ರೋಮ್: ಡೀಗೊ ಮರಡೋನಾ, ಅಲೆಕ್ಸಾಂಡ್ರೊ ಸಬೆಲ್ಲಾ ಬಳಿಕ ಮತ್ತೋರ್ವ ವಿಶ್ವಶ್ರೇಷ್ಠ ಫುಟ್ಬಾಲಿಗನನ್ನು ಸಾವು ಸೆಳೆದೊಯ್ದಿದೆ. 1982ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಟಲಿಯನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಪೌಲೊ ರೋಸಿ ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ 64 ವರ್ಷವಾಗಿತ್ತು. “ರಾಯ್ ಮೀಡಿಯಾ’, ಪತ್ನಿ ಫೆಡ್ರಿಕಾ ಕ್ಯಾಪೆಲ್ಲೆಟ್ಟಿ ಅವರು ಗುರುವಾರ ಪೌಲೊ ರೋಸಿ ಅವರ ನಿಧನ ವಾರ್ತೆಯನ್ನು ಬಿತ್ತರಿಸಿದರು.
1982ರ ವಿಶ್ವಕಪ್ ಹೀರೋ
ಪೌಲೊ ರೋಸಿ ಪರಾಕ್ರಮಕ್ಕೆ ಸ್ಪೇನ್‌ನಲ್ಲಿ ನಡೆದ 1982ರ ವಿಶ್ವಕಪ್ ಪಂದ್ಯಾವಳಿಯೊಂದೇ ಸಾಕು. ಇಟಲಿಯ ಸಾರಥಿಯಾಗಿದ್ದ ಅವರು ಈ ಕೂಟದಲ್ಲಿ 6 ಗೋಲು ಸಿಡಿಸಿದ್ದರು. ಬ್ರಝಿಲ್ ವಿರುದ್ಧ ಹ್ಯಾಟ್ರಿಕ್ ಹೀರೋ ಆಗಿಯೂ ಮೆರೆದಿದ್ದರು. ಈ ಪಂದ್ಯವನ್ನು ಇಟಲಿ 3-2ರಿಂದ ಜಯಿಸಿತ್ತು.
ಪಶ್ಚಿಮ ಜರ್ಮನಿ ಎದುರಿನ ಫೈನಲ್‌ನಲ್ಲಿ ಆರಂಭಿಕ ಗೋಲು ಹೊಡೆದ ಹೆಗ್ಗಳಿಕೆ ರೋಸಿ ಅವರದಾಗಿತ್ತು. ಈ ಪಂದ್ಯವನ್ನು 3-1ರಿಂದ ಗೆದ್ದ ಇಟಲಿ 3ನೇ ಸಲ ಹಾಗೂ 1938ರ ಬಳಿಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಮೆರೆದಿತ್ತು. ಚಿನ್ನದ ಬೂಟ್, ಚಿನ್ನದ ಚೆಂಡು ಪ್ರಶಸ್ತಿಗಳೆಲ್ಲ ರೋಸಿ ಪಾಲಾಗಿದ್ದವು. 1982ರಲ್ಲಿ ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಪೌಲೊ ರೋಸಿ ಪಾತ್ರರಾಗಿದ್ದರು.
ಆರ್ಜೆಂಟೀನಾದಲ್ಲಿ ನಡೆದ 1978ರ ವಿಶ್ವಕಪ್‌ನಲ್ಲೂ ರೋಸಿ 3 ಗೋಲು ಬಾರಿಸಿ ಮಿಂಚಿದ್ದರು. ವಿಶ್ವಕಪ್‌ನಲ್ಲಿ ಅತ್ಯಧಿಕ 9 ಗೋಲು ಬಾರಿಸಿದ ಇಟಲಿ ಆಟಗಾರನೆಂಬ ಜಂಟಿ ದಾಖಲೆ ಇವರದಾಗಿದೆ.
ಎರಡು ವರ್ಷಗಳ ನಿಷೇಧದ ಬಳಿಕ ರೋಸಿ 1982ರ ಇಟಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು. ಬೆಟ್ಟಿಂಗ್ ಸ್ಕ್ಯಾಂಡಲ್ ಆರೋಪವೊಂದು ಇವರ ವಿರುದ್ಧ ಕೇಳಿಬಂದಿತ್ತು. ಬಳಿಕ ಇದರಲ್ಲಿ ಹುರುಳಿಲ್ಲ ಎಂಬುದು ಸಾಬೀತಾಗಿತ್ತು.
ನಿವೃತ್ತಿ ಬಳಿಕ ಇಟಲಿಯ “ರಾಯ್ ನ್ಪೋರ್ಟ್’ ಟಿವಿ ಚಾನೆಲ್‌ನಲ್ಲಿ ಫುಟ್‌ಬಾಲ್ ವಿಶೇಷಜ್ಞನಾಗಿ ಕರ್ತವ್ಯ ನಿಭಾಯಿಸುತ್ತಿದ್ದ ರೋಸಿ “ಪ್ಯಾಬ್ಲಿಟೊ’ ಎಂಬ ನೆಚ್ಚಿನ ಹೆಸರಲ್ಲೇ ಖ್ಯಾತರಾಗಿದ್ದರು. ರೋಸಿ ನಿಧನಕ್ಕೆ ಫುಟ್‌ಬಾಲ್ ಜಗತ್ತು ಕಂಬನಿಗರೆದಿದೆ.
ನಾವು ಓರ್ವ ಆತ್ಮೀಯ ಗೆಳೆಯ ಹಾಗೂ ನಮ್ಮ ಸಾಕರ್ ಐಕಾನ್ ಓರ್ವನನ್ನು ಕಳೆದುಕೊಂಡಿದ್ದೇವೆ. ಅವರು ದೇಶವನ್ನೇ ತನ್ನೊಂದಿಗೆ ಮುನ್ನಡೆಸಿದ್ದರು. ಜನರೂ ಅವರೊಂದಿಗೆ, ಅವರಿಗಾಗಿ ಸಂಭ್ರಮಿಸಿದ್ದರು.
-ಗ್ಯಾಬ್ರಿಯಲ್‌ಗ್ರ್ಯಾವಿನ. ಇಟಲಿ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ