Advertisement

ನಾನೂ ಹೆಣ್ಣು ಮಗುವಿನ ತಂದೆ, ಹೇಳಿಕೆ ತಪ್ಪಾಗಿ ಅರ್ಥೈಸಿದ್ದು ದುರದೃಷ್ಟಕರ : ಡಾ.ಸುಧಾಕರ್

07:58 PM Oct 11, 2021 | Team Udayavani |

ಬೆಂಗಳೂರು : ‘ನಾನೂ ಹೆಣ್ಣು ಮಗುವಿನ ತಂದೆಯಾಗಿದ್ದು, ವೈದ್ಯನಾಗಿದ್ದು , ಮಹಿಳೆಯರ ಸೂಕ್ಷ್ಮತೆ, ಸಂವೇದನೆ ಬಗ್ಗೆ ಅರಿತಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು ದುರದೃಷ್ಟಕರ’ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ವಿವಾದಕ್ಕೆ ಗುರಿಯಾದ ಹೇಳಿಕೆಗೆ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಏಕಾಂಗಿಯಾಗಿ ಜೀವನ ನಡೆಸುವ ಮಹಿಳೆಯರ ಬಗ್ಗೆ ಹೇಳಿದ್ದಲ್ಲ.ಸಂಶೋಧನೆಗಳ ಅಧ್ಯಯನದ ಆಧಾರದಲ್ಲಿ ಹೇಳಿಕೆ ನೀಡಿದ್ದೆ. ಕೌಟುಂಬಿಕ ವ್ಯವಸ್ಥೆಯ ಮೌಲ್ಯದ ಕುಸಿತದ ಬಗ್ಗೆ ನಾನು ಮಾತನಾಡಿದ್ದೆ. 19 % ಯುವತಿಯರಿಗೆ ವಿವಾಹ ಇಷ್ಟವಿಲ್ಲ ಎಂದು ಅಧ್ಯಯನ ಹೇಳಿದೆ, ವಿವಾಹವಾಗಿ ಕುಟುಂಬ ಬೆಳೆದರೆ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ ಎಂದಿದ್ದೆ’ ಎಂದು ಸ್ಪಷ್ಟನೆ ನೀಡಿದರು.

ನಿಮ್ಹಾನ್ಸ್‌ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ಯ 25ನೇ ಘಟಿಕೋತ್ಸವ ಸಮಾರಂಭದಲ್ಲಿ ಸಚಿವ ಸುಧಾಕರ್ ಅವರು ‘ಆಧುನಿಕ ಮಹಿಳೆಯರು ಒಂಟಿ ಜೀವನ ನಡೆಸಲು ಬಯಸುತ್ತಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮ ನೀಡಲು ಸಿದ್ಧವಿಲ್ಲ . ಬದಲಾಗಿ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಿದ್ದಾರೆ’ ಎಂದು ಮಾಡಿದ್ದ ಭಾಷಣ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಾಗಿ ಕಾಂಗ್ರೆಸ್ ಪಕ್ಷ ಸೇರಿ ಮಹಿಳಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

‘ಮಹಿಳೆಯರ ಬಗ್ಗೆ ಸಚಿವರು ಆಡಿದ ಮಾತು ಮಹಿಳಾ ಸ್ವಾತಂತ್ರವನ್ನು ಅಣಕಿಸುವಂತಿದೆ, ಮಹಿಳೆಯರ ಬದುಕಿನ ಆಯ್ಕೆಯನ್ನು ನಿರ್ಧರಿಸಲು ನೀವು ಯಾರು? ಪುರುಷ ಯಜಮಾನಿಕೆಯನ್ನು ಮುಂದುವರೆಸುವ ಹವಣಿಕೆ ನಿಮಗೇಕೆ? ಮನುವಾದವನ್ನು ನಂಬಿದ ಬಿಜೆಪಿಯ ಮಹಿಳಾ ವಿರೋಧಿ ಕುತಂತ್ರಗಳು ನಿಮ್ಮ ಮಾತುಗಳಲ್ಲಿಯೇ ವ್ಯಕ್ತವಾಗುತ್ತಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next