ಗಜೇಂದ್ರಗಡ: ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾರ ಮನವೊಲಿಸಲು ಅಭ್ಯರ್ಥಿಗಳ ಚಿತ್ತ ಮನೆಗಳ ಭೇಟಿಯತ್ತ ನೆಟ್ಟಿದೆ. ಪಟ್ಟಣದ ಪುರಸಭೆ 23 ವಾರ್ಡ್‌ಗಳಿಗೆ ಆ. 31ರಂದು ನಡೆಯಲಿರುವ ಚುನಾವಣೆ ಕೊನೆ ಹಂತಕ್ಕೆ ಬಂದು ತಲುಪಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮನೆಮನೆಗೆ ಭೇಟಿ ನೀಡಿ ಮತದಾರ ಪ್ರಭುಗಳ ಮನವೊಲಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಮತದಾನಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಪಟ್ಟಣದೆಲ್ಲೆಡೆ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ.
ಭರ್ಜರಿ ಪ್ರಚಾರ: ಮತ ಸೆಳೆಯಲು ಅಭ್ಯರ್ಥಿಗಳು ಮನೆಮನೆಗೆ ಭೇಟಿ ಮಳೆಯನ್ನು ಲೆಕ್ಕಿಸದೇ ಪ್ರಚಾರ ಮಾಡುತ್ತಿದ್ದಾರೆ. ಪುರಸಭೆ ಸದಸ್ಯನಾಗಬೇಕೆಂಬ ಹಂಬಲದಿಂದ ಕಣದಲ್ಲಿರುವ ಅಭ್ಯರ್ಥಿಗಳು ಹಗಲು ರಾತ್ರಿಯೆನ್ನದೆ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಲೋಕಸಭೆ ಚುನಾವಣೆಗೆ ದಿಕ್ಸೂಚಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಭದ್ರಬುನಾದಿಯಾಗಲಿದೆ. ರಾಜಕೀಯ ಪಕ್ಷಗಳು ಬೆಳೆಯಲು ರಹದಾರಿಯಾಗಲಿದೆ. ಲೋಕಸಭೆ ಚುನಾವಣೆ ಶೀಘ್ರದಲ್ಲೇ ನಡೆಯಲಿರುವುದರಿಂದ ಸ್ಥಳೀಯ ಸಂಸ್ಥೆ ಚುನಾವಣೆ ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ವರಿಷ್ಠರ ಎದೆಯಲ್ಲಿ ಈಗಾಗಲೇ ಭಯ ಶುರುವಾಗಿದೆ. ಮುಂದಿನ ಲೋಕಸಭೆ ಚುನಾವಣೆ ಗುರಿ ಇಟ್ಟುಕೊಂಡು ಪುರಸಭೆ ಚುನಾವಣೆಯಲ್ಲಿ ಗೆಲುವು ಪಡೆದು ಅಧಿಕಾರದ ಗದ್ದುಗೆ ಹಿಡಯಲು ನಾಯಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ರಾತ್ರಿ ಕಾರ್ಯಾಚರಣೆ: ಮತದಾರರ ಸೆಳೆಯಲು ಕಸರತ್ತು: ಹಲವು ದಿನಗಳಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕತ್ತಲ ರಾತ್ರಿ ಕಾರ್ಯಾಚರಣೆ ಮತ್ತೊಂದು ಆಯಾಮವಾಗಿದೆ. ಮತದಾನದ ಮುನ್ನಾದಿನ ರಾತ್ರಿ ಸಂದರ್ಭದಲ್ಲಿ ಮತದಾರರ ಮನೆ, ಮನೆಗೆ ತೆರಳಿ ಮತದಾರರ ಚಿತ್ತ ತಮ್ಮತ್ತ ಕೇಂದ್ರೀಕರಿಸುವಂಥಹ ತಂತ್ರಗಾರಿಕಗೆ ಮೊರೆ ಹೋಗುತ್ತಿದ್ದಾರೆ.
ಪ್ರತಿಷ್ಠೆಯ ಕಣ: ಪ್ರತಿಷ್ಠೆಯ ಕಣವಾಗಿರುವ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಅ ಧಿಕಾರ ಹಿಡಿಯಲೇ ಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಪಟ್ಟಣಕ್ಕೆ ರಾಜ್ಯ ನಾಯಕರನ್ನು ಕರೆ ತಂದು ಮತಯಾಚನೆಗೆ ಅಣಿಗೊಳಿಸಿದ್ದರು. ಇದಲ್ಲದೆ ತಂಡೋಪ ತಂಡವಾಗಿ ಪ್ರತಿ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿ ಗೆಲುವು ಪಡೆಯಲು ಯತ್ನಿಸುತ್ತಿದ್ದಾರೆ. ಅಂತಿಮವಾಗಿ ಮತದಾರ ಪ್ರಭು ಯಾರಿಗೆ ಮುದ್ರೆ ಒತ್ತಿ ಗೆಲುವಿಗೆ ನಾಂದಿ ಆಗಲಿದ್ದಾನೆ ಎಂಬುದು ತಿಳಿಯಲಿದೆ.
ಡಿ. ಜಿ. ಮೋಮಿನ್