ಹಸಿರನ್ನು ಹೊದ್ದುಕೊಂಡ ದಟ್ಟ ಕಾಡು. ಅಲ್ಲೊಬ್ಬ ಮನುಷ್ಯ ನಡೆದು ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಆನೆಯೊಂದು ಅಟ್ಟಿಸಿಕೊಂಡು ಬಂತು. ಭಯದಿಂದ ಬೆವೆತು ಇವನೂ ಕಾಲ್‌ಕಿತ್ತ. ಹಾಗೆ ಓಡುತ್ತಲಿದ್ದ ಅವನಿಗೆ ಎದುರೊಂದು ಕೊಳ ಕಾಣಿಸಿತು. ಅದರ ದಡದಲ್ಲೇ ವಿಶಾಲ ರೆಂಬೆಗಳನ್ನು ಚಾಚಿಕೊಂಡ ಮರವೊಂದಿತ್ತು. ಅದನ್ನು ಹತ್ತಿದರೆ, ಆನೆ ವಾಪಸು ಹೋಗುತ್ತೆ ಅಂತನ್ನಿಸಿತು. ತಡಮಾಡದೆ, ಅದನ್ನು ಏರಿದ. ಆದರೆ, ಆನೆ ಮರದ ಬುಡವನ್ನು ಸೊಂಡಲಿನಿಂದ ಸುತ್ತಿಕೊಂಡು, ಮರವನ್ನೇ ಬೀಳಿಸಲೆತ್ನಿಸುತ್ತಿತ್ತು.
ಕೊಂಬೆ ಮೇಲೆ ಜಾಗರೂಕ ಹೆಜ್ಜೆ ಇಡುವಾಗ, ಆಯಾತಪ್ಪಿ, ಕೊಂಬೆಗೆ ಜೋತುಬಿದ್ದ. ಕೆಳಕ್ಕೆ ನೋಡಿದರೆ, ಆಳದ ಕೊಳ. ಅತ್ತಿತ್ತ ನೇತಾಡುತ್ತಿದ್ದ ಇವನ ಕಾಲುಗಳನ್ನು ಕಂಡು, ನೀರಿನೊಳಗಿದ್ದ ಐದಾರು ಹಾವುಗಳು ಹೆಡೆಯೆತ್ತಿ ಇವನ ಬೀಳುವಿಕೆಯನ್ನೇ ಕಾಯುತ್ತಿದ್ದವು. ಮತ್ತೆ ಮೈಯೆಲ್ಲ ಬೆವರತೊಡಗಿತು. ಹೃದಯ ಬಡಿತ ಇನ್ನಷ್ಟು ವೇಗಗೊಂಡಿತು. ಬದುಕು ಮುಗಿದು ಹೋಯ್ತಲ್ಲ ಅಂತನ್ನಿಸಿ, ದಾರಿ ಕಾಣದಾಗದೆ ಮೇಲೆ ನೋಡಿದ. ಭಗವಂತ ಮೇಲೆಲ್ಲಾದರೂ ಇದ್ದರೆ, ಕಾಪಾಡುತ್ತನೆಂದುಕೊಂಡಿದ್ದ ಆತನಿಗೆ ಕಂಡಿದ್ದು ಜೇನುಗೂಡು! ಜೋರಾಗಿ ಕಿರುಚಿಕೊಂಡ.
ಅಷ್ಟರಲ್ಲೇ ನಾಲ್ಕಾರು ಜೇನು ಹುಳು ಬಂದು, ಆತನಿಗೆ ಕಚ್ಚಿತು. ಕಣ್ಣಲ್ಲಿ ನೀರು ಬಂತು. ಸಾಕು ಬದುಕು, ಇನ್ನು ಉಸಿರಾಡಲು ತನ್ನಲ್ಲಿ ಯಾವುದೇ ಕಾರಣಗಳಿಲ್ಲ ಎಂದುಕೊಂಡು, ಗಳಗಳನೆ ಅಳುವಾಗ ಮೇಲಿನ ಜೇನುಗೂಡಿನಿಂದ ಜೇನುತುಪ್ಪ ತೊಟ್ಟಿಕ್ಕತೊಡಗಿತು. ಒಂದೊಂದು ಹನಿ ಈತನ ನಾಲಿಗೆ ಮೇಲೆ ಬೀಳತೊಡಗಿತು. ಆಹಾ! ಎಂಥ ರುಚಿ. ಹಾಗೆಯೇ ಐದಾರು ಹನಿಯನ್ನೇ ಚಪ್ಪರಿಸಿದ ಬಳಿಕ ಅವನೊಳಗೆ ಒಂದು ಜಾದೂ ಏರ್ಪಟ್ಟಿತು.
ಕಣ್ಣ ಮುಂಬಾಗಿಲಿಂದ ಚೆಲ್ಲತೊಡಗಿದ್ದ ಕಂಬನಿ, ಇದ್ದಕ್ಕಿದ್ದಂತೆ ಮಾಯವಾಯಿತು. ಎದೆಬಡಿತ ಯಥಾಸ್ಥಿತಿಗೆ ಬಂದಿತು. ಎಳೆದುಕೊಳ್ಳುವ ಉಸಿರು ತಂಗಾಳಿಯಂತೆ ಕಚಗುಳಿ ನೀಡತೊಡಗಿತು. ಬೆವರುತ್ತಿದ್ದ ಮೈಯಲ್ಲಿ, ಉಪ್ಪುನೀರು ಕವಲೊಡೆಯುವುದು ನಿಂತಿತು. ಈತ ತನ್ಮಯನಾಗಿ ಜೇನು ತುಪ್ಪದ ಒಂದೊಂದು ಹನಿಯನ್ನು ಮೆಲ್ಲುತ್ತಲೇ ಇದ್ದ.
ಆತನಿಗೆ ಕೆಳಗಿದ್ದ ಹಾವುಗಳೂ ಭಯ ಹುಟ್ಟಿಸಲಿಲ್ಲ. ಪಕ್ಕದಲ್ಲಿಯೇ ಆನೆ ಅಬ್ಬರಿಸುತ್ತಿದೆ ಅಂತನ್ನಿಸಲಿಲ್ಲ. ಜೇನು ಕಡಿದಿದ್ದೂ ಗೊತ್ತಾಗಲೇ ಇಲ್ಲ.
ನೀತಿ: ಕಮಿಟ್‌ಮೆಂಟು, ಸಾಲ, ಸಂಬಳ ಕೊರತೆ… ಎಲ್ಲವೂ ಇದ್ದಿದ್ದೇ. ಬದುಕಿನ ಸಣ್ಣಪುಟ್ಟ ಖುಷಿಗಳನ್ನು ಆಸ್ವಾದಿಸೋಣ. ನಿಮ್ಮನ್ನು ಜೀವಂತವಾಗಿ ಉಳಿಸುವುದೇ ಆ ಸಣ್ಣಪುಟ್ಟ ಖುಷಿಗಳು.