Advertisement

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

10:55 AM Jan 29, 2022 | Team Udayavani |

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತ ಸಹಿತ ಐವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಸಂಜಯನಗರ ನಿವಾಸಿ ಎಂ.ಮಜುನಾಥ (35), ಕಾವಲ್‌ ಬೈರಸಂದ್ರದ ಮೊಹಮ್ಮದ್‌ ಶೋಯೆಬ್‌ ರಬ್ಟಾನಿ ಅಲಿಯಾಸ್‌ ಫ‌ಕರ್‌ ಅಲಿ (32), ಸಹಕಾರ ನಗರದ ಟಿ.ಸಿ.ಪ್ರಶಾಂತ್‌ ಕುಮಾರ್‌ (40), ಯಶವಂತಪುರದ ವೈ.ಸಿ. ದುಗೇìಶ (30) ಹಾಗೂ ಆರ್‌.ಟಿ. ನಗರದ ಕೆ.ಕುಮಾರ್‌(40) ಬಂಧಿತರು. ಆರೋಪಿಗಳಿಂದ 1.70 ಲಕ್ಷ ರೂ. , 2 ಪಿಸ್ತೂಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಜ.23ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಜಯನಗರದ ಕ್ಯಾಡ್‌ಮೆಟ್‌ ಲೇಔಟ್‌ ನಿವಾಸಿ ಆರ್‌.ಚೇತನ್‌ ಎಂಬವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿ,  ಕಬೋರ್ಡ್‌ನಲ್ಲಿದ್ದ 3.5 ಲಕ್ಷ ರೂ.  ಹಾಗೂ 1 ಪಿಸ್ತೂಲ್‌ ದರೋಡೆ ಮಾಡಿ ಪರಾರಿಯಾಗಿದ್ದರು.

ಆರಂಭದಲ್ಲಿ ಐಟಿ ಅಧಿಕಾರಿಗಳೇ ಎಂದು ನಂಬಿದ್ದ ಚೇತನ್‌ಗೆ ಮಧ್ಯಾಹ್ನ ಅನುಮಾನ  ಉಂಟಾಗಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸಂಜಯನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಜೆ.ಬಾಲರಾಜ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದಾಗ ನಕಲಿ ಅಧಿಕಾರಿಗಳು ಎಂಬುದು ಗೊತ್ತಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ದೂರುದಾರ ಚೇತನ್‌ ನಗರದ ಖಾಸಗಿ ಕಾಲೇಜೊಂದರಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ತಂದೆ ರಮೇಶ್‌ ಸಂಜಯ ನಗರದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಆರ್ಥಿಕವಾಗಿ ಸದೃಢರಾಗಿದ್ದರು. ಕಳೆದ ವರ್ಷ ರಮೇಶ್‌ ಅಕಾಲಿಕವಾಗಿ ಮೃತಪಟ್ಟಿದ್ದರು. ತಂದೆಯ ನಿಧನದ ಹಿನ್ನೆಲೆಯಲ್ಲಿ ಪುತ್ರ ಚೇತನ್‌ ಅವರು ತಂದೆಯ ಕಚೇರಿಯಲ್ಲಿ ಇರಿಸಲಾಗಿದ್ದ ಕೆಲವು ದಾಖಲೆಗಳು ಹಾಗೂ ಪರವಾನಿಗೆ ಇರುವ ಪಿಸ್ತೂಲನ್ನು ತಂದು ಮನೆಯಲ್ಲಿಟ್ಟಿದ್ದರು. ಅವರು ತಂದೆಯ ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ಮುಂದುವರಿಸಿದ್ದರು.

Advertisement

ಕಿಂಗ್‌ಪಿನ್‌ ಪತ್ರಕರ್ತ!
ಸಂಜಯನಗರ ನಿವಾಸಿಯಾದ ಆರೋಪಿ ಮಂಜುನಾಥ್‌ ವಾರಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿದ್ದ. ರಮೇಶ್‌ ರಿಯಲ್‌ ಎಸ್ಟೇಟ್‌ ವ್ಯವಹಾರದ ಬಗ್ಗೆ ತಿಳಿದಿದ್ದ ಆರೋಪಿ, ಅವರಿಂದ ಈ ಹಿಂದೆ ಹಲವು ಬಾರಿ ಬೆದರಿಸಿ ಹಣ ಸುಲಿಗೆ ಮಾಡಿದ್ದ. ಅಲ್ಲದೆ, ರಮೇಶ್‌ಗೆ ಬಾಡಿಗೆ ರೂಪದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಬರುತ್ತದೆ ಎಂದು ತಿಳಿದುಕೊಂಡಿದ್ದ. ಅನಂತರ ಮನೆ ಬಾಡಿಗೆಗೆ ಕೊಡಿಸುವ ಬ್ರೋಕರ್‌ ಆಗಿರುವ ಆರೋಪಿ ಕುಮಾರ್‌ಗೆ ರಮೇಶ್‌ ಬಗ್ಗೆ ಮಾಹಿತಿ ನೀಡಿ, ರಮೇಶ್‌ ಮನೆ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದ. ಅದರಂತೆ ರಮೇಶ್‌ ಮನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಉಳಿದ ಮೂವರು ಆರೋಪಿಗಳೊಂದಿಗೆ ಸೇರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ  ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಟಿ ಅಧಿಕಾರಿಯ ನಕಲಿ ಐಡಿ ಕಾರ್ಡ್‌ !
ಆರೋಪಿಗಳಾದ ಮೊಹಮ್ಮದ್‌ ಶೋಯೆಬ್‌ ರಬ್ಟಾನಿ ಮತ್ತು ದುಗೇìಶ್‌ ಐಟಿ ಅಧಿಕಾರಿಗಳ ಸೋಗಿನಲ್ಲಿ ಜ.23ರಂದು ಬೆಳಗ್ಗೆ 8.45ಕ್ಕೆ ತಾವು ಐಟಿ ಅಧಿಕಾರಿಗಳು ಎಂದು ನಕಲಿ ಗುರುತಿನ ಚೀಟಿ ತೋರಿಸಿ, ದಾಳಿ ನಡೆಸಿದ್ದಾರೆ. ಮನೆಯಲ್ಲಿ ಹುಡುಕಾಟ ನಡೆಸಿ ಲಾಕರ್‌ ತೆರೆದು ನಗದು ಹಾಗೂ  ಪಿಸ್ತೂಲನ್ನು ತೆಗೆದುಕೊಂಡಿದ್ದರು.  ವಿಚಾರಣೆಗೆ ಕರೆದಾಗ ಬರಬೇಕು ಎಂದು ಚೇತನ್‌ಗೆ ತಿಳಿಸಿ ಬೆಳಗ್ಗೆ 9.45ಕ್ಕೆ ಮನೆಯಿಂದ ಪರಾರಿಯಾಗಿದ್ದರು. ಈ ವೇಳೆ ಉಳಿದ ಮೂವರು ಆರೋಪಿಗಳು ರಮೇಶ್‌ ಮನೆ ಹೊರಗೆ ನಿಂತು ಸಾರ್ವಜನಿಕರ ಚಲನವನಲಗಳ ಬಗ್ಗೆ ನಿಗಾ ವಹಿಸಿದ್ದರು. ರಬ್ಟಾನಿ ಮತ್ತು ದುಗೇìಶ್‌ ರಮೇಶ್‌ ಮನೆಯಿಂದ ಹೊರಬರುತ್ತಿದ್ದಂತೆ ಐವರು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಪಿಸ್ತೂಲ್‌ಗ‌ಳು ಎಫ್ಎಸ್‌ಎಲ್‌ಗೆ ರವಾನೆ
ಪ್ರಕರಣದ ರೂವಾರಿ ಮಂಜುನಾಥ್‌ ಬಳಿ ಪರವಾನಿಗೆ ಇಲ್ಲದ ಪಿಸ್ತೂಲ್‌ ಸಿಕ್ಕಿದೆ. ಇದು ಏರ್‌ಗನ್‌ ಎಂದು ಆರೋಪಿಯು ವಿಚಾರಣೆ ವೇಳೆ ಹೇಳಿದ್ದಾನೆ. ಈ ಬಗ್ಗೆ ದೃಢಪಡಿಸಿಕೊಳ್ಳಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆಂಧ್ರದಲ್ಲಿ ದರೋಡೆಗೆ ಸ್ಕೆಚ್‌!
ಐಟಿ ಅಧಿಕಾರಿಗಳ ಸೋಗಿನಲ್ಲಿ ರಮೇಶ್‌ ಮನೆ ದರೋಡೆ ಮಾಡಿದ ಬಳಿಕ ಆರೋಪಿಗಳು ಆಂಧ್ರಪ್ರದೇಶದ ವಿಜಯವಾಡದಲ್ಲೂ ಶ್ರೀಮಂತರ ಮನೆಗಳನ್ನು ಗುರುತಿಸಿ ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಸಂಚು ರೂಪಿಸಿದ್ದರು. ಈ ನಡುವೆ ಪೊಲೀಸರು ಘಟನ ಸ್ಥಳದ ಸುತ್ತಮುತ್ತಲ ಮನೆಗಳ ಸಿಸಿ ಕೆಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಬಳಿಕ ಮೊಬೈಲ್‌ ಟವರ್‌ ಕರೆಗಳ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ವಿಜಯವಾಡದಲ್ಲಿರುವ ಸುಳಿವು ಸಿಕ್ಕಿತು. ಅದರಂತೆ ಒಂದು ತಂಡ ಆಂಧ್ರಪ್ರದೇಶಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಇದೇ ತಂಡ ಈ ಹಿಂದೆ ನಗರದಲ್ಲಿ ಎರಡು ಮನೆಗಳಲ್ಲಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next