ಲಾರ್ಡ್ಸ್: ಕಳಪೆ ಅಂಪೈರಿಂಗ್ ಗೆ ಸಾಕ್ಷಿಯಾದ 2019ರ ವಿಶ್ವಕಪ್ ಕೊನೆಯಾಗಿದ್ದು ಕೂಡಾ ಕಳಪೆ ಅಂಪೈರಿಂಗ್ ನಿಂದಲೇ. ಮಾರ್ಟಿನ್ ಗಪ್ಟಿಲ್ ಮಾಡಿದ ಥ್ರೋವೊಂದು ಸ್ಟೋಕ್ಸ್ ಬ್ಯಾಟ್ ತಾಗಿ ಬೌಂಡರಿಗೆ ಹೋದಾಗ ಅಂಪೈರ್ ಧರ್ಮಸೇನಾ ಇಂಗ್ಲೆಂಡ್ ಗೆ ಆರು ರನ್ ನೀಡಿದ್ದು ಈಗ ವಿಶ್ವದೆಲ್ಲೆಡೆ ಚರ್ಚೆಯ ವಿಷಯವಾಗಿದೆ.
ಆಗಿದ್ದೇನು ?
ವಿಶ್ವಕಪ್ ಫೈನಲ್ ಪಂದ್ಯ. ಕೊನೆಯ ಓವರ್. ಇಂಗ್ಲೆಂಡ್ ಗೆಲ್ಲಲು ಮೂರು ಎಸೆತದಲ್ಲಿ 9 ರನ್ ಅಗತ್ಯವಿತ್ತು. ಬೌಲ್ಟ್ ಎಸೆದ ಫುಲ್ ಟಾಸ್ ಎಸೆತವನ್ನು ಸ್ಟೋಕ್ಸ್ ಡೀಪ್ ಮಿಡ್ ವಿಕೆಟ್ ಗೆ ಬಾರಿಸಿದರು. ಮೊದಲ ರನ್ ಕದ್ದು ಎರಡನೇ ರನ್ ಕದಿಯಲು ಓಡುತ್ತಾರೆ, ಆಗ ಮಿಡ್ ವಿಕೆಟ್ ನಲ್ಲಿ ಫೀಲ್ಡಿಂಗ್ ಮಾಡಿದಾಗ ಮಾರ್ಟಿನ್ ಗಪ್ಟಿಲ್ ರನ್ ಔಟ್ ಮಾಡಲು ಸ್ಟ್ರೈಕ್ ನತ್ತ ಎಸೆದಾಗ ಬಾಲ್ ಸ್ಟೋಕ್ಸ್ ಬ್ಯಾಟ್ ತಾಗಿ ಬೌಂಡರಿ ಗೆರೆ ತಾಗಿತ್ತು.
ಅಂಪೈರ್ ಕುಮಾರ ಧರ್ಮಸೇನಾ ಇಂಗ್ಲೆಂಡ್ ಗೆ ಆರು ರನ್ ನೀಡಿದರು. ಸ್ಟೋಕ್ಸ್ ಓಡಿದ ಎರಡು ರನ್ ಮತ್ತು ಓವರ್ ಥ್ರೋ ಮಾಡಿದ ನಾಲ್ಕು ರನ್. ಇದುವೇ ಈಗ ಚರ್ಚೆಗೆ ಕಾರಣವಾಗಿರುವುದು.
ಪಂದ್ಯ ಮುಗಿದ ನಂತರ ಈ ಬಗ್ಗೆ ಭಾರಿ ಚರ್ಚೆ ನಡೆದಿದ್ದು, ಇಂಗ್ಲೆಂಡ್ ಗೆ ಆರು ರನ್ ಬದಲಾಗಿ ಐದು ರನ್ ನೀಡಬೇಕಿತ್ತು ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ. ಇದರ ಕುರಿತಾಗಿ ʼಫಾಕ್ಸ್ ಸ್ಪೋರ್ಟ್ಸ್ ʼ ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಅಂಪೈರ್ ಸೈಮನ್ ಟಫೆಲ್, “ ಇಂಗ್ಲೆಂಡ್ ಗೆ ಐದು ರನ್ ನೀಡಬೇಕಿತ್ತು. ಆರು ರನ್ ನೀಡಿರುವುದು ತಪ್ಪು. ಐಸಿಸಿ ನಿಯಮದ ಪ್ರಕಾರ ಫೀಲ್ಡರ್ ಥ್ರೋ ಮಾಡುವ ಮೊದಲು ಇಬ್ಬರು ಬ್ಯಾಟ್ಸಮನ್ ಗಳು ಪರಸ್ಪರ ದಾಟಿ ಹೋಗಿರಬೇಕು. ಆಗ ಮಾತ್ರ ಎರಡನೇ ರನ್ ಮಾನ್ಯವಾಗುತ್ತದೆ. ಆದರೆ ಈ ಘಟನೆಯಲ್ಲಿ ಹೀಗಾಗಿರಿಲ್ಲ. ಹಾಗಾಗಿ ಐದು ರನ್ ಮಾತ್ರ ನೀಡಬೇಕಿತ್ತು. ಮತ್ತು ಮುಂದಿನ ಎಸೆತವನ್ನು ಸ್ಟೋಕ್ಸ್ ಬದಲಾಗಿ ಆದಿಲ್ ರಶೀದ್ ಆಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಫೀಲ್ಡರ್ ಥ್ರೋ ಮಾಡುವ ಮೊದಲು ಇಬ್ಬರು ಬ್ಯಾಟ್ಸಮನ್ ಗಳು ಪರಸ್ಪರ ದಾಟಿ ಹೋಗಿರಬೇಕು