ಬೆಂಗಳೂರು : ವೈದ್ಯಕೀಯ ಸೀಟು ಶುಲ್ಕ ಅವ್ಯವಹಾರ ಮತ್ತು ತೆರಿಗೆ ವಂಚನೆ ಆರೋಪ ಸಂಬಂಧ ಮಂಗಳೂರು, ಬೆಂಗಳೂರು ಸಹಿತ ರಾಜ್ಯದ ಪ್ರತಿಷ್ಠಿತ 11 ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜುಗಳು ಹಾಗೂ ಅವುಗಳ ಮಾಲಕರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ದಿಲ್ಲಿ, ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಸುಮಾರು 250ಕ್ಕೂ ಅಧಿಕ ಅಧಿಕಾರಿಗಳ ತಂಡ ಬೆಳಗ್ಗೆ 7ರ ಸುಮಾರಿಗೆ ಬೆಂಗಳೂರು, ದಾವಣಗೆರೆ, ತುಮಕೂರು, ಮಂಗಳೂರು, ದೇವನಹಳ್ಳಿ ಸೇರಿ 70ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರವೇಶ, ಆಡಳಿತ ಮಂಡಳಿ ಸಂಗ್ರಹಿಸಿದ ಶುಲ್ಕ ಮತ್ತು ಸರಕಾರದ ನಿಗದಿತ ಶುಲ್ಕದ ಬಗ್ಗೆ ಪರಿಶೀಲಿಸಿದ್ದಾರೆ.
ಬೆಂಗಳೂರಿನ ಕೆಂಗೇರಿ, ದೇವನಹಳ್ಳಿ, ಹೆಸರಘಟ್ಟದಲ್ಲಿರುವ 3 ಕಾಲೇಜುಗಳು, ಮಂಗಳೂರಿನ 4, ತುಮಕೂರಿನ 1, ದಾವಣಗೆರೆಯ 3 ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ನಡೆಸಲಾಗಿದೆ.
ಅಲ್ಲದೆ ಮೆಡಿಕಲ್ ಕಾಲೇಜುಗಳ ಮಾಲಕರು, ನಿರ್ದೇಶಕರು, ಪಾಲುದಾರರು, ಈ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಸಿಬಂದಿ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ಮೂಲ್ಕಿಯ ಓರ್ವ ವೈದ್ಯರ ಮನೆಗೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಶೋಧ ಕಾರ್ಯ ಸಂದರ್ಭದಲ್ಲಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಈ ಸಂಸ್ಥೆಗಳು ಕೊರೊನಾ ಸಂದರ್ಭ ಅವ್ಯಹಾರ ನಡೆಸಿ ತೆರಿಗೆ ವಂಚಿಸಿವೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ಕೆಲವೆಡೆ ಲಕ್ಷಾಂತರ ರೂ. ನಗದು, ವಿದ್ಯಾರ್ಥಿಗಳ ಪ್ರವೇಶಾತಿ ದಾಖಲೆಗಳು ಮತ್ತು ಇತರ ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ಐಟಿ ಮೂಲಗಳು ತಿಳಿಸಿವೆ.
ಫುಟ್‌ಬಾಲ್ ಸ್ಟಿಕರ್ ಬಳಕೆ
ದಾಳಿಗಾಗಿ 250ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಸುಮಾರು 70 ಕಾರುಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದರು. ಎಲ್ಲ ಕಾರುಗಳಿಗೆ “ಇಂಟರ್ ನ್ಯಾಷನಲ್ ಫುಟ್ಬಾಲ್ ಚಾಂಪಿಯನ್‌ಶಿಪ್’ ಎಂಬ ಸ್ಟಿಕ್ಕರ್ ಅಂಟಿಸಿಕೊಂಡಿದ್ದವು.