ಕೆಲ ದಿನಗಳ ಹಿಂದೆಯಷ್ಟೇ ನಮ್ಮ ಆಪ್ತರ ಮೇಲೆ ಐಟಿ ದಾಳಿ ಆಗುವ ಷಡ್ಯಂತ್ರವಿದೆ ಎಂಬುದಾಗಿ ವಿನಯ ಕುಲಕರ್ಣಿ ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲಿಯೇ ಮಾಜಿ ಸಚಿವರ ಆಪ್ತ ಪ್ರಶಾಂತ ಕೇಕರೆ ಹಾಗೂ ಧಾರವಾಡ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ ಮೇಲೆ ಈ ದಾಳಿ ಕೈಗೊಳ್ಳಲಾಗಿದೆ.
Advertisement
ಸಪ್ತಾಪುರ ಕೃಷಿ ಪಾರ್ಕ್‌ನಲ್ಲಿ ಇರುವ ಪ್ರಶಾಂತರ ಮನೆಯಿದ್ದು, ಸಂಜೆ ಹೊತ್ತಿಗೆ ಐಟಿ ಅಧಿಕಾರಿಗಳ ತಂಡವು ಮನೆಗೆ ದಾಳಿಯಿಟ್ಟಿದೆ. ಪ್ರಶಾಂತ ಮನೆಯಲ್ಲಿ ಇಲ್ಲದ ಕಾರಣ ಮನೆಗೆ ಬೀಗ ಹಾಕಿದ್ದು, ಪ್ರಶಾಂತ ಅವರಿಗೆ ಸ್ವಲ್ಪ ಹೊತ್ತು ಅಧಿಕಾರಿಗಳ ತಂಡ ಕಾದಿದೆ. ಇದಾದ ಬಳಿಕ ಸುದ್ದಿ ತಿಳಿದು ಮನೆಯತ್ತ ಆಗಮಿಸಿದ ಪ್ರಶಾಂತ ಕೇಕರೆ, ಚುನಾವಣೆ ಸಮಯದಲ್ಲಿ ಇದೆಲ್ಲವೂ ಸಾಮಾನ್ಯ ಎನ್ನುತ್ತಲೇ ಮನೆಯ ಬೀಗ ತೆರೆದುಐಟಿ ಅಧಿಕಾರಿಗಳ ಮನೆಯ ಪ್ರವೇಶಕ್ಕೆ ಅನುವು ಮಾಡಿದ್ದಾರೆ. ಇದಾದ ಬಳಿಕ ಐಟಿ ಅಧಿಕಾರಿಗಳ ತಂಡವು ಮನೆಯ ಪರಿಶೀಲನೆ ಮಾಡಿದ್ದು, ಕೆಲ ದಾಖಲೆಗಳ ಕಲೆ ಹಾಕುವತ್ತ ಕಾರ್ಯ ಕೈಗೊಂಡಿದೆ. ಇದಲ್ಲದೇ ಮುರುಘಾಮಠದ ಬಳಿ ಇರುವ ಈಶ್ವರ ಶಿವಳ್ಳಿ ಅವರ ಕಚೇರಿಗೆ ಐಟಿ ದಾಳಿ ಕೈಗೊಂಡಿದೆ.
ಶಿವಳ್ಳಿ ಇದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಈ ಇಬ್ಬರನ್ನೂ ಕರೆಯಿಸಿಕೊಂಡ ಅಽಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ. ಈ ಹಿಂದೆ ವಿನಯ ಕುಲಕರ್ಣಿ ಸಚಿವರಾಗಿದ್ದ ಸಮಯದಲ್ಲಿ ಪ್ರಶಾಂತ ಕೇಕರೆ ಸಚಿವರ ಆಪ್ತ ಸಹಾಯಕರಾಗಿದ್ದರು. ಆಗ 2018 ಚುನಾವಣೆ ಸಮಯದಲ್ಲಿಯೂ ಮೇ 11 ರಂದು ಕೇಕರೆ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ಈಗಲೂ ಕೂಡ ಮತದಾನ ದಿನ ಹತ್ತಿರ ಸನ್ನಿಹಿತದಲ್ಲಿಯೇ ಕುಲಕರ್ಣಿ ಅವರ ಆಪ್ತರ ಮೇಲೆ ಐಟಿ ದಾಳಿಯಾಗಿದ್ದು, ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವೊದಗಿಸಿದೆ.