Advertisement

ಡಿಕೆಶಿಗೆ ಐಟಿ ಸಮನ್ಸ್‌; ವಿಚಾರಣೆಗೆ ಹಾಜರಾಗಲು ಸೂಚನೆ

06:00 AM Aug 07, 2017 | Team Udayavani |

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಕೊಂಚ ನಿರಾಳರಾಗಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ಸಮನ್ಸ್‌ ನೀಡಿದೆ.

Advertisement

ನಾಲ್ಕು ದಿನ  ಡಿಕೆಶಿ ಅವರ “ಕೆಂಕೇರಿ’ ನಿವಾಸ ಹಾಗೂ ಆಪ್ತರ ನಿವಾಸಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಅಪಾರ ಪ್ರಮಾಣದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಡಿಕೆಶಿ ಅವರ ಆಪ್ತ ಜೋತಿಷಿ ದ್ವಾರಕಾನಾಥ್‌, ಸಚಿನ್‌ ನಾರಾಯಣ್‌, ಮಾವ ತಿಮ್ಮಯ್ಯ ಸಹಿತ ಹಲವರಿಗೆ ಸಮನ್ಸ್‌ ಜಾರಿಗೊಳಿಸಲಾಗಿದೆ.  ಆದರೆ ಎರಡು ದಿನಗಳ ಕಾಲ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿ ಐಟಿ ಇಲಾಖೆಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ರವಿವಾರ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಶಿವಕುಮಾರ್‌, ಐಟಿ ಇಲಾಖೆ ವಿಚಾರಣೆಗೆ ಹಾಜ
ರಾಗುವ ಸಂಬಂಧ ತನಗೆ ಸಮನ್ಸ್‌ ಜಾರಿಗೊಳಿಸಿದ್ದನ್ನು ಖಚಿತಪಡಿಸಿದ್ದಾರೆ. ಕಾನೂನಿನ ಪ್ರಕಾರ ಐಟಿಯವರು ಸಮನ್ಸ್‌ ಕೊಟ್ಟಿದ್ದಾರೆ. ನಾನು ವಿಚಾರಣೆಗೆ ಹಾಜರಾಗುತ್ತೇನೆ. ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.
 
ದಾಖಲೆಗಳ ಪರಿಶೀಲನೆ: ಈಗಾಗಲೇ ಅಘೋಷಿತ 300 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳನ್ನು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಹಚ್ಚಿರುವ ಐಟಿ ಅಧಿಕಾರಿಗಳು, ಶೋಧ ಕಾರ್ಯ ನಡೆಸಿದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ವಶಪಡಿಸಿಕೊಂಡು ಬಂದಿದ್ದ ಭಾರೀ ಪ್ರಮಾಣದ ದಾಖಲೆಗಳನ್ನು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಡಿಕೆಶಿ ಹೆಸರಿನಲ್ಲಿರುವ ಸ್ಥಿರಾಸ್ತಿ ಚರಾಸ್ಥಿ ಸಂಬಂಧದ ದಾಖಲೆಗಳು, ಡಿಕೆಶಿ ನಿವಾಸ ಹೊರತು ಪಡಿಸಿ ಅವರ ಸಂಬಂಧಿಕರು ಹಾಗೂ ಆಪ್ತರು ನಿವಾಸ, ಕಂಪೆನಿಗಳಲ್ಲಿ ದೊರೆತ ದಾಖಲೆಗಳಿಗೂ ಡಿಕೆಶಿ ವ್ಯವಹಾರ, ವಹಿವಾಟುಗಳಿಗೆ ಸಂಬಂಧವಿದೆಯೇ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ಕಾರ್ಯ ನಡೆಯಲಿದೆ. 

ಈ ಪ್ರಕ್ರಿಯೆ ವೇಳೆ ಶೋಧಕಾರ್ಯಕ್ಕೊಳಗಾದ ಪ್ರತಿಯೊಬ್ಬ ರಿಗೂ ಸಮನ್ಸ್‌ ನೀಡಿ ವಿಚಾರಣೆಗೆ ಕರೆಯಿಸಿಕೊಳ್ಳಲಿದ್ದು, ತನ್ನ ಬಳಿಯಿರುವ ದಾಖಲೆಗಳನ್ನು ಮುಂದಿಟ್ಟುಕೊಂಡು ಅವರ ಹೆಸರಿನಲ್ಲಿರುವ ಆಸ್ತಿ, ತೆರಿಗೆ ಪಾವತಿಸಿದ್ದಾರೆಯೇ ಅಥವಾ ಬೇನಾಮಿ ಹೆಸರುಗಳಲ್ಲಿ ಆಸ್ತಿ ಹೊಂದಿದ್ದಾರೆಯೇ ಎಂಬ ಆಯಾಮಗಳಲ್ಲಿ ಲೆಕ್ಕಪತ್ರಗಳನ್ನಿಟ್ಟು ವಿಚಾರಣೆ ನಡೆಸಲಿದ್ದಾರೆ. 

ಒಂದು ವಾರದಲ್ಲಿ ಇಡಿಗೆ ಪತ್ರ ಸಾಧ್ಯತೆ!: ಐಟಿ ಇಲಾಖೆ ಅಧಿಕಾರಿಗಳ ಪ್ರಾಥಮಿಕ ವರದಿಯಲ್ಲಿ ಅಘೋಷಿತ 300 ಕೋಟಿ ರೂ. ಮೌಲ್ಯದ ಆಸ್ತಿಪತ್ರಗಳು ದೊರೆತಿದ್ದು, ಈ ಬಗ್ಗೆ ಮತ್ತಷ್ಟು ಕೂಲಂಕಷವಾಗಿ ಪರಿಶೀಲನೆ ನಡೆಸಲು ನಿರ್ಧರಿಸಿರುವ ಐಟಿ ಅಧಿಕಾರಿಗಳು. ಈ ಸಂಬಂಧ ಮುಂದಿನ ಒಂದು ವಾರದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯುವ ಸಾಧ್ಯತೆಯಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next