ರೋಮ್ (ಇಟಲಿ): ದೇಶ-ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಮತ್ತು ಚರ್ಚೆಗೆ ಗ್ರಾಸವಾಗಿರುವ ಚಾಟ್ ಬೋಟ್ ChatGPT ಬಳಸುವುದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಇಟಲಿ ನಿಷೇಧ ಹೇರಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಂಟ್ವಾಳ: ದಾಖಲೆಗಳಿಲ್ಲದೆ ಅಕ್ಕಿ ಸಾಗಾಟ; ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ
ಇದರೊಂದಿಗೆ ಸುಧಾರಿತ ಕೃತಕ ಬುದ್ಧಿಮತ್ತೆ (AI) ಸಾಫ್ಟ್ ವೇರ್ ಅನ್ನು ನಿರ್ಬಂಧಿಸಿದ ಮೊದಲ ಯುರೋಪಿಯನ್ ದೇಶ ಇಟಲಿಯಾಗಿದೆ. ನಮಗೆ ಬೇಕಾದ ಮಾಹಿತಿ ಒದಗಿಸಿಕೊಡುವ ಮತ್ತು ಮಾನವ ಸಂಭಾಷಣೆಯನ್ನು ಅನುಕರಿಸುವ ಮತ್ತು ಅದಕ್ಕೆ ಬೇಕಾದ ವಿವರಣೆ ನೀಡುವ ಸಾಮರ್ಥ್ಯ ಚಾಟ್ ಜಿಪಿಟಿ ಹೊಂದಿರುವುದು ವಿಶೇಷತೆಯಾಗಿದೆ.
ಇಟಾಲಿಯನ್ ಡೇಟ್ ಸಂರಕ್ಷಣಾ ಪ್ರಾಧಿಕಾರವು ಶುಕ್ರವಾರ ಅಮೆರಿಕದ ಸ್ಟಾರ್ಟ್ ಅಪ್ OpenAI ಅಭಿವೃದ್ಧಿಪಡಿಸಿದ ಮೈಕ್ರೋಸಾಫ್ಟ್ ಬೆಂಬಲಿತ ಚಾಟ್ ಬಾಟ್ ಅನ್ನು ನಿರ್ಬಂಧಿಸಿರುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ ಚಾಟ್ ಬಾಟ್ ಇಟಲಿಯ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಂತ್ರಣವನ್ನು ಅನುಸರಿಸುತ್ತಿದೆಯೇ ಎಂಬುದನ್ನು ತನಿಖೆ ನಡೆಸುವುದಾಗಿ ತಿಳಿಸಿದೆ.
ChatGPT ಬಳಕೆದಾರರ ಸಂಭಾಷಣೆಗಳು ಮತ್ತು ಸಬ್ಸ್ ಕ್ರೈಬರ್ ಗಳ ಪಾವತಿ ಮಾಹಿತಿಯ ಮೇಲೆ ಪರಿಣಾಮ ಬೀರುವ ಡಾಟಾ ಉಲ್ಲಂಘನೆಯಾಗಿರುವುದು ಮಾರ್ಚ್ 20ರಂದು ವರದಿಯಾಗಿರುವುದಾಗಿ ಇಟಲಿಯ ವಾಚ್ ಡಾಗ್ ಆರೋಪಿಸಿರುವುದಾಗಿ ವರದಿ ಹೇಳಿದೆ.
2022ರ ನವೆಂಬರ್ ನಲ್ಲಿ ಚಾಲ್ತಿಗೆ ಬಂದ ChatGPTಯನ್ನು ಈಗಾಗಲೇ ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ನಿರ್ಬಂಧಿಸಿದೆ. ಈ ನಿಟ್ಟಿನಲ್ಲಿ ChatGPT ಮತ್ತು ಅಮೆರಿಕದ ಓಪನ್ ಎಐ ಕಂಪನಿ ವಿರುದ್ಧ ತನಿಖೆ ಆರಂಭಿಸಿರುವುದಾಗಿ ಇಟಾಲಿಯನ್ ಡಾಟಾ ಪ್ರೊಟೆಕ್ಷನ್ ಅಥಾರಿಟಿ ತಿಳಿಸಿದೆ.