ವಾಷಿಂಗ್ಟನ್: ಇತ್ತೀಚೆಗೆ ಚಾಟ್‌ಜಿಪಿಟಿ ಬಳಕೆ ಎಲ್ಲೆಡೆ ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ, ಚಾಟ್‌ಜಿಪಿಟಿ ಸಹಾಯದಿಂದ ತನಗೆ ಬರಬೇಕಿದ್ದ ಬಾಕಿ ಸುಮಾರು 90 ಲಕ್ಷ ರೂ. ವಸೂಲಿಯಾಯಿತು ಎಂದು ಲೇಟ್‌ಚೆಕ್‌ಔಟ್ ಕಂಪನಿಯ ಸಿಇಒ ಗ್ರೆಗ್ ಐಸೆನ್‌ಬಗ್ ಟ್ವೀಟ್ ಮಾಡಿದ್ದಾರೆ.
“ಒಂದು ಹೆಸರಾಂತ ಕಂಪನಿಯ ಆರ್ಡರ್‌ಗಳನ್ನು ಪಡೆದು ನಾವು ಸಮಯಕ್ಕೆ ತಕ್ಕಂತೆ ಪ್ರಾಜೆಕ್ಟ್ ಪೂರ್ಣಗೊಳಿಸುತ್ತಿದ್ದೆವು. ಅದೇ ರೀತಿ ಅನೇಕ ಪ್ರಾಜೆಕ್ಟ್ಗಳು ನಡೆಯಿತು. ಆದರೆ ಹಠಾತ್ತನೇ ಕಂಪನಿಯು ನಮಗೆ ಬರಬೇಕಿದ್ದ ಪೇಮೆಂಟ್ ನಿಲ್ಲಿಸಿತು,’ ಎಂದು ಬರೆದುಕೊಂಡಿದ್ದಾರೆ.
“ವಕೀಲರಿಗೆ ಸಂಪರ್ಕಿಸಿದ್ದರೆ ಬಾಕಿ ಬರುವುದು ತಡವಾಗುತ್ತದೆ. ಯೋಚಿಸಿ, ಚಾಟ್‌ಜಿಪಿಟಿ ಬಳಸಿ ಸ್ವಲ್ಪ ಹೆದರಿಸುವ ರೀತಿಯ ಇಮೇಲ್ ಕಳುಹಿಸಿದೆ. ಚಾಟ್‌ಜಿಪಿಟಿ ಸಿದ್ಧಪಡಿಸಿದ ಟೆಕ್ಸ್ಟ್ನಲ್ಲಿ ಸಣ್ಣ-ಪುಟ್ಟ ಬದಲಾವಣೆ ಮಾಡಿದೆ. ಕಂಪನಿಯ ಹಣಕಾಸು ವಿಭಾಗದವರು ಕೂಡಲೇ ನನ್ನ ಇಮೇಲ್‌ಗೆ ಸ್ಪಂದಿಸಿ, ಬಾಕಿ ಇದ್ದ 90,68,187 ರೂ.ಗಳನ್ನು ಪಾವತಿಸಿದರು,’ ಎಂದು ಗ್ರೆಗ್ ತಿಳಿಸಿದ್ದಾರೆ.
“ನಾನು ವಕೀಲರಿಗೆ ನೋಟಿಸ್ ನೀಡಲು ಸುಮಾರು 80,000 ರೂ. ಪಾವತಿಸಬೇಕಿತ್ತು. ಆದರೆ ಯಾವುದೇ ಶುಲ್ಕ ಇಲ್ಲದೇ ಚಾಟ್‌ಜಿಪಿಟಿ ಮೂಲಕ ಬಾಕಿ ವಸೂಲಿಯಾಯಿತು,’ ಎಂದು ಟ್ವೀಟ್ ಮಾಡಿದ್ದಾರೆ.