Advertisement

ಇದು ನಮ್ಮ-ನಿಮ್ಮೊಳಗಿನ ಇರುವೆ

10:19 AM Nov 18, 2017 | |

“ತಪ್ಪು ಮಾಡಿಬಿಟ್ಟೆ ಕಣಯ್ಯ …’ ಹಾಗಂತ ವೆಂಕಟೇಶಮೂರ್ತಿಗಳು ತಮ್ಮ ಕಿರಿಯ ಮಿತ್ರನಿಗೆ ಹೇಳಿಕೊಳ್ಳುವಷ್ಟರಲ್ಲಿ ಅವರಿಗೆ ಮನವರಿಕೆಯಾಗಿಬಿಟ್ಟಿರುತ್ತದೆ. ಇಷ್ಟಕ್ಕೂ ಅವರ ಆ್ಯಂಗಲ್‌ನಲ್ಲಿ ಅದು ತಪ್ಪೇ ಅಲ್ಲ. ತನ್ನ ಸೊಸೆಯಿಂದ ಕೆಟ್ಟ ಮಾತುಗಳನ್ನು ಕೇಳುವುದನ್ನು ತಪ್ಪಿಸಿಕೊಳ್ಳಲು ಅವರೊಂದು ಕೆಲಸಕ್ಕೆ ಸೇರುತ್ತಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಕೈತುಂಬಾ ಹಣ, ಒಂದು ಆಫೀಸು ಎಲ್ಲವೂ ಸಿಗುತ್ತದೆ.

Advertisement

ಆದರೆ, ಕ್ರಮೇಣ ತಮ್ಮ ಕೆಲಸದಿಂದ ತಮ್ಮ ಸ್ನೇಹಿತನ ಪ್ರಾಣವೇ ಹೋಯಿತು ಎಂಬುದು ಅವರಿಗೆ ಅರ್ಥವಾಗುತ್ತದೆ. ಅಷ್ಟೇ ಅಲ್ಲ, ತಾವೊಂದು ದೊಡ್ಡ ಜೇಡರಬಲೆಯಲ್ಲಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿರುವುದು ಗೊತ್ತಾಗುತ್ತದೆ. ಆಗಲೇ ಅವರ ಬಾಯಿಂದ, “ತಪ್ಪು ಮಾಡಿಬಿಟ್ಟೆ ಕಣಯ್ಯ …’ ಎಂಬ ಬೇಸರದ ನುಡಿಗಳು ಬರುವುದು. ಸರಿ, ವೆಂಕಟೇಶಮೂರ್ತಿಗಳು ತಪ್ಪನ್ನೇನೋ ಮಾಡಿದ್ದಾರೆ. ಅದನ್ನು ಅವರು ತಿದ್ದಿಕೊಳ್ಳುವುದು ಹೇಗೆ?

ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳಿಗೆ “ಕೆಂಪಿರ್ವೆ’ಯಲ್ಲಿ ಉತ್ತರವಿದೆ. “ಕೆಂಪಿರ್ವೆ’ ಒಂದು ಮಧ್ಯಮ ವರ್ಗದವರ ಚಿತ್ರ. ನೀವು, ನಾವು! ಎಲ್ಲರೂ ಇರುವಂತಹ ಒಂದು ಚಿತ್ರ. ಮಧ್ಯಮ ವರ್ಗದವರ ಸಮಸ್ಯೆಗಳ ಕುರಿತಾದ ಚಿತ್ರ. ಅವರ ಆಸೆ, ನೋವು, ವೇದನೆ, ಸಣ್ಣಪುಟ್ಟ ಖುಷಿ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳುವಂತಹ ಚಿತ್ರ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಸಾಮಾನ್ಯ ಮನುಷ್ಯನನ್ನು ಕೆಣಕಿದರೆ, ಅವನು ಏನೆಲ್ಲಾ ಮಾಡಬಹುದು ಎಂದು ಹೇಳುವಂತಹ ಚಿತ್ರ.

ಇಂಥದ್ದೊಂದು ಸರಳವಾದ ಕಥೆಯನ್ನು, ಯಾವುದೇ ಬಿಲ್ಡಪ್‌ಗ್ಳಿಲ್ಲದೆ, ಅಷ್ಟೇ ಸರಳ ಮತ್ತು ಚೆನ್ನಾಗಿ ನಿರೂಪಿಸಿದ್ದಾರೆ ನಿರ್ದೇಶಕ ವೆಂಕಟ್‌ ಶಿವಶಂಕರ್‌. ಇಲ್ಲೊಬ್ಬ ವೃದ್ಧರಿದ್ದಾರೆ. ದುಡಿದ ದುಡ್ಡೆಲ್ಲಾ ಕಳೆದುಕೊಂಡು, ಸೊಸೆಯಿಂದ ಮೂದಲಿಸಿಕೊಂಡು, ಪೈಸೆಪೈಸೆಗೂ ಒದ್ದಾಡುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಹೀಗಿರುವಾಗ ಅವರು ಗೊತ್ತಿಲ್ಲದೆಯೇ ರಿಯಲ್‌ ಎಸ್ಟೇಟ್‌ನ ಜೇಡರಬಲೆಗೆ ಸಿಕ್ಕಿಬೀಳುತ್ತಾರೆ.

ಆರಂಭದಲ್ಲಿ ಎಲ್ಲಾ ಚೆನ್ನಾಗಿ ಕಾಣುವ ಅವರಿಗೆ, ಕೊನೆಗೆ ತಾನ್ಯಾಕೆ ಈ ವಯಸ್ಸಲ್ಲಿ ಬಂದೆ ಎಂದು ಕೊರಗುವಂತಾಗುತ್ತದೆ. ಕೊರಗಿದರೆ ಸಾಲದು, ಒಂದು ಪರಿಹಾರವನ್ನೂ ಕಂಡುಹಿಡಿಯಬೇಕು ಎಂದು ತಮ್ಮ ಲೆವೆಲ್ಲಿಗೆ ಅವರು ಎದುರುಬೀಳುತ್ತಾರೆ. ಮಧ್ಯಮ ವರ್ಗದವರೆಂಬ ಕೆಂಪಿರ್ವೆಗಳು ಕಚ್ಚುವುದಕ್ಕೆ ಶುರು ಮಾಡಿದರೆ, ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಈ ಕಥೆಗೆ ಒಬ್ಬರಲ್ಲ, ಇಬ್ಬರಲ್ಲ ನಾಲ್ವರು ಹೀರೋಗಳು.

Advertisement

ಪ್ರಮುಖವಾಗಿ ಲಕ್ಷ್ಮಣ್‌ ಅವರ ಕಥೆ, ಎರಡನೆಯದಾಗಿ ಅದನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿರುವ ವೆಂಕಟ್‌. ಮೂರು ಮತ್ತು ನಾಲ್ಕನೆಯ ಸ್ಥಾನಕ್ಕೆ ದತ್ತಣ್ಣ ಮತ್ತು ಮತ್ತೂಮ್ಮೆ ಲಕ್ಷ್ಮಣ್‌ (ಈ ಬಾರಿ ನಟನೆ) ಬರುತ್ತಾರೆ. ಇದು ಯಾರ ಜೀವನದಲ್ಲಿ ಅಥವಾ ಎಲ್ಲರ ಜೀವನದಲ್ಲೂ ನಡೆಯಬಹುದಾದ ಒಂದು ಸಣ್ಣ ಕಥೆ. ಅದನ್ನು ಬಹಳ ಚೆನ್ನಾಗಿ ಹೇಳುವ ಪ್ರಯತ್ನವನ್ನು ವೆಂಕಟ್‌ ಮತ್ತು ಲಕ್ಷ್ಮಣ್‌. ಚಿತ್ರದಲ್ಲಿ ಅನವಶ್ಯಕ ಅಂತೇನಿಲ್ಲ.

ಅತಿಯಾದ ಎಳೆದಾಟಗಳಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಆದರೂ ಪ್ರೇಮಕಥೆಯನ್ನು ಕತ್ತರಿಸಿ, ಒಂದಿಷ್ಟು ಕತ್ತರಿಸಿ ಇನ್ನಷ್ಟು ಥ್ರಿಲ್ಲಿಂಗ್‌ ಆಗಿ ಹೇಳುವ ಪ್ರಯತ್ನವನ್ನು ಮಾಡಬಹುದಿತ್ತು ಎಂಬ ಸಲಹೆಯೊಂದನ್ನು ಕೊಡಬಹುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ತಪ್ಪುಗಳನ್ನು ಹುಡುಕುವುದು ಕಷ್ಟವೇ. ಇನ್ನು ನಟನೆಯ ವಿಷಯಕ್ಕೆ ಬಂದರೆ, ದತ್ತಣ್ಣ ಅವರನ್ನು ಬಿಟ್ಟು ಬೇರೆಯವರನ್ನು ಆ ಪಾತ್ರಕ್ಕೆ ಊಹಿಸುವುದು ಕಷ್ಟ ಎಂಬುವಷ್ಟರ ಮಟ್ಟಿಗೆ ದತ್ತಣ್ಣ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಮಧ್ಯಮ ವರ್ಗದ ಹಿರಿ ವಯಸ್ಕನ ನೋವು-ಖುಷಿಗಳೆರಡನ್ನೂ ಬಹಳ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಅವರಂತೆ ಮಿಂಚುವ ಇನ್ನೊಬ್ಬರೆಂದರೆ ನಾಯ್ಡು ಪಾತ್ರ ಮಾಡಿರುವ ಲಕ್ಷ್ಮಣ್‌ ಶಿವಶಂಕರ್‌. ಅದ್ಯಾರಿಂದ ಸ್ಫೂರ್ತಿ ಪಡೆದು ಈ ಪಾತ್ರ ನಿರ್ವಹಿಸಿದ್ದಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಲಕ್ಷ್ಮಣ್‌ ಬಹಳ ಚೆನ್ನಾಗಿ ಮತ್ತು ಅಷ್ಟೇ ಸಹಜವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಉಮೇಶ್‌ ಬಣಕಾರ್‌ ಸೇರಿದಂತೆ ಕೆಲವೇ ಕೆಲವು ಪಾತ್ರಗಳಿವೆ. ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಚಿತ್ರ: ಕೆಂಪಿರ್ವೆ
ನಿರ್ಮಾಣ: ಅಮೃತ ಫಿಲ್ಮ್ ಸೆಂಟರ್‌
ನಿರ್ದೇಶನ: ವೆಂಕಟ್‌ ಶಿವಶಂಕರ್‌
ತಾರಾಗಣ: ದತ್ತಣ್ಣ, ಲಕ್ಷ್ಮಣ್‌ ಶಿವಶಂಕರ್‌, ಸಯ್ನಾಜಿ ಶಿಂಧೆ, ಉಮೇಶ್‌ ಬಣಕಾರ್‌, ಭಾಸ್ಕರ್‌ ಮುಂತಾದವರು

* ಚೇತನ್‌ ನಾಡಿಗೇರ್

Advertisement

Udayavani is now on Telegram. Click here to join our channel and stay updated with the latest news.

Next