ಬೆಂಗಳೂರು: ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆ ಎನ್ನಲಾದ ಧ್ವನಿಸುರಳಿ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ “ಫೇಸ್‌ಬುಕ್’ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಶೋಭಾ ಕರಂದ್ಲಾಜೆ, “ಕಾಂಗ್ರೆಸ್ ಇಷ್ಟು ನೀಚ ಕೆಲಸಕ್ಕೆ ಕೈ ಹಾಕಬಾರದಿತ್ತು. ಕಾಂಗ್ರೆಸ್ ನೇತಾರರು ತಮ್ಮ ಪಕ್ಷದ ಶಾಸಕರನ್ನೇ ನಿಯಂತ್ರಿಸಲಾಗದಷ್ಟು ಅಸಹಾಯಕರಾಗಿದ್ದಾರೆ. ಅದಕ್ಕಾಗಿ ಈ ಎಲ್ಲಾ ಗಿಮಿಕ್ ಮಾಡುತ್ತಿದ್ದಾರೆ. ತಮ್ಮ ಪಕ್ಷದಲ್ಲಿನ ಲೋಪಗಳನ್ನು ಮುಚ್ಚಿಕೊಳ್ಳಲು ಹಾಗೂ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಸಮ್ಮಿಶ್ರ ಸರ್ಕಾರ ಈ ರೀತಿಯಲ್ಲಿ ಹುನ್ನಾರ ನಡೆಸಿದೆ ಎಂದು ದೂರಿದ್ದಾರೆ.
ಹಾಗೆಯೇ ಸಾಧನಾಹೀನ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಮತ್ತು ನಾಡಿನ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಹೀನ ಕೃತ್ಯಕ್ಕೆ ಮುಂದಾಗಿದೆ. ನಕಲಿ ಕಾಂಗ್ರೆಸ್ಸಿಗರು ನಕಲಿ ಧ್ವನಿ ಸೃಷ್ಟಿಸಿ ಹಾಗೂ ನಕಲಿ ದೂರನ್ನು ಅವರೇ ನೀಡಿದ್ದಾರೆ. ಈ ನಕಲಿ ಕಾಂಗ್ರೆಸ್ಸಿಗರ ದುಷ್ಕೃತ್ಯವನ್ನು ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹ ಪಡಿಸುತ್ತೇನೆ ಎಂದು ಒತ್ತಾಯಿಸಿದ್ದಾರೆ.
ಈ ಬಾರಿ ಸುನಾಮಿ ಎದ್ರೂ ಅಚ್ಚರಿಯಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋದಾಗ ಕಂಪನವಾಗಿತ್ತು. ವಿದೇಶಕ್ಕೆ ಹೋದಾಗ ಮತ್ತೂಂದು ಕಂಪನವಾಯ್ತು. ಈ ರೀತಿ ಒಮ್ಮೆಮ್ಮೆ ಕಂಪನದ ತೀವ್ರತೆ 5.2ರಷ್ಟಿದ್ದು, ಮತ್ತೂಮ್ಮೆ 6.2ರಷ್ಟು ಆಗಿತ್ತು. ಈ ಸಲ ಕಂಪನ ತೀವ್ರತೆ 7 ದಾಟಿದರೂ ಆಶ್ಚರ್ಯ ಇಲ್ಲ. ಸುನಾಮಿ ಕೂಡ ಏಳಬಹುದು.
38 ಸ್ಥಾನ ಗೆದ್ದವರು ಮುಖ್ಯಮಂತ್ರಿಯಾಗುತ್ತಾರೆ ಅಂದ ಮೇಲೆ ಹೆಚ್ಚು ಸಂಖ್ಯಾ ಬಲ ಇರೋ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ವ? ಎಂದು ಪ್ರಶ್ನಿಸಿರುವ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ, ಜಾತಕದಲ್ಲಿ ಬಿಎಸ್‌ವೈ ಸಿಎಂ ಆಗೇ ಆಗುತ್ತಾರೆ ಎಂದಿದೆ. ಅವರು ಇಂಜಿನ್ ಅಂದ ಮೇಲೆ ನಾವು ಬೋಗಿ ಥರಾ. ನಮಗೂ ಸ್ಥಾನ ಸಿಕ್ಕೆ ಸಿಗುತ್ತೆ ಎಂದು ಹೇಳಿದ್ದಾರೆ.
ಹೊಗೆ ಕಾಣಿಸುತ್ತಿದೆ ಎಂದರೆ ಸ್ಫೋಟ ಆಗೋದರಲ್ಲಿ ಅನುಮಾನವಿಲ್ಲ. ಸಚಿವ ಸಂಪುಟ ವಿಸ್ತರಣೆಯೂ ಇಲ್ಲ, ಸರ್ಕಾರ ಟೇಕ್‌ಆಫ್ ಕೂಡ ಆಗಿಲ್ಲ. 104 ಶಾಸಕರ ಸಂಖ್ಯಾಬಲ ಬಿಜೆಪಿ ಪಡೆದಿದೆ. ಜನರ ಕಣ್ಣೀರೊರೆಸಬೇಕಾದ ಸರ್ಕಾರವೇ ಕಣ್ಣೀರು ಹಾಕ್ತಿದೆ. ಬಿಜೆಪಿಯ ಹೆಸರು ಹೇಳಿಕೊಂಡು ಸರ್ಕಾರ ನಡೆಯುತ್ತಿದೆ.
-ತೇಜಸ್ವಿನಿಗೌಡ, ವಿಧಾನ ಪರಿಷತ್ ಸದಸ್ಯೆ