ಬೆಂಗಳೂರು : ಐಟಿ ಅಧಿಕಾರಿಗಳು ಬುಧವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಭಾರೀ ದಾಳಿ ನಡೆಸಿದ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ನನ್ನ ಮೇಲೂ ಐಟಿ ದಾಳಿ ನಡೆಯಬಹುದು ಎಂದಿದ್ದಾರೆ.
ಐಟಿ ದಾಳಿಯನ್ನು ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ್ ‘ನನಗೆ ಸತತವಾಗಿ ಮಾಹಿತಿ ಬರುತ್ತಿದೆ. ಬಿಜೆಪಿ ಪಕ್ಷ ನನ್ನನ್ನು ಟಾರ್ಗೆಟ್ ಮಾಡಿಕೊಂಡಿದೆ. ಯಾಕೆ ಎಂದು ಗೊತ್ತಿಲ್ಲ. ಇಷ್ಟು ಮಾತ್ರ ಹೇಳುತ್ತೇನೆ, ನಾನು ಯಾರು ಯಡಿಯೂರಪ್ಪ ಅಂತ ಹೇಳಲ್ಲ,ಕಾದು ನೋಡಿ, ನನ್ನನ್ನೇ ಟಾರ್ಗೆಟ್ ಮಾಡಲಾಗಿದೆ’ ಎಂದರು.
‘ನಾನಾಗಲಿ ನನ್ನ ಸಂಸ್ಥೆಯಾಗಲಿ ಐಟಿ ದಾಳಿಯ ಬಗ್ಗೆಭಯ ಹೊಂದಿಲ್ಲ. ಐಟಿ ಅಧಿಕಾರಿಗಳು ಬಂದರೆ ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ’ ಎಂದರು.
‘ಐಟಿಗೆ ಸ್ವಾತಂತ್ರ್ಯಇದೆ. ಎಲ್ಲರದ್ದೂ ತನಿಖೆ ಮಾಡಲಿ, ಕಾಂಗ್ರೆಸ್,ಜೆಡಿಎಸ್, ಬಿಜೆಪಿಯ ನಾಯಕರ ವಿರುದ್ಧ ದಾಳಿ ಮಾಡಲಿ ಆದರೆ ಟಾರ್ಗೆಟ್ ಮಾಡಿ ದಾಳಿ ಮಾಡುವುದು ಬೇಡ.ಕಾಂಗ್ರೆಸ್ ಪಕ್ಷದ ನಾಯಕರನ್ನೇ ಟಾರ್ಗೆಟ್ ಮಾಡುವುದು ಖಂಡನೀಯ, ಎಂದರು.
ಆಪರೇಷನ್ ಕಮಲ ಭೀತಿಯಿಂದ ಗುಜರಾತ್‌ನ ಶಾಸಕರು ತಂಗಿದ್ದ ಬಿಡದಿಯ ಈಗಲ್ ಟನ್ ರೆಸಾರ್ಟ್ ಸೇರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದ 36 ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.