Advertisement

ವಂದಿಸಿ ಇಟಗಿ ಮಹದೇವನಿಗೆ

12:42 PM Dec 16, 2017 | |

ಅಪೂರ್ವ ಶಿಲ್ಪ ಕಲೆಗೆ ಹೆಸರಾಗಿರುವ ಸ್ಥಳಗಳ ಪೈಕಿ ಇಟಗಿಯ ಮಹಾದೇವ ದೇವಸ್ಥಾನವೂ ಒಂದು. ಇದು ಯಲಬುರ್ಗಾ ತಾಲೂಕಿನ ಕುಕನೂರು ಹಾಗೂ  ಬನ್ನಿಕೊಪ್ಪ ಮಧ್ಯದಲ್ಲಿದೆ.  ಈ ದೇವಾಲಯವು ಕ್ರಿ.ಶ 1112 ರಲ್ಲಿ, ಅಂದರೆ ಸುಮಾರು 900 ವರ್ಷಗಳಷ್ಟು ಹಳೆಯದು. ಈ ದೇವಾಲಯವನ್ನು ಮಹಾದೇವ ದಂಡನಾಯಕನು  ನಿರ್ಮಿಸಿದ್ದಾನೆ  ಎಂದು  ಶಿಲಾಶಾಸನಗಳಿಂದ ತಿಳಿದುಬರುತ್ತದೆ.

Advertisement

 ಕಲ್ಯಾಣಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾಲದಲ್ಲಿ ರಚಿತವಾದ ಅನೇಕ ವಾಸ್ತು ಶಿಲ್ಪ ಪ್ರಕಾರ ಶೈಲಿಯಲ್ಲಿ ಇಟಗಿಯ ಮಹಾದೇವ ದೇವಾಲಯವು ನಿರ್ಮಾಣವಾಗಿದೆ. ವಿಕ್ರಮಾದಿತ್ಯನ ದಂಡನಾಯಕನಾದ ಹಾಗೂ ಇಟಗಿ ಗ್ರಾಮದವನೇ ಆದ ಮಹಾದೇವ ದಂಡನಾಯಕ ವಿಕ್ರಮಾದಿತ್ಯನ ಸೇನಾಧಿಪತಿಯಾಗಿ ಅತನೊಂದಿಗೆ ರಾಜ್ಯ ವಿಸ್ತಾರಗೊಳಿಸಲು ಹೋರಾಡಿ ವೀರ ಸೇನಾನಿ ಎಂದೆನಿಸಿದ್ದನಂತೆ.  

ತನ್ನ ಸಾಹಸ, ಪರಾಕ್ರಮಗಳಿಂದ ಆತ, ವಿಕ್ರಮಾದಿತ್ಯನಿಗೆ ಹತ್ತಿರದವನಾಗಿದ್ದ. ಈ ಹಿನ್ನೆಲೆಯಲ್ಲಿ ತನ್ನ ಸಾಹಸ ಹಾಗೂ ಹೆಸರನ್ನು ಅಜರಾಮರವಾಗಿರಿಸಲು ನಿರ್ಧರಿಸಿ ಮಹಾದೇವ ದಂಡನಾಯಕ ಇಟಗಿಯಲ್ಲಿ ಮಹಾದೇವದೇವಾಲಯನ್ನು ನಿರ್ಮಿಸಿದ ಎಂಬ ಪ್ರತೀತಿಯಿದೆ.   ದೇವಾಲಯದ ನಿರ್ಮಾಣದಲ್ಲಿ ಉಸುಕು ಮಿಶ್ರಿತ ಕೆಂಪು ಕಲ್ಲನ್ನು ಹೊರತುಪಡಿಸಿ ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಕಲ್ಲನ್ನು (ಕ್ಲೋರೆಟಿಕ್‌ಸಿಸ್ಟ್‌) ಉಪಯೋಗಿಸುವ ಮೂಲಕ ಗಾಢವಾದ ಸೂಕ್ಷ್ಮಕೆತ್ತನೆಯನ್ನು ಮಾಡಲಾಗಿದೆ.

ಗೋಪುರ, ಕಂಬಗಳ ಮೇಲೆ ಮೇಣದಂತೆ ಅತೀ ಸರಾಗವಾಗಿ ಕೆತ್ತಲ್ಪಟ್ಟ ಚಿಕ್ಕಚಿಕ್ಕ ಗೊಂಬೆಗಳು, ಮೂರ್ತಿಗಳು, ಶಿಲಾಬಾಲಕಿಯರು ಹಾಗೂ ಡೋಲು ಡಮರುಗವನ್ನು ಹಿಡಿದು ನರ್ತಿಸುವ ನರ್ತಕಿಯರ ಶಿಲ್ಪಗಳಿವೆ. ರಾಮಯಣ ಮಹಾಭಾರತದಂತಹ ಸನ್ನಿವೇಶಗಳನ್ನು ಮನೋಹರವಾಗಿ ಚಿತ್ರಿಸಲಾಗಿದೆ.   ದೇವಾಲಯದ ಆವರಣದಲ್ಲಿರುವ ಪುಷ್ಕರಣಿ, ನಾರಾಯಣ ದೇವಾಲಯ, ಚಂದಲೇಶ್ವರಿ,

ಕಲ್ಯಾಣಿ ಚಾಲುಕ್ಯರ ಶಿಲಾಶಾಸನಗಳು, ದ್ವಾರ ಪಾಲಿಕೆಯರ ಮೂರ್ತಿಗಳು, ದಕ್ಷಿಣ ದಿಕ್ಕಿನಲ್ಲಿ ಶ್ರೀ ಸರಸ್ವತಿ ಮಠ ಹಾಗೂ ದೇವಾಲಯವು ಒಳಗೊಂಡಿರುವಂತಹ ಅದ್ಭುತವಾದ ದ್ವಾರತೋರಣವಿದೆ. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯ ಬಿಟ್ಟರೆ ಇಟಗಿಯ ಮಹಾದೇವ ದೇವಾಲಯವೇ ಶ್ರೇಷ್ಠವಾದುದು ಎಂದು  ಕಲಾ ವಿಮರ್ಶಕ ಬ್ರೌನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Advertisement

* ಎಸ್‌.ಶಿವಪ್ಪಯ್ಯನಮಠ

Advertisement

Udayavani is now on Telegram. Click here to join our channel and stay updated with the latest news.

Next