Advertisement

ಅಮೆರಿಕದಲ್ಲಿ ಉಳಿಯಲು ಐಟಿ ವೃತ್ತಿಪರರ ಪರದಾಟ

10:12 PM Jan 23, 2023 | Team Udayavani |

ವಾಷಿಂಗ್ಟನ್‌: ಗೂಗಲ್‌, ಮೈಕ್ರೋಸಾಫ್ಟ್, ಅಮೆಜಾನ್‌ ಸೇರಿದಂತೆ ಸಾಲು- ಸಾಲು ಸಂಸ್ಥೆಗಳು ಉದ್ಯೋಗ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಐಟಿ ವೃತ್ತಿಪರರು ನಿರುದ್ಯೋಗಿಗಳಾಗಿ ಪರದಾಡುವಂತಾಗಿದೆ. ಅಲ್ಲದೆ ಉದ್ಯೋಗ ನಿಮಿತ್ತ ಪಡೆದಿರುವ ವೀಸಾ ಅವಧಿ ಮುಗಿಯುವ ಒಳಗೆ ಹೊಸ ಉದ್ಯೋಗ ಹುಡಕಲು ಹೆಣಗಾಡುತ್ತಿದ್ದಾರೆ.

Advertisement

ವಾಷಿಂಗ್ಟನ್‌ ಪೋಸ್ಟ್‌ ವರದಿಗಳ ಪ್ರಕಾರ 2 ಲಕ್ಷ ಭಾರತೀಯ ಐಟಿ ವೃತ್ತಿಪರರು ಕಳೆದ ವರ್ಷದ ನವೆಂಬರ್‌ನಿಂದ ನಿರುದ್ಯೋಗಿಗಳಾಗಿದ್ದಾರೆ. ಅವರ ಪೈಕಿ ಶೇ. 30ರಿಂದ 40ರಷ್ಟು ಮಂದಿ ಅಮೆರಿಕದ ಉದ್ಯೋಗ ವೀಸಾ ಎಚ್‌-1ಬಿ ಹಾಗೂ ಎಲ್‌1 ವೀಸಾ ಹೊಂದಿದ್ದಾರೆ.

ಎಚ್‌1-ಬಿ ವಲಸೆ ರಹಿತ ವೀಸಾ ಆಗಿದ್ದು, ಅಮೆರಿಕದ ಸಂಸ್ಥೆಗಳಿಗೆ ಅಗತ್ಯವಿರುವ ವಿದೇಶಗಳಲ್ಲಿನ ವೃತ್ತಿಪರರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಟ್ಟರೆ, ಎಲ್‌1 ವೀಸಾ ಅಮೆರಿಕದ ಸಂಸ್ಥೆಗಳಲ್ಲಿ ವ್ಯವಸ್ಥಾಪಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂಥವರಿಗೆ ನೀಡುವುದಾಗಿದೆ.

ಈ ವೀಸಾಗಳ ಅನ್ವಯ ಅಮೆರಿಕದಲ್ಲಿರುವ ವೃತ್ತಿಪರರಿಗೆ ಅವರು ಉದ್ಯೋಗದಲ್ಲಿ ಇದ್ದರಷ್ಟೇ ದೇಶದಲ್ಲಿ ಉಳಿಯುವ ಅವಕಾಶವಿದೆ. ಉದ್ಯೋಗ ನಷ್ಟವಾದರೆ 60 ದಿನಗಳ ಒಳಗಾಗಿ ಆ ಉದ್ಯೋಗಿ ಎಚ್‌1-ಬಿ ವೀಸಾ ಪ್ರಾಯೋಜಿಸುವಂಥ ಮತ್ತೊಂದು ಉದ್ಯೋಗವನ್ನು ಹುಡುಕಿಕೊಳ್ಳಬೇಕು. ಇಲ್ಲವಾದಲ್ಲಿ ಅವಧಿ ಮುಗಿದ 10 ದಿನದ ಒಳಗೆ ದೇಶ ತೊರೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ವೃತ್ತಿಪರರು ಕಂಗಾಲಾಗಿದ್ದು, ಸೀಮಿತ ಅವಧಿಯಲ್ಲಿ ಉದ್ಯೋಗ ಹುಡುಕಲು ಹೆಣಗಾಡುತ್ತಿದ್ದಾರೆ ಎನ್ನಲಾಗಿದೆ.

ಜಾಲತಾಣದಲ್ಲಿ ಗೋಳಾಟ
800 ಭಾರತೀಯ ಐಟಿ ವೃತ್ತಿಪರರು ವಾಟ್ಸ್‌ಆ್ಯಪ್‌ ಗುಂಪೊಂದನ್ನು ರಚಿಸಿಕೊಂಡಿದ್ದು, ಹಲವು ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಉದ್ಯೋಗ ಕಡಿತ ನಿರ್ಧಾರದಿಂದ ತೀವ್ರ ಸಮಸ್ಯೆ ಎದುರಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

Advertisement

ಕೆಲಸ ಸಿಗುವುದು ಕಷ್ಟ?
ಸದ್ಯಕ್ಕೆ ಅಮೆರಿಕದಲ್ಲಿ ಬಹುತೇಕ ಕಂಪೆನಿಗಳು ಕೆಲಸದಿಂದ ತೆಗೆಯುತ್ತಿವೆ. ಯಾವುದೇ ಕಂಪೆನಿಗಳಲ್ಲೂ ಹೊಸ ಉದ್ಯೋಗಾವಕಾಶ ಇಲ್ಲ. ಹೀಗಾಗಿ 60 ದಿನಗಳಲ್ಲಿ ಉದ್ಯೋಗ ಹುಡುಕಿಕೊಳ್ಳುವುದು ಬಹುತೇಕ ಕಷ್ಟ. ಅನಿವಾರ್ಯವಾಗಿ ಭಾರತಕ್ಕೆ ವಾಪಸ್‌ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉದ್ಯೋಗಿಯೊಬ್ಬರು ಹೇಳಿಕೊಂಡಿದ್ದಾರೆ.

ಮನೆ ಮಠ ಮಾರಾಟ
ಕೆಲಸ ಕಳೆದುಕೊಂಡಿರುವ ಬಹುತೇಕ ಭಾರತೀಯರು ತೀರಾ ಸಂಕಷ್ಟದಲ್ಲಿದ್ದು, ಇದುವರೆಗೆ ಅಮೆರಿಕದಲ್ಲಿ ಮಾಡಿಕೊಂಡಿರುವಂಥ ಆಸ್ತಿಪಾಸ್ತಿ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ. ಮಕ್ಕಳ ಶಿಕ್ಷಣ, ಸಂಸಾರ ನಿರ್ವಹಣೆಯೂ ಸವಾಲಾಗಿದೆ. ಈ ನಡುವೆ ಗ್ಲೋಬಲ್‌ ಇಂಡಿಯನ್‌ ಟೆಕ್ನಾಲಜಿ ಪ್ರೊಫೆಶನಲ್ಸ್‌ ಅಸೋಸಿಯೇಶನ್ಸ್‌, ಫೌಂಡೇಶನ್‌ ಫಾರ್‌ ಇಂಡಿಯಾ ಆ್ಯಂಡ್‌ ಇಂಡಿಯನ್‌ ಡಯಾನ್ಪೋರಾ ಸ್ಟಡೀಸ್‌ಗಳು ಕೆಲಸ ಕಳೆದುಕೊಂಡಿರುವವರ ನೆರವಿಗೆ ಧಾವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next