ಲಂಡನ್ : ಭಾರತೀಯ ಕಂಪೆನಿಯೊಂದು ಇಸ್ಲಾಮಿಕ್ (ಐಸಿಸ್) ಉಗ್ರರ ಉಪಯೋಗಕ್ಕೆಂದು ಉತ್ಪಾದಿಸಿ ರವಾನಿಸಿದ 3.75 ಕೋಟಿ ಟ್ರ್ಯಾಡಮಾಲ್ ಎಂಬ ನೋವು ನಿವಾರಕ ಉದ್ದೀಪನ ಗುಳಿಗೆಗಳನ್ನು ಇಟಲಿ ಪೋಲೀಸರು ಮುಟ್ಟುಗೋಲು ಹಾಕಿದ್ದಾರೆ.
ಭಾರತದಿಂದ ಬಂದ ಸರಕು ಸಾಗಣೆ ಹಡಗು ಲಿಬಿಯಾದ ಕಡೆಗೆ ಹೋಗುತ್ತಿತ್ತು. ಲಿಬಿಯಾದಲ್ಲಿರುವ ಐಸಿಸ್ ಉಗ್ರರಿಗಾಗಿ ಈ ನೋವು ನಿವಾರಕ ಗುಳಿಗೆಗಳನ್ನು ರವಾನಿಸಲಾಗುತ್ತಿದ್ದು ಇದರ ಸೇವನೆಯಿಂದ ಉದ್ದೀಪನ ಹಾಗೂ ಸಹನಶೀಲತೆ ವೃದ್ಧಿಸುವುದರಿಂದ ಐಸಿಸ್ ಉಗ್ರರ ವಲಯದಲ್ಲಿ ಇದು ವ್ಯಾಪಕವಾಗಿ ಬಳಸಲ್ಪಡುತ್ತಿದೆ.
ಇಟಲಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿರುವ 3.75 ಕೋಟಿ ಟ್ರ್ಯಾಡಮಾಲ್ ನೋವು ನಿವಾರಕ ಗುಳಿಗೆಗಳ ಮಾರುಕಟ್ಟೆ ಮೌಲ್ಯವು 7.5 ಕೋಟಿ ಡಾಲರ್ ಎನ್ನಲಾಗಿದೆ. ಈ ಗುಳಿಗೆಗಳನ್ನು ಮೂರು ಕಂಟೇನರ್‌ಗಳಲ್ಲಿ ಪ್ಯಾಕ್ ಮಾಡಲಾಗಿದ್ದು ಅವುಗಳನ್ನು ಜಿನೋವಾ ಬಂದರಿನಲ್ಲಿ ಹಡಗಿಗೆ ತುಂಬಲಾಗಿದೆ.
ಆದರೆ ಈ ಕಂಟೇನರ್‌ಗಳ ಮೇಲೆ “ಬ್ಲಾಂಕೆಟ್‌ಗಳು ಮತ್ತು ಶ್ಯಾಂಪೂ’ ಎಂಬ ಲೇಬಲ್ ಹಚ್ಚಲಾಗಿದೆ. ಲಿಬಿಯ ಮಿಸ್ರತಾ ಮತ್ತು ತೋಬ್ರುಕ್ ಬಂದರುಗಳಿಗೆ ಈ ಕಂಟೇನರ್‌ಗಳು ರವಾನೆ ಆಗುವುದಿದ್ದವು ಎಂದು ದಿ ಟೈಮ್ಸ್ ಹೇಳಿರುವುದನ್ನು ಉಲ್ಲೇಖೀಸಿ ಪಿಟಿಐ ವರದಿ ಮಾಡಿದೆ.
ಕಳೆದ ವರ್ಷ ಗ್ರೀಕ್‌ನ ಪೈರಿಯೂಸ್ ಎಂಬ ಬಂದರಿನಲ್ಲಿ ಪೊಲೀಸರು, ಭಾರತದಿಂದ ಹೊರಟು ಬಂದ ಮತ್ತು ಲಿಬಿಯಾಕ್ಕೆ ಹೋಗಲಿದ್ದ, ಹಡಗಿನಿಂದ 2.60 ಕೋಟಿ ಟ್ರ್ಯಾಮಡಾಲ್ ಗುಳಿಗೆಗಳನ್ನು ವಶಪಡಿಸಿಕೊಂಡಿದ್ದರು. ಐಸಿಸ್ ಜತೆ ನಂಟು ಹೊಂದಿದ್ದ ಲಿಬಿಯದ ಕಂಪೆನಿಯೊಂದಕ್ಕೆ ಈ ಗುಳಿಗೆಗಳನ್ನು ಪೂರೈಸುವುದಿತ್ತು.