ಬೆಂಗಳೂರು: ನಗರದಲ್ಲಿರುವ ಪಿಜಿಗಳ (ಪೇಯಿಂಗ್ ಗೆಸ್ಟ್) ಮಾಲೀಕರು ಆದಾಯ ತೆರಿಗೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಿಯಮ ಉಲ್ಲಂ ಸಿರುವ ಪಿಜಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಐಟಿ ಇಲಾಖೆ ಎಚ್ಚರಿಕೆ ನೀಡಿದೆ. ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳನ್ನು ಪಿಜಿ ಮಾಲೀಕರು ತಪ್ಪದೆ ಪಾಲಿಸಬೇಕು ಮತ್ತು ಬಾಕಿ ಇರುವ ತೆರಿಗೆಯನ್ನು ಕೂಡಲೇ ಪಾವತಿಸಬೇಕು. ಇಲ್ಲವಾದರೆ ಶಿಸ್ತು ಕ್ರಮ ತಪ್ಪಿದ್ದಲ್ಲ ಎಂದು ಐಟಿ ಇಲಾಖೆ ತಿಳಿಸಿದೆ.
ಪಿಜಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಸಾಮಾನ್ಯವಾಗಿ ಒಂದರಿಂದ ಆರು ತಿಂಗಳ ಬಾಡಿಗೆಯನ್ನು ಠೇವಣಿ ರೂಪದಲ್ಲಿ ಪಾವತಿಸುತ್ತಾರೆ. ಆದರೆ, ಮಾಲೀಕರು ಈ ಬಗ್ಗೆ ಯಾವುದೇ ರಸೀದಿ ನೀಡುವುದಿಲ್ಲ. ಅಲ್ಲದೆ, ನಿವಾಸಿಗಳು ಪಿಜಿ ಖಾಲಿ ಮಾಡುವಾಗ ಅನಗತ್ಯ ಶುಲ್ಕಗಳ ಹೆಸರಿನಲ್ಲಿ ಮಾಲೀಕರು ಠೇವಣಿ ಮೊತ್ತವನ್ನು ಕಡಿತಗೊಳಿಸುತ್ತಾರೆ. ಜತೆಗೆ ತಮ್ಮ ವಹಿವಾಟಿನ ಕುರಿತಾಗಿ ಯಾವುದೇ ಲೆಕ್ಕದ ಪುಸ್ತಕಗಳನ್ನು ನಿರ್ವಹಿಸುತ್ತಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.
ತಾತ್ಕಾಲಿಕ ವಾಸ ಮಾಡುವವರು ಪಾವತಿಸುವ ಹಣಕ್ಕೆ ಮಾಲೀಕರು ದಾಖಲೆ ತೋರಿಸುತ್ತಿಲ್ಲ. ಕೊಠಡಿಯಲ್ಲಿ ಐವರು ವಾಸವಾಗಿದ್ದರೂ, ಇಬ್ಬರೇ ಇದ್ದಾರೆ ಎಂದು ಸುಳ್ಳು ಮಾಹಿತಿ ದಾಖಲಿಸಿರುತ್ತಾರೆ. ಅಷ್ಟೇ ಅಲ್ಲದೆ, ಪಿಜಿಗಳ ವಹಿವಾಟು ಶೇ.80ರಷ್ಟು ನಗದು ರೂಪದಲ್ಲೇ ನಡೆಸುತ್ತಿದ್ದು, ಇವುಗಳ ದಾಖಲೆ ಇಡುವುದಿಲ್ಲ. ಈ ರೀತಿ ಆದಾಯ ಗಳಿಸುವ ಮಾಲೀಕರು ಆದಾಯ ತೆರಿಗೆ ಪಾವತಿ ಮಾಡದೆ ವಂಚಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.
ಪಿಜಿ ಮಾಲೀಕರಿಗೆ ಜಾಗೃತಿ ಕಾರ್ಯಕ್ರಮ: ಐಟಿ ನಿಯಮಗಳ ವ್ಯಾಪಕ ಉಲ್ಲಂಘನೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಫೆ.20ರಂದು ಪಿಜಿ ಮಾಲೀಕರಿಗಾಗಿ “ಜಾಗೃತಿ ಕಾರ್ಯಕ್ರಮ’ ಹಮ್ಮಿಕೊಂಡಿದ್ದು, ನಗರದ ಮಾರತ್‌ಹಳ್ಳಿಯ ತುಳಸಿ ಚಿತ್ರಮಂದಿರ ರಸ್ತೆಯಲ್ಲಿರುವ ಎಸ್‌ಬಿಆರ್ ಪ್ಯಾಲೆಸ್‌ನಲ್ಲಿ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಉಲ್ಲಂಘನೆ ಆಗುತ್ತಿರುವ ನಿಯಮಗಳೇನು
-ಅಧಿಕ ಆದಾಯ ಪಡೆಯುತ್ತಿದ್ದರೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿಲ್ಲ
-ನಿಯಮದ ಪ್ರಕಾರ ರಸೀದಿ ಪುಸ್ತಕ ನಿರ್ವಹಿಸುತ್ತಿಲ್ಲ
-ಮುಂಗಡ ತೆರಿಗೆ ಪಾವತಿಸುತ್ತಿಲ್ಲ
-ಬಾಡಿಗೆದಾರರಿಂದ ಪಡೆಯುವ ಬಾಡಿಗೆಗೆ ಟಿಡಿಎಸ್ ಕಡಿತಗೊಳಿಸುತ್ತಿಲ್ಲ
-ಶೇ.800ರಷ್ಟು ಹಣವನ್ನು ನಗದು ರೂಪದಲ್ಲಿ ಪಡೆಯುತ್ತಿದ್ದರೂ ರಸೀದಿ ಪುಸ್ತಕದಲ್ಲಿ ದಾಖಲಿಸುತ್ತಿಲ್ಲ
-ಪಿಜಿಗಳಲ್ಲಿ ವಾಸಿಸುವವರಿಂದ ಪಡೆಯುವ ಠೇವಣಿ ಹಣದ ಲೆಕ್ಕ ತೋರಿಸುತ್ತಿಲ್ಲ
-ಠೇವಣಿ ಹಣ ಪಡೆದಿದಕ್ಕೆ ರಸೀದಿ ಕೊಡುತ್ತಿಲ್ಲ, ಸರಿಯಾಗಿ ಮರುಪಾವತಿ ಮಾಡುತ್ತಿಲ್ಲ