Advertisement

ಹೊಸ ಚಿತ್ರದ ಹಲವು ದೃಶ್ಯಗಳು ನಮ್ಮನ್ನು ಕಾಡುತ್ತವೆ : ಇಟಾಲೋ ಸ್ಪಿನೆಲಿ

09:53 AM Mar 03, 2020 | Hari Prasad |

ಬೆಂಗಳೂರು: ಗಿರೀಶ್‌ ಕಾಸರವಳ್ಳಿಯವರ ಹೊಸ ಚಿತ್ರ ಅತ್ಯಂತ ಶಕ್ತಿಯುತವಾಗಿದೆ ಎನ್ನುತ್ತಾರೆ ಇಟಲಿ ಯ ಚಿತ್ರ ನಿರ್ದೇಶಕ ಮತ್ತು ನಟ ಇಟಾಲೊ ಸ್ಪಿನೆಲಿ. ಗಿರೀಶರ ಹೊಸ ಚಿತ್ರ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಕುರಿತು ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಇಟಾಲೊ, ‘ಹೊಸ ಚಿತ್ರದಲ್ಲಿ ಗಿರೀಶರ ಸೃಜನಶೀಲತೆ ಕಾಣುತ್ತದೆ. ವಿಶ್ವದಂಗಳಕ್ಕೆ ಅನ್ವಯವಾಗುವ ಕಥಾವಸ್ತು. ಕೆಲವು ದೃಶ್ಯಗಳಲ್ಲಿನ ಕಲಾತ್ಮಕ ಅಭಿವ್ಯಕ್ತಿ ಅನನ್ಯವಾದುದು’ ಎಂದರು.

Advertisement

ನನಗೆ ಕಲಾಕೃತಿಗಳು ಇಷ್ಟ. ಹಾಗಾಗಿ ಕೆಲವು ದೃಶ್ಯಗಳು ನನಗೆ ಪೇಂಟಿಂಗ್‌ಗಳಂತೆಯೇ ತೋರಿದವು. ಅವು ನಮ್ಮನ್ನು ಸದಾ ಕಾಡುವಂಥವು ಎಂದು ವಿವರಿಸುವ ಅವರು, ಚಿತ್ರವು ಒಟ್ಟೂ ಅಭಿವ್ಯಕ್ತಿಯಲ್ಲಿ ಶಕ್ತಿಯುತವಾಗಿದೆ. ಗಿರೀಶ್‌ ಬರೀ ಚಿತ್ರ ನಿರ್ದೇಶಕರಲ್ಲ ; ಜತೆಗೆ ಚಿಂತಕರೂ ಸಹ. ಅವರ ಚಿಂತನೆಯ ಕ್ರಮ ಈ ಚಿತ್ರದಲ್ಲಿ ಅಭಿವ್ಯಕ್ತಗೊಳ್ಳುತ್ತದೆ ಎಂದು ವಿಶ್ಲೇಷಿಸಿದರು.

ಒಳ್ಳೆಯ ಕಥೆಯ ಎರಡು ಭಾಗ
ಒಂದು ಒಳ್ಳೆಯ ಕಥೆಯ ಎರಡು ಭಾಗಗಳಿವೆ ಈ ಚಿತ್ರದಲ್ಲಿ. ಮೊದಲನೆ ಭಾಗ ಹಳ್ಳಿಯ ಬದುಕು, ಅಲ್ಲಿಯ ಒಬ್ಬ ಶ್ರಮಪಟ್ಟು ಓದುತ್ತಿರುವ ಬಾಲಕ, ಟೀಚರ್‌, ನಗರಕ್ಕೆ ಹೋಗಬೇಕೆಂಬ ಹಂಬಲಗಳು ಇತ್ಯಾದಿ. ಹಾಗೆಯೇ ಮತ್ತೂಂದು ಭಾಗದಲ್ಲಿ ನಗರದ ಬದುಕು, ಹಳ್ಳಿಯಿಂದ ನಗರಕ್ಕೆ ಓಡಿ ಬಂದು ಸಣ್ಣದೊಂದು ವ್ಯಾಪಾರ ಮಾಡುವ ಯುವಕ ಇತ್ಯಾದಿ ಪಾತ್ರಗಳು. ನನಗೆ ಎರಡನೇ ಭಾಗಕ್ಕಿಂತ ಮೊದಲನೇ ಭಾಗ ಬಹಳ ಇಷ್ಟವಾಯಿತು. ಮೊದಲ ಪಾತ್ರದ ಕೆಲವು ದೃಶ್ಯಗಳು ಇಟಲಿಯಲ್ಲಿನ ನವೋದಯ ಕಾಲದ ಪೇಂಟಿಂಗ್‌ಗಳನ್ನು ನೆನಪಿಸಿದವು.

ಗಿರೀಶರ ಹಲವು ಚಿತ್ರಗಳನ್ನು ನೋಡಿದ್ದೇನೆ. ಅವರ ಘಟಶ್ರಾದ್ಧ ಚಿತ್ರವು ಭಾರತದ ಬಗೆಗೆ ನನ್ನಲ್ಲಿ ಕುತೂಹಲ ಮೂಡಿಸಿತು. ಆನಂತರದ ಅವರ ಚಿತ್ರಗಳಾದ ದ್ವೀಪ, ಹಸೀನಾ ಇತ್ಯಾದಿ ಬಹಳ ಇಷ್ಟವಾದವು. ಭಾರತದಲ್ಲಿ ಸತ್ಯಜಿತ್‌ ರೇ ಬಳಿಕ ಅತ್ಯಂತ ಪ್ರಮುಖವಾದ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಎಂಬುದು ನನ್ನ ಅಭಿಪ್ರಾಯ.

ಜಗತ್ತಿಗೆ ಕರ್ನಾಟಕದ ಸಂಸ್ಕೃತಿ, ಪರಂಪರೆಯನ್ನು ತೆಗೆದಿಟ್ಟವರು ಗಿರೀಶ್‌. ತಮ್ಮ ಚಿತ್ರದ ಮೂಲಕ ಜಗತ್ತಿನ ಸಿನಿಮಾ ಪ್ರೇಕ್ಷಕರಿಗೆ ಕರ್ನಾಟಕವನ್ನು, ಭಾರತವನ್ನು ಪರಿಚಯಿಸಿದವರು. ಜಾಗತಿಕವಾಗಿ ಎಲ್ಲರಿಗೂ ತಲುಪುವಂಥ ಮಾನವೀಯ ನೆಲೆಯ ಕಥಾವಸ್ತುಗಳನ್ನೇ ತಮ್ಮ ಚಿತ್ರಗಳಿಗೆ ಆಯ್ದುಕೊಳ್ಳುವುದು ಅವರ ಮತ್ತೂಂದು ವಿಶಿಷ್ಟತೆ.

Advertisement

ಸಮಕಾಲೀನ ವಿಷಯಗಳಿಗೆ ಅವರು ಸ್ಪಂದಿಸುವ ಮತ್ತು ತೆರೆಯ ಮೇಲೆ ತರುವ ಇಡೀ ಬೌದ್ಧಿಕ ಪ್ರಕ್ರಿಯೆ ಎಲ್ಲೂ ಶುಷ್ಕವೆನಿಸುವುದಿಲ್ಲ. ಆಯ್ಕೆ ಮಾಡಿಕೊಂಡ ಕಥಾವಸ್ತು ಒಂದಕ್ಕಿಂತ ಒಂದು ಭಿನ್ನ. ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅದನ್ನು ತಮ್ಮ ಚಿತ್ರದ ಮೂಲಕ ಬಿತ್ತರಿಸುತ್ತಾ ತಮ್ಮೊಳಗಿನ ಸಾಮಾಜಿಕ ಕಾಳಜಿಯನ್ನು ಪ್ರಚುರಪಡಿಸುವ ಪ್ರಾಮಾಣಿಕ ಪ್ರಯತ್ನ ಅವರ ಪ್ರತಿ ಚಿತ್ರದಲ್ಲೂ ಕಾಣ ಸಿಗುತ್ತದೆ.

ಅವರ ಸಿನಿಮಾ ಭಾಷೆ ಸರಳ ಮತ್ತು ಸೂಕ್ಷ್ಮ. ವಾಸ್ತವಿಕತೆಯತ್ತ ಸಾಗುವ ಅವರ ನೆಲೆಯೂ ಬಹಳ ಶಕ್ತಿಯುತವಾದುದು. ಪ್ರತಿ ಸಮಸ್ಯೆಯಲ್ಲಿನ ಮಾನವೀಯ ಮುಖವನ್ನು ಸ್ವತಃ ಕಾಣುವ ಹಾಗೂ ಉಳಿದವರಿಗೂ ತೋರಿಸಲೆತ್ನಿಸುವ ಅವರ ಪ್ರಯತ್ನವೇ ಖುಷಿ ಕೊಡುವಂಥದ್ದು.

ಗಿರೀಶ್‌ ಕಾಸರವಳ್ಳಿಯವರ ಹೊಸ ಚಿತ್ರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಕವಿ ಜಯಂತ ಕಾಯ್ಕಿಣಿಯವರ ಸಣ್ಣ ಕಥೆ ಹಾಲಿನ ಮೀಸೆ ಆಧರಿಸಿ ರೂಪಿಸಿದ್ದು. ಇದರ ನಿರ್ಮಾಪಕರು ಶಿವಕುಮಾರ್‌. ಒಂಬತ್ತು ವರ್ಷಗಳ ಬಳಿಕ ಗಿರೀಶರು ಈ ಸಿನಿಮಾ ರೂಪಿಸಿದ್ದಾರೆ. ‘ಕೂರ್ಮಾವತಾರ’ದ ಬಳಿಕ ಕೆಲವು ಇತರೆ ಯೋಜನೆಗಳಲ್ಲಿ ಗಿರೀಶರು ತೊಡಗಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next