ವಿಜಯಪುರ: ಜಿಲ್ಲೆಯಲ್ಲಿ ಭೂಕಂಪದ ಅನುಭವ ಆಗಿದ್ದರೂ ಅಪಾಯವಿಲ್ಲ. ವಿಜಯಪುರ ಜಿಲ್ಲೆ ಭೂಕಂಪದ ಎರಡನೇ ವಲಯದಲ್ಲಿದ್ದು, ಅಪಾಯ ಕಡಿಮೆ ಇರುವ ವಲಯದಲ್ಲಿದ್ದು, ಸಾರ್ವಜನಿಕರು ನಿರ್ಭಯವಾಗಿರಿ ಎಂದು ಜಿಲ್ಲಾಡಳಿತ ಅಭಯ ನೀಡಿದೆ.
ಜಿಲ್ಲೆಯಲ್ಲಿ ಭೂಕಂಪದ ಘಟನೆ ಬಳಿಕ ಜಿಲ್ಲಾಧಿಕಾರಿ ಸುನಿಲ್ ಕುಮಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆತಂಕದಲ್ಲಿರುವ ಜಿಲ್ಲೆಯ ಜನರಿಗೆ ಜಿಲ್ಲಾಡಳಿತ ಅಭಯ ನೀಡಿದ್ದಾರೆ.
ಶನಿವಾರ ರಾತ್ರಿ 11-47 ಮತ್ತು 11-49 ಸಮಯದಲ್ಲಿ ಜಿಲ್ಲೆಯ ವಿಜಯಪುರ, ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪನವಾಗಿದೆ.
ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ವಿಜಯಪುರ ಜಿಲ್ಲೆ ಭೂಕಂಪದ ಎರಡನೇ ವಲಯದಲ್ಲಿದೆ. ಕಾರಣ ಕಡಿಮೆ ಅಪಾಯದ ವಲಯಕ್ಕೆ ಸೇರಿದೆ. ಹೀಗಾಗಿ ಜಿಲ್ಲೆಯ ಜನ ವದಂತಿಗಳಿಗೆ ಕಿವಿಗೊಡಬೇಡಿ ಎಂದೂ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ವಿಜಯಪುರದ ಭೂಕಂಪದ ಸದ್ದು, ಶ್ವಾನ ರೋಧನ ಸಿಸಿ ಕ್ಯಾಮರಾದಲ್ಲಿ ದಾಖಲು: ವಿಡಿಯೋ ವೈರಲ್
ಆಲಮಟ್ಟಿಯಲ್ಲಿ ಇರುವ ಮಾಪಕದಲ್ಲಿ ಭೂಕಂಪ 3.9 ತೀವ್ರತೆ ದಾಖಲಾಗಿದೆ. ಈ ಬಗ್ಗೆ ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದಲ್ಲಿ ಭೂಕಂಪದ ಕೇಂದ್ರಿತವಾಗಿತ್ತು ಎಂದೂ ಮಾಹಿತಿ ನೀಡಿದ್ದಾಗಿ ಜಿಲ್ಲಾಡಳಿತ ವಿವರ ನೀಡಿದೆ.