Advertisement

ಶಿಕ್ಷಕರ ವಿಶೇಷ ಭತ್ತೆ ಹಿಂಪಡೆಯುವುದು ತಪ್ಪು : ಭೋಜೇಗೌಡ

10:38 AM Jun 24, 2020 | mahesh |

ಮಂಗಳೂರು: ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜು ಶಿಕ್ಷಕರ ವಿಶೇಷ ಭತ್ತೆಯನ್ನು ವಾಪಸ್‌ ಪಡೆಯುವ ರಾಜ್ಯ ಸರಕಾರದ ತೀರ್ಮಾನವು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇ ಗೌಡ ಹೇಳಿದ್ದಾರೆ. ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶದಂತೆ ಎಲ್ಲ ಅರ್ಹ ಶಿಕ್ಷಕರಿಗೆ ವಿಶೇಷ ಭತ್ತೆ ಒದಗಿಸಬೇಕು. ಇಲ್ಲದಿದ್ದರೆ ಸರಕಾರದ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.

Advertisement

2008ರ ಮೊದಲು ನೇಮಕಗೊಂಡಿದ್ದ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆ ಮತ್ತು ಪಿಯುಸಿ ಶಿಕ್ಷಕರಿಗೆ ವಿಶೇಷ ಭತ್ತೆ ನೀಡಲು ಸರಕಾರ ತೀರ್ಮಾನಿಸಿ 8 ಕೋಟಿ ರೂ. ಬಿಡುಗಡೆ ಮಾಡಿತ್ತು. ತಮಗೂ ವಿಶೇಷ ಭತ್ತೆ ನೀಡುವಂತೆ ಇತರ ಶಿಕ್ಷಕರು ಕೂಡ ನ್ಯಾಯಾಲಯದ ಮೆಟ್ಟಲೇರಿದ್ದು, ಹೋರಾಟಕ್ಕೆ ಗೆಲುವು ಲಭಿಸಿದೆ. ಕೋರ್ಟ್‌ ಆದೇಶದ ಬಳಿಕ ಸರಕಾರವು ಬಾಕಿ ಇರುವ ಶಿಕ್ಷಕರಿಗೆ ವಿಶೇಷ ಭತ್ತೆ ವಿತರಿಸುವ ಬದಲು ಈಗಾಗಲೇ ವಿತರಿಸಿರುವ ಭತ್ತೆಯನ್ನು ವಾಪಸ್‌ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಕೋವಿಡ್: ಸರಕಾರ ವಿಫಲ
ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ ಎಂದು ಆರೋಪಿಸಿದ ಅವರು, ವಿವಿಧ ವಿಭಾಗಗಳ ಜನರಿಗೆ ನೆರವು ಘೋಷಿಸಿದ್ದು, ಫ‌ಲಾನುಭವಿಗಳನ್ನು ಗುರುತಿಸುವ ಕೆಲಸ ಇನ್ನೂ ಪೂರ್ತಿ ಯಾಗಿಲ್ಲ. ಚಿಕ್ಕಮಗಳೂರು ಸಹಿತ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳಿಲ್ಲ. ಅಲ್ಲಿನ ಶಂಕಿತ ರೋಗಿಗಳ ಮಾದರಿಗಳನ್ನು ಹಾಸನಕ್ಕೆ ಕಳುಹಿಸಲಾಗುತ್ತಿದೆ. ಮಂಗಳೂರಿನಲ್ಲಿ 13 ವೆಂಟಿಲೇಟರ್‌ಗಳು ಮಾತ್ರ ಇದ್ದು, ಮುಂಜಾಗ್ರತಾ ಕ್ರಮವಾಗಿ ಇನ್ನಷ್ಟು ಅಗತ್ಯ ಎಂದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ, ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next