Advertisement

ಜೂನ್‌ ಮೊದಲ ವಾರ ಮಳೆ, ಈ ಬಾರಿ ವಾಡಿಕೆಯ ಮಳೆ ಸಾಧ್ಯತೆ

12:01 AM May 15, 2022 | Team Udayavani |

ಮಂಗಳೂರು: ಕರಾವಳಿಗೆ ವಾಡಿಕೆಯಂತೆ ಜೂನ್‌ ಮೊದಲ ವಾರ ಮುಂಗಾರು ಮಾರುತ ಅಪ್ಪಳಿಸುವ ನಿರೀಕ್ಷೆ ಇದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಡಿಕೆ ಮಳೆ ಸುರಿಯುವ ಸಾಧ್ಯತೆ ಇದೆ. ಅದಕ್ಕೆ ತಕ್ಕಂತೆ ಈ ಬಾರಿ ಚಂಡಮಾರುತ ಕೂಡ ಪೂರಕವಾಗಲಿದೆ.

Advertisement

ಹವಾಮಾನ ತಜ್ಞರ ಪ್ರಕಾರ ಈಗಾಗಲೇ ಸೃಷ್ಟಿಯಾದ “ಅಸಾನಿ’ ಚಂಡಮಾರುತ ಸದ್ಯ ಕ್ಷೀಣಿಸುತ್ತಿದ್ದು, ಬಳಿಕ ವಾತಾವರಣದಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ವಾತಾ ವರಣದ ಒತ್ತಡ
ಕಡಿಮೆಯಾಗಿ ಹಿಂದೂಮಹಾಸಾಗರದಲ್ಲಿ ಒತ್ತಡ ಹೆಚ್ಚಾಗಲಿದೆ. ಗಾಳಿಯ ವೇಗದಿಂದಾಗಿ ಮುಂಗಾರು ಮಾರುತ ವೇಗವಾಗಿ ಕರಾವಳಿ ಭಾಗಕ್ಕೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದರೆ ಮುಂದೆ ಆಗಮಿಸುವ ಮುಂಗಾರು ಮಾರುತದ ಪ್ರಭಾವ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಆದರೆ ಈ ಬಾರಿ ಮುಂಗಾರು ಆಗಮನದ ವೇಳೆ ಚಂಡಮಾರುತವೂ ಪ್ರಭಾವ ಬೀರುವ ಸಾಧ್ಯತೆ ಇದ್ದು, ಮುಂಗಾರು ವಾಡಿಕೆಯಂತೆ ಪ್ರವೇಶ ಪಡೆದು ಬಿರುಸು ಪಡೆಯುವ ನಿರೀಕ್ಷೆ ಇದೆ.

ಕಳೆದ ವರ್ಷ ರಾಜ್ಯ ಕರಾವಳಿಗೆ ಜೂನ್‌ 4ರಂದು ಮುಂಗಾರು ಅಪ್ಪಳಿಸಿದ್ದು, ಬಳಿಕ ಉತ್ತಮ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಒಂದು ದಿನ ಭಾರೀ ಮಳೆಯಾಗಿತ್ತೇ ವಿನಃ ಬಳಿಕ ಮುಂಗಾರು ಕ್ಷೀಣಿಸಿತ್ತು. ಮುಂಗಾರು ಕೊನೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಒಟ್ಟಾರೆ 3,101 ಮಿ.ಮೀ. ವಾಡಿಕೆ ಮಳೆಯಲ್ಲಿ 2,692 ಮಿ.ಮೀ. ಮಳೆ ಸುರಿದು ಶೇ. 13ರಷ್ಟು ಕೊರತೆಯಾಗಿತ್ತು.

ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಜನವರಿಯಿಂದ ಎಪ್ರಿಲ್‌ ವರೆಗೆ ವಾಡಿಕೆಗಿಂತ ಉತ್ತಮ ಬೇಸಗೆ ಮಳೆ ಸುರಿದಿದೆ. ಕೆಎಸ್‌ಎನ್‌ಡಿಎಂಸಿ ಅಂಕಿ ಅಂಶದಂತೆ ದ.ಕ. ಜಿಲ್ಲೆಯಲ್ಲಿ 104 ಮಿ.ಮೀ. ವಾಡಿಕೆ ಮಳೆಯಲ್ಲಿ 190 ಮಿ.ಮೀ. ಮಳೆಯಾಗಿ ಶೇ. 84ರಷ್ಟು ಮಳೆ ಅಧಿಕ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ 59 ಮಿ.ಮೀ. ವಾಡಿಕೆ ಮಳೆಯಲ್ಲಿ 135 ಮಿ.ಮೀ. ಮಳೆ ಸುರಿದು ಶೇ. 128ರಷ್ಟು ಅಧಿಕ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 34 ಮಿ.ಮೀ. ವಾಡಿಕೆ ಮಳೆಯಲ್ಲಿ 85 ಮಿ.ಮೀ. ಮಳೆಯಾಗಿ ಶೇ. 148ರಷ್ಟು ಅಧಿಕ ಮಳೆಯಾಗಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ 58.6 ಮಿ.ಮೀ. ವಾಡಿಕೆ ಮಳೆಯಲ್ಲಿ 97.1 ಮಿ.ಮೀ. ಮಳೆ ಸುರಿದು ಶೇ. 65.7ರಷ್ಟು ಅಧಿಕ ಮಳೆಯಾಗಿದೆ.

ಉಷ್ಣಾಂಶ ಏರಿಕೆ ಸಾಧ್ಯತೆ
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಇದ್ದ ಉರಿ ಸೆಕೆ ತುಸು ಕಡಿಮೆಯಾಗಿದ್ದು, ಚಂಡಮಾರುತದ ಪರಿಣಾಮ ಕ್ಷೀಣಿಸಿದ ಬಳಿಕ ಗರಿಷ್ಠ ಉಷ್ಣಾಂಶ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಸದ್ಯ ಗರಿಷ್ಠ ಉಷ್ಣಾಂಶ ಮಧ್ಯಾಹ್ನ ವೇಳೆ ಸುಮಾರು 35 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಮಂಗಳೂರಿನಲ್ಲಿ 37.5 ಡಿ.ಸೆ. ಈವರೆಗೆ ಎಪ್ರಿಲ್‌ನಲ್ಲಿ ದಾಖಲಾದ ದಾಖಲೆಯ ಸರಾಸರಿ ಗರಿಷ್ಠ ತಾಪಮಾನ 2019ರ ಎಪ್ರಿಲ್‌ನಲ್ಲಿ 36.9 ಡಿ.ಸೆ., 2020ರಲ್ಲಿ 37.5 ಡಿ.ಸೆ., 2021ರಲ್ಲಿ 36.4 ಡಿ.ಸೆ. ದಾಖಲೆಯ ತಾಪಮಾನ ದಾಖಲಾಗಿತ್ತು.

Advertisement

“ಅಸಾನಿ’ ಚಂಡಮಾರುತ ಕ್ಷೀಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಏರಿಕೆ ಸಾಧ್ಯತೆ ಇದೆ. ಇದು ಮುಂಗಾರು ಆಗಮನಕ್ಕೆ ಪೂರಕವಾಗಬಹುದು. ಪ್ರಾಥಮಿಕ ಹಂತದ ಮಾಹಿತಿಯಂತೆ ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಾರುತ ಅಪ್ಪಳಿಸಿ, ಈ ಬಾರಿ ವಾಡಿಕೆಯಂತೆ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ.
– ಡಾ| ರಾಜೇಗೌಡ,
ಕೃಷಿ ವಿ.ವಿ. ಹವಾಮಾನ ವಿಜ್ಞಾನಿ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next