Advertisement

ಪಲ್ಲಕ್ಕಿ ಹೊರುವ ಬದಲು ಕೂಡಬೇಕು: ರೇವಣ್ಣ

11:27 AM Sep 25, 2017 | |

ಕಲಬುರಗಿ: ಕುರುಬರು ಶೈಕ್ಷಣಿಕ, ಆರ್ಥಿಕ ಬದಲಾಣೆಗೆ ಒಳಗಾಗುತ್ತಿದ್ದರೂ ಪಲ್ಲಕ್ಕಿ ಹೊರುವ ಸಂಸ್ಕೃತಿ ಬಿಟ್ಟಿಲ್ಲ. ಪಲ್ಲಕ್ಕಿ ಹೊರುವ ಬದಲು ಅದರಲ್ಲಿ ಕೂಡುವುದನ್ನು ಕಲಿಯಬೇಕಿದೆ. ಅಂದಾಗ ಮಾತ್ರವೇ ನಾವು ಬಹುಸಂಖ್ಯಾತರ ಮುಖ್ಯವಾಹಿನಿಯಲ್ಲಿ ಪರಿಗಣಿಸಲ್ಪಡುತ್ತೇವೆ ಎಂದು ಸಾರಿಗೆ ಖಾತೆ ಸಚಿವ ಎಚ್‌.ಎಂ. ರೇವಣ್ಣ ಹೇಳಿದರು.

Advertisement

ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ರವಿವಾರ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಘಟಕ, ಜಿಲ್ಲಾ ಕುರುಬ(ಗೊಂಡ)ನೌಕರರ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾವು ಸಂಘಟಿತರಾಗುತ್ತಿದ್ದೇವೆ ಎನ್ನುವ ಸಂತೋಷವಿದೆ. ಇದಕ್ಕೆ ಮೂಲಕ ಕಾರಣ ಕೊಲ್ಲೂರು ಮಲ್ಲಪ್ಪನವರು. ಅವರು ಈ ಭಾಗದ ಯಾದಗಿರಿಯವರು ಎನ್ನುವುದು ನನಗೆ ಹೆಮ್ಮೆಯ ವಿಚಾರ. ಅವರು ಮಾಜಿ ಮುಖ್ಯಮಂತ್ರಿ ದಿ| ದೇವರಾಜು ಅರಸು ಕಾಲದಲ್ಲಿ ನಮ್ಮ ಜನಾಂಗವನ್ನು ತುಂಬಾ ಜತನದಿಂದ ಕಾಪಾಡಿದ್ದಾರೆ.

ರಾಜಕೀಯ ಮಾರ್ಗದರ್ಶನ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಇವತ್ತು ನಾವು ಮುಖ್ಯಮಂತ್ರಿ ಅಂತಹ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಕನಕದಾಸರ 500ನೇ ಜಯಂತಿ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರು ಇಡೀ ಭಾರತ ದೇಶದ 30 ರಾಜ್ಯಗಳಲ್ಲಿ ಅತ್ಯಂತ ಸಮರ್ಥ ಮತ್ತು ನ್ಯಾಯಪರ, ಜನಪರ ಹಾಗೂ ಜನಮುಖೀ ಯೋಜನೆಗಳನ್ನು ಎಲ್ಲ ಜಾತಿ ಧರ್ಮದ ಜನರಿಗೆ ಒದಗಿಸುವ ಮೂಲಕ ಅತ್ಯುತ್ತಮ ಮುಖ್ಯಮಂತ್ರಿ
ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅದು ನಮ್ಮ ಸಮಾಜಕ್ಕೆ ಸಿಗುವ ಸಾರ್ವಜನಿಕ ಮನ್ನಣೆ. ರಾಜ್ಯದಲ್ಲಿ
ದೇವರಾಜು ಅರಸು ಬಳಿಕ ಸಾಮಾಜಿಕ ನ್ಯಾಯದ ಒತ್ತಾಸೆಯಲ್ಲಿ 5 ವರ್ಷ ಸಂಪೂರ್ಣ ರಾಜ್ಯಭಾರ ಮಾಡಿ ಹಲವಾರು ಭಾಗ್ಯ ನೀಡುವ ಮೂಲಕ ಸರಕಾರದ ಅವಧಿ ಪೂರ್ಣಗೊಳಿಸಿದ್ದಾರೆ. ಆದ್ದರಿಂದ ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅವರಿಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರು ನೇತೃತ್ವ ನೀಡಿದ್ದಾರೆ ಎಂದು ಹೇಳಿದರು.

Advertisement

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಕ ಭವನಕ್ಕಾಗಿ ಒಟ್ಟು 175 ಕೋಟಿ ರೂ. ನೀಡಲಾಗಿದೆ. ಹೈಕ ಭಾಗದ ಬೀದರ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕುರುಬ ಮತ್ತು ಗೊಂಡ ಜಾತಿ ಪ್ರಮಾಣ ಪತ್ರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಉಂಟು ಮಾಡಿರುವ ಗೊಂದಲ ನಿಭಾಯಿಸಿದ್ದೇವೆ. ಕಿರಿಕ್‌ ಮಾಡಿರುವ ಅಧಿಕಾರಿಗಳನ್ನು ಬದಲಾಯಿಸಿದ್ದೇವೆ. ಶೀಘ್ರವೇ ಈ ಭಾಗದಲ್ಲಿ ಪ್ರಮಾಣ ಪತ್ರ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರದೇಶ ಕುರುಬರ ಸಂಘದ ರಾಜ್ಯ ಕಾರ್ಯದರ್ಶಿ ಕೆ. ರಾಮಚಂದ್ರಪ್ಪ ಮಾತನಾಡಿ, ಇವತ್ತು ಕುರುಬರು ಹಲವಾರು ಕ್ಷೇತ್ರಗಳಲ್ಲಿ ಗಣನೀಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಆಗಬೇಕು. ಎಸ್‌ಟಿ ಪ್ರಮಾಣ ಪತ್ರವೂ ಸೇರಿದಂತೆ ಹಲವಾರು ಗೊಂದಲಗಳು ಇದ್ದವು. ಅವುಗಳನ್ನು ಸಚಿವರು ಹಾಗೂ ಮುಖ್ಯಮಂತ್ರಿಗಳು ಸೇರಿಕೊಂಡು ಬಗೆಹರಿಸಿದ್ದಾರೆ.

ನಮ್ಮ ಜನಾಂಗದ ಯುಕವರು ಅತಿ ಹೆಚ್ಚು ಶಿಕ್ಷಣ ಮತ್ತು ಆರ್ಥಿಕ ವಲಯದಲ್ಲಿ ಸಾಧನೆ ಮಾಡಬೇಕು. ಆ ಮೂಲಕ ಪುನಃ ಸಮಾಜಕ್ಕೆ ಕೊಡುಗೆ ನೀಡುವುದು ಮರೆಯಬಾರದು ಎಂದು ಕಿವಿಮಾತು ಹೇಳಿದರು. ಬಸವರಾಜ ಜಿಳ್ಳೆ, ಎಸ್‌.ಎಸ್‌. ಹುಲ್ಲೂರು, ಜಗನ್ನಾಥ ಪೂಜಾರಿ, ದೇವೀಂದ್ರಪ್ಪ ಮರತೂರ ಹಾಗೂ ಮಂಜುಳಾ ಸಾತನೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಬಳಬಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುರುಬ ಸಮಾಜದ ಸ್ವಾಮೀಜಿ, ಜಿಪಂ ಸದಸ್ಯರಾದ ದಿಲೀಪ ಪಾಟೀಲ, ರತನವ್ವ ಕಲ್ಲೂರ, ಬಸವರಾಜ ಬುಳ್ಳಾ ಎಂ.ವಿ. ಸೋಮಶೇಖರ, ಆರ್‌. ರಾಮಕೃಷ್ಣ ಮಲ್ಲಿಕಾರ್ಜುನ ಬಂಕೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next