Advertisement

ವಿಶ್ವ ಚಾಂಪಿಯನ್‌ ಆಗಿದ್ದನ್ನು ನಂಬಲು ಬಹಳ ಹೊತ್ತು ಬೇಕಾಯಿತು: ಸಿಂಧು

11:42 PM Aug 28, 2019 | Team Udayavani |

ಹೈದರಾಬಾದ್‌: ” ನಾನು ವಿಶ್ವ ಚಾಂಪಿಯನ್‌ ಆಗಿದ್ದೇನೆ ಎನ್ನುವುದನ್ನು ಅರಗಿಸಿಕೊಳ್ಳುವುದಕ್ಕೆ ಬಹಳ ದೀರ್ಘ‌ಕಾಲ ಬೇಕಾಯಿತು. ಪಂದ್ಯಕ್ಕೂ ಹಿಂದಿನ ದಿನ ರಾತ್ರಿ ಬಹಳ ಹೊತ್ತು ನಿದ್ರೆ ಮಾಡಿರಲಿಲ್ಲ. ಅದು ಅತೀ ಪ್ರಮುಖ ಪಂದ್ಯ. ಪಂದ್ಯದ ಅಂಕಗಳು, ಹಿಂದಿನ ಪಂದ್ಯಗಳಲ್ಲಿ ನಾನು ಹೇಗೆ ಆಡಿದ್ದೆ ಎನ್ನುವುದನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದೆ. ಅದೃಷ್ಟವಶಾತ್‌ ನಾನು ಅಂದುಕೊಂಡಿದ್ದೆಲ್ಲ ಆಯಿತು. ವಿಶ್ವಚಾಂಪಿಯನ್‌ ಆಗುವುದೊಂದು ಅದ್ಭುತ ಅನುಭವ. ಪಂದ್ಯ ಮುಗಿದ ಬಹಳ ಹೊತ್ತು ನಾನು ಏನನ್ನೂ ತಿನ್ನಲೇ ಇಲ್ಲ…’ ಎಂಬುದಾಗಿ ಪಿ.ವಿ. ಸಿಂಧು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Advertisement

“ನನಗಿದ್ದ ಒಂದೇ ಒಂದು ಯೋಚನೆಯೆಂದರೆ ಅತ್ಯುತ್ತಮವಾಗಿ ಆಡಬೇಕೆನ್ನುವುದು. ಈ ಪಂದ್ಯವನ್ನು ಇತರ ಪಂದ್ಯಗಳಂತೆಯೇ ಪರಿಗಣಿಸಬೇಕೆಂದು ಖಚಿತವಾಗಿ ತೀರ್ಮಾನಿಸಿದ್ದೆ. ಸನ್ನಿವೇಶ ನನ್ನ ಮೇಲೆ ಪ್ರಭಾವಬೀರದಂತೆ ಮಾಡುವುದು ಉದ್ದೇಶವಾಗಿತ್ತು’ ಎಂದು ಸಿಂಧು ಹೇಳಿದರು.

ರಾಷ್ಟ್ರಗೀತೆ ತಂದ ರೋಮಾಂಚನ
ರಾಷ್ಟ್ರಗೀತೆಯನ್ನು ಕೇಳುವುದು ಬಹಳ ವಿಶೇಷ ಅನುಭವ ಎಂದು ಹೇಳಿದ ಪಿ.ವಿ. ಸಿಂಧು, “ಯಾಕೆ ಅಂತ ಗೊತ್ತಿಲ್ಲ, ಬಸೆಲ್‌ನಲ್ಲಿ ಭಾರತದ ರಾಷ್ಟ್ರಧ್ವಜ ಮೇಲೇರುತ್ತಿದ್ದಾಗ, ನಾನು ವಿಶ್ವದ ಅತ್ಯಂತ ಎತ್ತರದ ಸ್ಥಾನದಲ್ಲಿದ್ದೇನೆಂಬ ಭಾವನೆ ಮೂಡಿತ್ತು. ಬಹಳ ರೋಮಾಂಚನವಾಯಿತು ಎಂದರು.

ಒಲಿಂಪಿಕ್ಸ್‌ ಅರ್ಹತಾ ವರ್ಷ
ಚಿನ್ನದ ಪದಕವೆಂದರೆ ಅದು ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸೂಪರ್‌ ಸೀರಿಸ್‌ ಕೂಟಗಳಲ್ಲಿ ಉತ್ತಮವಾಗಿ ಆಡುವುದು ನನ್ನ ಉದ್ದೇಶ. ಈ ವರ್ಷ ಒಲಿಂಪಿಕ್ಸ್‌ಗೆ ಅರ್ಹತಾ ವರ್ಷವೂ ಆಗಿರುವುದರಿಂದ ನನ್ನ ಸಂಪೂರ್ಣ ಸಾಮರ್ಥ್ಯ ತೋರಬೇಕಿದೆ’ ಎಂದು ಹೇಳಿದರು.

“ಕಳೆದ ಕೆಲವು ತಿಂಗಳಿನಿಂದ ದಕ್ಷಿಣ ಕೊರಿಯಾದ ಕಿಮ್‌ ಹಿ ಹ್ಯುನ್‌ ಅವರಿಂದ ತರಬೇತಿ ಪಡೆಯುತ್ತಿದ್ದೇನೆ.ವಿಭಿನ್ನ ಹೊಡೆತಗಳ ಬಗ್ಗೆ ನಾವು ಪ್ರಯೋಗ ನಡೆಸಿದೆವು. ಕೆಲವು ದೋಷಗಳನ್ನು ಆಕೆ ಪತ್ತೆಹಚ್ಚಿದರು. ಅದು ನನ್ನ ನೆರವಿಗೆ ಬಂತು’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next