ಕೊರಟಗೆರೆ: ಭಾರತದಲ್ಲಿ ರೈತರು ದೇಶದ ಆರ್ಥಿಕತೆಗೆ ಶೇ25% ಕೊಡಿಗೆ ನೀಡಿ ಜಿಡಿಪಿ ಹೆಚ್ಚಿಸುತ್ತಿದ್ದರೂ ಅವರ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಾಗದೆ ಇರುವುದು ದುರದೃಷ್ಟಕರ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿದ್ಯಾನಿಲಯದಿಂದ ಏರ್ಪಡಿಸಿದ್ದ ಕೃಷಿ ಸಂಗಮ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರ ಅಧುನಿಕ ಬೆಳೆಗಳ ನೂತನ ವಿವಿಧ ತಳಿಗಳ ಅವಿಷ್ಕಾರ ತಂತ್ರಜ್ಞಾನದಿಂದ ಉತ್ತಮಗೊಂಡಿದೆ, ರೈತರು ಹಿಂದೆ ಎಕರೆವಾರು ಬೆಳೆಯುವ ಬೆಳೆಗಿಂತ ಈಗ 5ಪಟ್ಟು ಹೆಚ್ಚು ಆಹಾರ ಉತ್ಪಾದಿಸುತ್ತಿದ್ದಾರೆ, ಜನಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿದ್ದಾರೂ ಆಹಾರ ಕೊರತೆ ಅತಿ ಕಡಿಮೆ ಇದೆ, ಇದು ನಮ್ಮ ಕೃಷಿ ವಿಜ್ಞಾನಿಗಳ ಸಾಧನೆ ಮತ್ತು ರೈತರ ಶ್ರಮದಿಂದ ಸಾದ್ಯವಾಗುತ್ತಿದೆ ಎಂದರು.
ಇತ್ತೀಚೆಗೆ ಬೆಳೆ ಬೆಳೆಯುವ ರೈತರಿಗೆ ಕೃಷಿ ಚಟುವಟಿಕೆ ಮತ್ತು ಉತ್ಪನ್ನಗಳ ವೆಚ್ಚ ಅತ್ಯಂತ ದುಬಾರಿಯಾಗಿದೆ, ಇದರೊಂದಿಗೆ ಅವರ ಶ್ರಮದ ದಿನಗಳು ಸೇರುತ್ತವೆ, ಹವಾಮಾನ ವೈಪರಿತ್ಯದಿಂದ ಅವರ ಬದುಕು ದುಸ್ತರಕ್ಕೆ ಬಿದ್ದು ಸಾವಿನವರೆಗೂ ಹೋಗುತ್ತಿದೆ, ಇದಕ್ಕಿಂತ ದೊಡ್ಡ ಸಮಸ್ಯೆ ಬೆಳೆದಂತಹ ಬೆಳೆಗೆ ಬೆಂಬಲ ಬೆಲೆ ಇಲ್ಲದಿರುವುದು ಈ ಎಲ್ಲಾ ಸಮಸ್ಯೆಗಳಿಂದ ನಮಗೆ ಅನ್ನ ನೀಡುವ ರೈತ ಬದುಕು ನಿರ್ದಿಷ್ಟವಲ್ಲದಿದ್ದು ಇದರ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾದ ಮಾರ್ಗಸೂಚಿ, ರೈತ ಪರ ನಿಯಮವನ್ನು ಜಾರಿಗೆ ತರಬೇಕಿದೆ. ರೈತರು ಸಹ ಕೃಷಿಯಲ್ಲಿ ಅಂತರ ಬೆಳೆ ಮತ್ತು ಮಿಶ್ರ ಬೆಳೆ ಬೇಸಾಯದೋಂದಿಗೆ ಹೈನುಗಾರಿಕೆ ಮಾಡಿದರೆ ಅವರ ಜೀವನ ಸುಧಾರಿಸುತ್ತದೆ ಎಂದರು.
ನಾನು ಪಿಯುಸಿ. ವಿಜ್ಞಾನ ವಿದ್ಯಾಭ್ಯಾಸ ಪೂರ್ಣಗೊಳಿಸಿದಾಗ ನನಗೆ ಮೆಡಿಕಲ್, ಇಂಜಿಯರಿಂಗ್ ಪದವಿ ದೊರೆಯುವ ಅವಕಾಶವಿದ್ದರೂ, ಬೆಂಗಳೂರು ಕೃಷಿ ವಿದ್ಯಾಲಯದಲ್ಲಿ ಕೃಷಿ ಪದವಿ ವ್ಯಾಸಾಂಗ ಮಾಡಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಆಸ್ಟೇಲಿಯಾ ದೇಶದಲ್ಲಿ ಕೃಷಿ ಪಿಹೆಚ್‌ಡಿ ಪಡೆದೆ, ನಾನು ಅಂದು ಜಿಕೆವಿಕೆಯ ಕ್ರೀಡೆಯಲ್ಲಿ 100ಮೀ ಓಟದ ಸ್ಪರ್ಧೆಯಲ್ಲಿ ದಾಖಲೆ ಮಾಡಿದ್ದು ಈಗಲೂ ಹಾಗೆ ಇದೆ. ನಾನು ರಾಜಕಾರಣ ಮತ್ತು ವಿದ್ಯಾವಲಯದಲ್ಲಿ ಇದ್ದರೂ ಈಗಲೂ ನಮ್ಮ ಜಮೀನಿನಲ್ಲಿ ನೂರಾರು ಕ್ವಿಂಟಲ್ ಬೆಳೆ ಬೆಳೆಯುತ್ತೇನೆ, ಆದರೆ ಬೆಳೆದ ಆಹಾರವನ್ನು ಎಪಿಎಂಸಿಗೆ ಹಾಕಿ ವರ್ಷವಾದರೂ ಇಲ್ಲಿಯವರೆಗೆ ಹಣ ಪಾವತಿಯಾಗಿಲ್ಲ ಹೀಗೆಯಾದರೆ ಸಾಮಾನ್ಯ ರೈತನ ಪಾಡೇನು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷೆ ಸುನಂದ, ತಹಶೀಲ್ದಾರ್ ನಾಹಿದಾ ಜಮ್ ಜಮ್, ಕೆ.ಪಿ.ಸಿ.ಸಿ ಸದಸ್ಯ ಎ.ಡಿ.ಬಲರಾಮಯ್ಯ, ತುಮುಲ್ ನಿರ್ದೇಶಕ ಈಶ್ವರಯ್ಯ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ, ಕೃಷಿ ಅಧಿಕಾರಿ ನಾಗರಾಜು, ರೇಷ್ಮೆ ಅಧಿಕಾರಿ ಮುರಳಿ, ಪಶು ವೈದ್ಯಾಧಿಕಾರಿ ಸಿದ್ದನಗೌಡ, ಜಿಲ್ಲಾ ಪಂಚಾಯಿತಿ ಇಲಾಖೆಯ ಎ,ಇ.ಇ. ರವಿಕುಮಾರ್ ಉಪಸ್ಥಿತರಿದ್ದರು.