Advertisement
ಜೂನ್‌ನಲ್ಲಿ ಅರಣ್ಯ ಇಲಾಖೆಯವರೋ ಇನ್ನಾರೋ ಗಿಡಗಳನ್ನು ನೆಡುತ್ತಾರೆ. ಹಾಗೆ ನೆಟ್ಟು ಬಿಟ್ಟರೆ ಸಾಲದಲ್ಲ, ಅವುಗಳಿಗೆ ಮುಂದಿನ ನಾಲ್ಕಾರು ವರ್ಷಗಳ ಕಾಲ ಚಳಿಗಾಲ, ಬೇಸಗೆಯಲ್ಲಿ ನೀರು ಕೊಡುತ್ತಾ ಜೀವ ಉಳಿಸುವುದು ಮುಖ್ಯ. ಅನಂತರ ಅವು ತಮ್ಮ ಪಾಡಿಗೆ ಬೆಳೆಯುತ್ತಾ ನೆಳಲು ಒದಗಿಸುತ್ತವೆ. ಮಣಿಪಾಲದ ಮಣಿಪಾಲ ಜ್ಯೂನಿಯರ್ ಕಾಲೇಜು ಪ್ರೌಢಶಾಲೆಯ “ಸೈನ್ಸ್ ಕ್ಲಬ್’ನ 21 ಮಕ್ಕಳು ಮೂರ್ನಾಲ್ಕು ತಿಂಗಳುಗಳಿಂದ ಈಚೆಗೆ ಪ್ರತೀ ರವಿವಾರ ಬೆಳಿಗ್ಗೆ 7.30ರಿಂದ 9 ಗಂಟೆಯವರೆಗೆ ಬಕೇಟು ಹಿಡಿದು ಆಸುಪಾಸಿನ ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳಿಗೆ ನೀರು ಹನಿಸುತ್ತಿದ್ದಾರೆ. ಅಧ್ಯಾಪಕರ ಜತೆಗೂಡಿ ಮೊದಲ ಬಾರಿಗೆ ರಸ್ತೆ ಬದಿಯ 63 ಗಿಡಗಳಿಗೆ ನೀರು ಹಾಕಿದ ಅವರ ಕಣ್ಣುಗಳಲ್ಲಿ ಏನೋ ಒಂದು ಖುಷಿ.
Related Articles
Advertisement
ಇದು ಒಂದು ಧ್ರುವ. ಆದರೆ “ಇಲ್ಲಿ ಬನ್ನಿ’ ಎಂದು ನಗುಮುಖದಿಂದ ಕರೆದು, ನೀರು ಕೊಟ್ಟು ಸಹಕರಿಸಿದ್ದು, ಪ್ಲಾನೆಟೋರಿಯಂನ ಸೆಕ್ಯೂರಿಟಿಯವರು ಮತ್ತು ಮೆಚ್ಚುಗೆಯ ನಗೆ, ಸಹಕಾರ ಕೊಟ್ಟು ಸಹಕರಿಸಿದ್ದು ಪೊಲೀಸ್ ಕ್ವಾರ್ಟರ್ಸ್‌ನ ನಿವಾಸಿ ಪೊಲೀಸರು.
ಮಕ್ಕಳು ಅಪ್ರಯತ್ನಪೂರ್ವಕವಾಗಿ ಸರಿ-ತಪ್ಪು, ಸ್ವಾರ್ಥ- ನಿಸ್ವಾರ್ಥ ಹೀಗೆ ಸಮಾಜದ ವಿವಿಧ ಬಣ್ಣಗಳನ್ನು ಸ್ವತಃ ಅನುಭವಿಸಿ ಅರಿತುಕೊಳ್ಳುವಂತಾದುದು ರಸ್ತೆ ಬದಿಯ ಗಿಡಗಳಿಗೆ ನೀರು ಹಾಕುವಂತಹ ಈ ಸಣ್ಣದೆಂದು ಕಾಣಬಹುದಾದ ಕೆಲಸದಿಂದ ಸಾಧ್ಯವಾದ ಇನ್ನೊಂದು ಬಗೆಯ ಕಲಿಕೆ ಎನ್ನಬಹುದೋ ಏನೋ! ಗಿಡಗಳಿಗೆ ನೀರು ಹಾಕುವುದರ ಜತೆಗೆ ಸ್ವತ್ಛ ಭಾರತ್ ಅನ್ನೂ ಸಣ್ಣ ಮಾದರಿಯಲ್ಲಾದರೂ ಅನುಷ್ಠಾನಕ್ಕೆ ತರಬಹುದು ಎಂಬುದು ನಾಲ್ಕಾರು ವಾರಗಳ ಬಳಿಕ ಹೊಳೆದ ಆಲೋಚನೆ. ಸರಿ, ಈಗ ನೀರು ಹಾಕುವ ದಾರಿಯಲ್ಲಿ ಮಕ್ಕಳು ಕಸ ಆಯುವ ಕೆಲಸವನ್ನೂ ಕೈಗೊಳ್ಳುತ್ತಿದ್ದಾರೆ.
ನಾವು ಹಾಕಿದ ನೀರಿನಿಂದಷ್ಟೇ ಅವು ಬದುಕಿ ಬೆಳೆಯುತ್ತವೆಂದಲ್ಲ ಅಥವಾ ಇದೊಂದು ಅಸಾಮಾನ್ಯ ಕೆಲಸವೂ ಅಲ್ಲ. ಆದರೆ ಮಕ್ಕಳಲ್ಲಿ ತನ್ನಷ್ಟಕ್ಕೇ ತಾನೇ ಒಂದು ಪರಿಸರದ ಪ್ರಜ್ಞೆ ಮೂಡುತ್ತದೆ. ತಾವು ಆರೈಕೆ ಮಾಡಿದ್ದು ಎನ್ನುವ ಭಾವ ಗಿಡಗಳೊಂದಿಗೆ ಸ್ನೇಹ ಹುಟ್ಟಿಸುತ್ತದೆ. ಅವುಗಳೊಂದಿಗಿನ ಒಡನಾಟ ನಿಜವಾದ ಕಾಳಜಿಗೆ ಕಾರಣವಾಗುತ್ತದೆ. ಲಾಭ ಇಷ್ಟೇ: ಮಕ್ಕಳು ಪ್ರಜ್ಞಾವಂತರಾಗಲು ಸರಿಯಾದ ಮಾರ್ಗ ದೊರೆಯುತ್ತದೆ. ಹಸಿರು ಪರಿಸರದ ಅದ್ಭುತ ಫೋಟೋಗಳನ್ನೋ ವಿಡಿಯೋಗಳನ್ನೋ ನೋಡಿ ಸೃಷ್ಟಿಯಾಗುವ ಪರಿಸರ ಪ್ರೇಮಕ್ಕಿಂತ ಹೀಗೆ ಮೂಡುವ ಪರಿಸರ ಪ್ರೀತಿ ಹೆಚ್ಚು ಗಟ್ಟಿ ಎನ್ನುತ್ತಾರೆ ಗಿಡಗಳಿಗೆ ನೀರು ಹಾಕುವ ಕಾರ್ಯಕ್ಕೆ ಮಕ್ಕಳನ್ನು ಪ್ರೇರೇಪಿಸಿ ಮುನ್ನಡೆಸುತ್ತಿರುವ ಶಿಕ್ಷಕರು.
ಎಪ್ರಿಲ್ ಹೊತ್ತಿಗೆ ಶಾಲೆ ಮುಗಿಯುತ್ತದೆ, ಮತ್ತೆ? ರಜೆಯಲ್ಲೂ ಮಕ್ಕಳು ಬರುತ್ತಾರಂತೆ, ನೀರು ಹಾಕುತ್ತಾರಂತೆ- ಮೋಡ ದಟ್ಟೈಸಿ ಮಳೆಯೇ ಗಿಡಗಳಿಗೆ ನೀರೂಡುವ ಕೆಲಸವನ್ನು ತನ್ನ ಕೈಗೆತ್ತಿಕೊಳ್ಳುವವರೆಗೆ…
ತೇಜಸ್ವಿ