ರೋಮ್: ಮಳೆಯಿಂದ ಅಡಚಣೆಗೊಳಗಾದ ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸ್ಟಾರ್ ಆಟಗಾರರಾದ ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜೊಕೋವಿಕ್‌ಮುನ್ನಡೆ ಸಾಧಿಸಿದ್ದಾರೆ.
Advertisement
2016ರ ಬಳಿಕ ಇದೇ ಮೊದಲ ಬಾರಿಗೆ ರೋಮ್ ಕೂಟದಲ್ಲಿ ಸ್ಪರ್ಧೆಗಿಳಿದಿರುವ ರೋಜರ್ ಫೆಡರರ್ ಪೋರ್ಚುಗಲ್ನ ಜೋ ಸೂಸ ಅವರನ್ನು 6-4, 6-3ರಿಂದ ಮಣಿಸಿ 16ರ ಸುತ್ತಿಗೆ ಏರಿದರು. ಇವರ ಮುಂದಿನ ಎದುರಾಳಿ ಕ್ರೊವೇಷ್ಯಾದ ಬೊರ್ನಾ ಕೊರಿಕ್. ಫೆಡರರ್ ಈ ಬಾರಿ ಆಡಲಿರುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕೂಟದ ಸಂಘಟಕರು ಟಿಕೆಟ್ ಬೆಲೆಯನ್ನು ದುಪ್ಪಟುಗೊಳಿಸಿದ್ದರು! ರಪಾಯೆಲ್ ನಡಾಲ್ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು 6-0, 6-1 ಅಂತರದಿಂದ ಸುಲಭದಲ್ಲಿ ಮಣಿಸಿದರು. ಮುಂದೆ ಜಾರ್ಜಿಯಾದ ನಿಕೋಲಸ್ ಬಸಿಲಶ್ವಿಲಿ ವಿರುದ್ಧ ಆಡಲಿದ್ದಾರೆ. ಕಳೆದ ವಾರವಷ್ಟೇ ಮ್ಯಾಡ್ರಿಡ್ ಪ್ರಶಸ್ತಿ ಜಯಿಸಿದ ನೊವಾಕ್ ಜೊಕೊವಿಚ್ ಕೆನಡಾದ ಡೆನಿಸ್ ಶಪೊವ್ಯಾಲೊವ್ ವಿರುದ್ಧ 6-1, 6-3 ಅಂತರದ ಗೆಲುವು ಸಾಧಿಸಿದರು.
ಮಹಿಳಾ ಸಿಂಗಲ್ಸ್: ಒಸಾಕಾ 3ನೇ ಸುತ್ತಿಗೆ
ಮಹಿಳಾ ಸಿಂಗಲ್ಸ್ನಲ್ಲಿ ವಿಶ್ವದ ನಂ.1 ತಾರೆ ಜಪಾನಿನ ನವೊಮಿ ಒಸಾಕಾ 3ನೇ ಸುತ್ತಿಗೆ ಏರಿದ್ದಾರೆ. ಅವರು ಸ್ಲೊವೇಕಿಯದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ 6-3, 6-3 ಅಂತರದ ಗೆಲುವು ಸಾಧಿಸಿದರು. ಮಳೆಯಿಂದಾಗಿ ಈ ಪಂದ್ಯ ಒಂದು ದಿನ ಮುಂದೂಡಲ್ಪಟ್ಟಿತ್ತು. ಮುಂದಿನ ಸುತ್ತಿನಲ್ಲಿ ಜರ್ಮನಿಯ ಜೂಲಿಯಾ ಜಾರ್ಜಸ್ ಅಥವಾ ರೊಮೇನಿಯಾದ ಸಿಮೋನಾ ಹಾಲೆಪ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಗಾರ್ಬಿನ್ ಮುಗುರುಜಾ ಅಮೆರಿಕದ ಡೇನಿಯಲ್ ಕಾಲಿನ್ಸ್ ವಿರುದ್ಧ 6-4, 4-6, 6-2ರಿಂದ ಗೆದ್ದು ಬಂದರು. ಕಿಕಿ ಬರ್ಟೆನ್ಸ್, ಕ್ರಿಸ್ಟಿನಾ ಲಡೆನೊವಿಕ್ ಕೂಡ ಮುನ್ನಡೆ ಕಂಡಿದ್ದಾರೆ.