Advertisement
ಉದಯವಾಣಿಯ ಕ್ಷೇತ್ರ ಭೇಟಿ ವೇಳೆ ಮೊದಲಿಗೆ ಸಿಕ್ಕಿದ್ದು ಎಪಿಎಂಸಿ ಮಾರುಕಟ್ಟೆ ಬಳಿ ಅಡಿಕೆ ಮಾರಾಟಕ್ಕೆ ತೆರಳುತ್ತಿದ್ದ ಗೋಪಾಲಣ್ಣ. ಅವರು ಹೇಳಿದ್ದು, ಅಡಿಕೆಗೊಂದು ಸ್ಥಿರ ರೇಟು ಬೇಕು ಮಾರಾಯರೇ, ಆಗ ಓಟಿಗೆ ಹೋಗಲು ನಮಗೂ ಉತ್ಸಾಹ ಬರುತ್ತೆ ಅಂತಾ ಹೇಳಿ ಮಾತು ತುಂಡರಿಸಿದರು.
Related Articles
Advertisement
ಪುತ್ತೂರು-ಕುಂಬ್ರ ರಸ್ತೆಯ ಸಂಟ್ಯಾರ್ ಬಳಿ ನಿಂತಿದ್ದ ಆದಂ ಹೇಳುವ ಪ್ರಕಾರ, ಸಿಕ್ಕಾಪಟ್ಟೆ ಬಿಸಿಲು ಇದೆ. ಪ್ರಚಾರಕ್ಕೆ ಯಾರೂ ಬಂದಿಲ್ಲ, ನಾವು ಯಾರಿಗೆ ಓಟು ಹಾಕಬೇಕು ಎಂಬುದನ್ನು ಈಗಾಗಲೇ ತೀರ್ಮಾನಿಸಿದ್ದೇವೆ. ಯಾರೇ ಪ್ರಚಾರಕ್ಕೂ ಬಂದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಅಂತಾ ಖಡಕ್ ದಾಟಿಯಲ್ಲೇ ಉತ್ತರಿಸಿದರು.
ಕುಂಬ್ರ ಬಳಿ ಬಸ್‌ಗಾಗಿ ಕಾಯುತ್ತಿದ್ದ ಮಹೇಶ್ ಆಳ್ವರ ಬಳಿ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಚುನಾವಣ ಹವಾ ಹೇಗಿದೆ ಸರ್ ಅಂತಾ ಪ್ರಶ್ನಿಸಿದರೆ ನಾವು ಮೈಸೂರು, ಮಂಡ್ಯ, ಬೆಂಗಳೂರು ದಕ್ಷಿಣದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೇವೆ. ದ.ಕ.ಜಿಲ್ಲೆಯಲ್ಲಿ ಏನಿದ್ದರೂ ಒನ್ ಸೈಡ್ ಮ್ಯಾಚ್ ಎನ್ನುತ್ತಾ ಸಾಗಿದರು.
ಈಶ್ವರಮಂಗಲದಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ತೆರಳಲು ನಿಂತಿದ್ದ ಸುಧಾಮ, ದಕ್ಷಿಣ ಕನ್ನಡದ ಫಲಿತಾಂಶವನ್ನು ಈ ಹಿಂದಿನಂತೆ ಸುಲಭವಾಗಿ ಊಹಿಸಲು ಸಾಧ್ಯವಿಲ್ಲ, ಈ ಬಾರಿ ಮೋದಿ ಪ್ರಭಾವದ ಜತೆಗೆ ಜಾತಿ ಅಸ್ತ್ರವೂ ಇದೆ ಅಂತಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಿದರು. ಈ ಎರಡೂ ಅಸ್ತ್ರದಲ್ಲಿ ನೀವು ಯಾವುದರ ಪರ ಅನ್ನುವ ಪ್ರಶ್ನೆಗೆ, ನಾವು ಒಂದು ವಿಷಯಕ್ಕೆ ಪಿಕ್ಸ್ ಆಗಿದ್ದೇವೆ ಎನ್ನುವ ಜಾಣ್ಮೆಯ ಉತ್ತರ ನೀಡಿದರು.ಕೆದಂಬಾಡಿ-ಕೆಯ್ಯೂರಿನ ನಡುವೆ ಕೋಳಿ ಅಂಗಡಿಯೊಂದರ ಮಾಲಕರ ಬಳಿ ಚುನಾವಣೆ ವಿಷಯ ಪ್ರಸ್ತಾವಿಸುವ ಹೊತ್ತಿಗೆ ಕೋಳಿಗೆಂದು ಬಂದಿದ್ದ ಮೋನಪ್ಪ ನಾಯ್ಕ ಮಧ್ಯ ಪ್ರವೇಶಿಸಿ, ನಾನು ಈ ಬಾರಿ ಓಟಿಗೆ ಯಾಕೆ ಹೋಗಬೇಕು, ನಮ್ಮೂರಿನ ರಸ್ತೆ ಸರಿ ಮಾಡಿ ಅಂತಾ ಮನವಿ ಮಾಡಿ ಮೂರು ಚುನಾವಣೆ ಕಳೆದಿದೆ. ಏನೂ ಆಗಿಲ್ಲ, ಮತ್ತೆ ಯಾಕೆ ಓಟು ಹಾಕುವುದು ಎಂದು ಗರಂ ಆದವರನ್ನು ಅಂಗಡಿ ಮಾಲಕರೇ ಸಮಾಧಾನಿಸಿದರು.
ಗ್ರಾಮಾಂತರ ಭಾಗದ ನರಿಮೊಗರು, ಸರ್ವೆ, ಪಾಣಾಜೆ, ಕಬಕ ಭಾಗಗಳಲ್ಲಿ ಸಾಮಾನ್ಯವಾಗಿ ಒಂದೇ ಅಭಿಪ್ರಾಯ, ಈ ಬಾರಿಯ ಚುನಾವಣೆ ಹಿಂದಿನಷ್ಟು ರಂಗು ಇಲ್ಲ, ಸಪ್ಪೆ ಅಂತಾ ಅವರು ಮುಖ ತಿರುಗಿಸಿದರು. ಓಟು ಹಾಕ್ತಿರಾ ಅಂತಾ ಕೇಳಿದರೆ, ನಮ್ಮ ಹಕ್ಕು. ಅದನ್ನು ತಪ್ಪದೇ ನಿರ್ವಹಿಸುತ್ತೇವೆ ಅಂತಾ ಸಮರ್ಥನೆ ಕೂಡ ಕೆಲವರದು. ಪುತ್ತೂರು ನಗರದಲ್ಲಿ ಬಹುತೇಕರು ಜಾತ್ರೆಯ ಗೌಜಿಯಲ್ಲಿ ಇದ್ದಾರೆ. ಎಲೆಕ್ಷನ್ ಬಗ್ಗೆ ಕೇಳಿದರೆ ಜಾತ್ರೆ ಕಡೆ ಬೆರಳು ತೋರಿಸಿ ಸುಮ್ಮನಾದರು. ಕ್ಷೇತ್ರ ಪರ್ಯಟನೆಯಲ್ಲಿ ಕಂಡು ಬಂದ ಒಟ್ಟು ಅಭಿಪ್ರಾಯದ ಸಾರಾಂಶ ಅಂದರೆ, ಎಲೆಕ್ಷನ್ ಇದೆ, ಗೊತ್ತಿದೆ, ಆದರೆ ಪುತ್ತೂರಿನಲ್ಲಿ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ..!
-ಕಿರಣ್ ಪ್ರಸಾದ್ ಕುಂಡಡ್ಕ