ಈ ಕಲರ್‌ಫುಲ್ ಜಗತ್ತೇ ಹಾಗೆ. ಇಲ್ಲಿ ಪ್ರತಿಭೆ ಇದ್ದರೆ, ಯಾರು ಏನು ಬೇಕಾದರೂ ಆಗಬಹುದು. ಈಗಾಗಲೇ ಅದು ಸಾಬೀತಾಗಿದೆ ಕೂಡ. ಆ ಸಾಲಿಗೆ ಐಟಿ ಕಂಪೆನಿಯ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಸೇರಿದ್ದಾನೆ. ಅವನೊಳಗಿರುವ ಪ್ರತಿಭೆ ಮೆಚ್ಚಿಕೊಂಡು ಎಂಎನ್‌ಸಿ ಐಟಿ ಕಂಪೆನಿ ಮಂದಿ ಸೇರಿ, ಆ ಹುಡುಗನಿಗೊಂದು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಎಂಸಿಬಿ (ಮಿಡಲ್ ಕ್ಲಾಸ್ ಬಾಯ್ಸ) ಎಂಬ ವೀಡಿಯೋ ಆಲ್ಬಂ ಮಾಡುವ ಮೂಲಕ ಅವನೊಳಗಿನ ಪ್ರತಿಭೆಗೆ ಸಾಥ್ ಕೊಟ್ಟಿದ್ದಾರೆ.
ಅಂದಹಾಗೆ, ಆ ಹುಡುಗನ ಹೆಸರು ಟೋನಿ. ಸಾಹಿತ್ಯ ಬರೆದು, ಆ ವೀಡಿಯೋ ಆಲ್ಬಂನಲ್ಲಿ ಸ್ಟೆಪ್ ಹಾಕಿರುವ ಟೋನಿ ಟ್ರೀನ್ಸ್‌ನನ್ನು ಕರೆದುಕೊಂಡು ಪತ್ರಕರ್ತರ ಮುಂದೆ ಬಂದಿದ್ದರು ಐಟಿ ಮಂದಿ. “ಐಟಿಬಿಟಿಯಿಂದ ಕನ್ನಡ ದೂರವಾಗುತ್ತಿದೆ ಎಂಬ ಮಾತಿದೆ. ಅದನ್ನು ಸುಳ್ಳು ಮಾಡೋಕೆ ನಾವು ನಮ್ಮಲ್ಲಿ ಪ್ರತಿ ವರ್ಷ ಕನ್ನಡ ಹಬ್ಬ ಮಾಡುತ್ತಿದ್ದೇವೆ. ಎಲ್ಲರಲ್ಲೂ ಐಟಿ ಮಂದಿ ಕನ್ನಡ ಮಾತಾಡಲ್ಲ ಎಂಬ ಭಾವನೆ ಇದೆ. ಅದೂ ಕೂಡ ಸುಳ್ಳು.
ಕನ್ನಡ ಬರದವರಿಗೆ ಕನ್ನಡ ಕಲಿಸೋ ಪ್ರಯತ್ನವೂ ನಡೆಯುತ್ತಿದೆ. ಇಲ್ಲಿ ಟೋನಿ ಟ್ರೀನ್ಸ್‌ಗೆ ವೇದಿಕೆ ಕಲ್ಪಿಸಲು ಕಾರಣ, ನಮ್ಮ ಕಂಪೆನಿಯಲ್ಲಿ ಆರು ವರ್ಷಗಳಿಂದಲೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ. ಒಮ್ಮೆ, ಆ ಕಾರ್ಯಕ್ರಮದಲ್ಲಿ ಟೋನಿ ಟ್ರೀನ್ಸ್‌ಗೊಂದು ಅವಕಾಶ ಕೊಟ್ಟಿದ್ದೆವು. ಚೆನ್ನಾಗಿ ಡ್ಯಾನ್ಸ್ ಮಾಡಿ, ಎಲ್ಲರ ಮನ ಗೆದ್ದಿದ್ದ. ಮರು ವರ್ಷ ಕಾರ್ಯಕ್ರಮ ಇದೆ ಅಂದಾಗ, ಎಷ್ಟೋ ಜನ ಟೋನಿ ಟ್ರೀನ್ಸ್ ಡ್ಯಾನ್ಸ್ ಇದೆಯಾ ಅಂತ ಕೇಳ್ಳೋರು.
ಅವನಲ್ಲಿ ಪ್ರತಿಭೆ ಇದೆ ಅಂತ ಗೊತ್ತಾಗಿ, ಅವನಿಗೊಂದು ವೇದಿಕೆ ಕಲ್ಪಿಸಲು ಈ ಆಲ್ಬಂ ಮಾಡಲಾಗಿದೆ. ಈ ಆಲ್ಬಂನಿಂದ ಯಾವುದೇ ರಿಟರ್ನ್ಸ್ ಬೇಡ ಅಂದರು ನಟೇಶ್. ಟೋನಿ ಟ್ರೀನ್ಸ್‌ಗೆ ನಾಚಿಕೆ ಸ್ವಭಾವ ಜಾಸ್ತಿಯಂತೆ. “ನನ್ನಲ್ಲಿ ಕಲೆ ಇತ್ತು. ಕನಸೂ ಇತ್ತು. ಆದರೆ, ಯಾರಲ್ಲೂ ಅವಕಾಶ ಕೇಳುತ್ತಿರಲಿಲ್ಲ. ಎಲ್ಲೋ ಇದ್ದವನು ನಾನು, ನನ್ನೊಳಗಿನ ಪ್ರತಿಭೆ ನೋಡಿ. ಎಂಎನ್‌ಸಿ ಕಂಪೆನಿಯವರು ಅವಕಾಶ ಕಲ್ಪಿಸಿದ್ದಾರೆ. ಒಳ್ಳೇ ಟೀಮ್‌ನಿಂದಾಗಿ, ಈ ಆಲ್ಬಂ ಮಾಡಲು ಸಾಧ್ಯವಾಗಿದೆ. ಶಶಾಂಕ್ ಶೇಷಗಿರಿ ಅವರು ಚೆನ್ನಾಗಿ ಸಂಗೀತ ಸಂಯೋಜಿಸಿದ್ದಾರೆ’ ಅಂದರು ಟೋನಿ.
ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ ಅವರಿಗೆ ಇದು ಮೊದಲ ಸಂಗೀತದ ವೀಡಿಯೋ ಆಲ್ಬಂ ಅಂತೆ. ಗೆಳೆಯ ಚರಣ್‌ನಿಂದ ಈ ಅವಕಾಶ ಸಿಕ್ಕಿತು. ಟೋನಿ ಒಳ್ಳೇ ಹಾಡು ಬರೆದಿದ್ದರು. ಟ್ಯೂನ್ ಕೂಡ ಹಾಕಿದ್ದರು. ಅದನ್ನು ಇಟ್ಟುಕೊಂಡು ಈಗಿನ ಟ್ರೆಂಡ್‌ಗೆ ತಕ್ಕಂತೆ ಸಂಗೀತ ನೀಡಿದ್ದೇನೆ ಅಂದರು ಶಶಾಂಕ್. ನಿರ್ದೇಶಕ ಚಿರಂಜೀವಿ, ಆಲ್ಬಂ ನಾಯಕಿ ಪೂಜಾ, ಕ್ಯಾಮೆರಾಮೆನ್ ಉದಯ್ ನೀಲ್, ಸಂಗಮೇಶ್, ಅವಿನಾಶ್ ಶ್ರೀಮುರಳಿ, ವಿಜೀತ್,ಶೈಲಾ ಇತರರು ಇದ್ದರು.