ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಇಂದು ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಬಿಎಸ್ ಯಡಿಯೂರಪ್ಪ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯಪಾಲರು ಯಡಿಯೂರಪ್ಪ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಮುಂದಿನ ಸಿಎಂ ನೇಮಕವಾಗುವವರೆಗೆ ಹಂಗಾಮಿ ಸಿಎಂ ಆಗಿರಲು ರಾಜ್ಯಪಾಲರು ತಿಳಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜೀನಾಮೆ ನೀಡಲು ಯಾರ ಒತ್ತಾಯವೂ ಇರಲಿಲ್ಲ. ನನಗೆ ದೆಹಲಿಯಿಂದ ಯಾವುದೇ ಒತ್ತಡವಿಲ್ಲ. ಇದು ಸ್ವಯಂಪ್ರೇರಿತ ನಿರ್ಧಾರ ಎಂದರು.
ಇದನ್ನೂ ಓದಿ:ಯಡಿಯೂರಪ್ಪ ರಾಜೀನಾಮೆ: ಮುಂದಿನ ನಡೆಯೇನು? ಪುತ್ರರ ಭವಿಷ್ಯವೇನು?
ವಲಸೆ ಮಂತ್ರಿಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಅವರು ನಮ್ಮೊಂದಿಗೆ ಇರುತ್ತಾರೆ ಎಂದರು. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಹೆಸರು ಹೇಳಲು ಇಷ್ಟಪಡುವುದಿಲ್ಲ. ಯಾರೇ ಮುಖ್ಯಮಂತ್ರಿಯಾದರೂ ಅವರಿಗೆ ರಾಜ್ಯದ ಬೆಳವಣಿಗೆಗೆ ಸಹಕಾರ ನೀಡುತ್ತೇನೆ ಎಂದರು.
ಮುಂದಿನ ನಡೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ರಾಜ್ಯಪಾಲರ ಹುದ್ದೆಯನ್ನು ನಾನು ಅಲಂಕರಿಸುವುದಿಲ್ಲ, ದೆಹಲಿಯಿಂದ ನನಗೆ ಯಾವುದೇ ಕರೆ ಬಂದಿಲ್ಲ ಎಂದರು.
ಇದನ್ನೂ ಓದಿ:ಕೌನ್ ಬನೇಗಾ ಕರ್ನಾಟಕ ಸಿಎಂ ?