ್ಘ ಕಾಲ ಕಾರ್ಪೊರೇಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದಾರೆ. 2017ರ ಫೆಬ್ರವರಿ 4ರ ವರೆಗೂ ಅವರು ಐಟಿಸಿ ಚೇರ್ಮನ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಗಿದ್ದರು.
ದೇವೇಶ್ವರ್ ಅವರು 1991 – 1994ರ ನಡುವೆ ಏರಿಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.