ಬಳ್ಳಾರಿ: ನನ್ನ ಜೀವನದಲ್ಲಿ ಎಲ್ಲವೂ ಅನಿರೀಕ್ಷಿತವಾಗಿ ಲಭಿಸಿದೆ. ನಾನು ರಾಜಕೀಯಕ್ಕೆ ಬಂದಿದ್ದು, ಉಪಮುಖ್ಯಮಂತ್ರಿಯಾಗಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ಎಲ್ಲವೂ ಅನಿರೀಕ್ಷಿತವಾಗಿ ನಡೆದಿದೆ ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.
ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಧ್ವಜಾರೋಹಣಕ್ಕೆ ಆಗಮಿಸಿದ್ದೇನೆ. ನನ್ನ ಜೀವನದಲ್ಲಿ ಎಲ್ಲವೂ ಅನಿರೀಕ್ಣಿತವಾಗಿ ನಡೆದಿದೆ. ನಾನು ರಾಜಕೀಯಕ್ಕೆ ಬಂದಿದ್ದು, ಶಾಸಕನಾಗಿ ಆಯ್ಕೆಯಾಗಿದ್ದು ಅನಿರೀಕ್ಷಿತವಾಗಿತ್ತು. ಅದರಂತೆ ಉಪಮುಖ್ಯಮಂತ್ರಿಯಾಗಿದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿದ್ದು ಸಹ ಅನಿರೀಕ್ಷಿತವಾಗಿದೆ. ಶಾಸಕನಾಗದಿದ್ದ ನನಗೆ ಪಕ್ಷದ ವರಿಷ್ಠರು ಕರೆದು ಸಚಿವ ಸ್ಥಾನ ನೀಡಿ, ಡಿಸಿಎಂ ಕೊಟ್ಟಿರುವುದು ಸಹ ಅನಿರೀಕ್ಷಿತವಾಗಿದೆ. ಪಕ್ಷದ ನಾಯಕರು ಭರವಸೆ ಇಟ್ಟು ನಾನಾ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸರಿಯಾಗಿ ನಿಭಾಯಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ, ಅಮಿತ್ ಶಾ ಗುಜರಾತ್ ನಲ್ಲಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡದೇ ಬೇರೆಯವರಿಗೆ ಅವಕಾಶ ನೀಡುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದರು. ಈಗ ಕರ್ನಾಟಕ ರಾಜ್ಯದಲ್ಲಿ ಸಹ ಅದೇ ಪ್ರಯೋಗವನ್ನು ಅನುಸರಿಸುತ್ತಿದ್ದಾರೆ. ಬಳ್ಳಾರಿ ಉಸ್ತುವಾರಿ ನನಗೆ ಸಿಕ್ಕಿದಕ್ಕೆ ಶ್ರೀರಾಮುಲು ಅವರಿಗೆ ಸಂತಸ ತಂದಿದೆ. ರಾಮುಲು ಮತ್ತು ನಾನು ಸಹೋದರರಿದ್ದಂತೆ. ಬಳ್ಳಾರಿಯ ಸರ್ವತೋಮುಖ ಅಭಿ ವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಭರವಸೆ ನೀಡಿದರು.