Advertisement

ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿರೊದು ಸತ್ಯ

11:02 PM May 05, 2019 | Lakshmi GovindaRaj |

ಮೈಸೂರು: “ಸಚಿವ ಜಿ.ಟಿ.ದೇವೇಗೌಡ ಹೇಳಿರುವಂತೆ ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರು ಗ್ರಾಮದಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ. ಆದರೆ, ಅದು ಇಡೀ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ.

Advertisement

ಮೈಸೂರು, ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಭಾನುವಾರ ಮೈಸೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಸಚಿವ ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾನೆ. ಉದ್ಬೂರಿನಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದು, 100ಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ. ಎಷ್ಟು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಶಾಸ್ತ್ರ ಹೇಳ್ಳೋಕಾಗುತ್ತಾ? ಫ‌ಲಿತಾಂಶ ಬಂದಾಗ ನಿಮಗೇ ಗೊತ್ತಾಗುತ್ತದೆ’ ಎಂದರು.

ಮಂಡ್ಯ ಕ್ಷೇತ್ರದಲ್ಲೂ ಜೆಡಿಎಸ್‌ ಅಭ್ಯರ್ಥಿ ಗೆಲ್ಲುವುದಾಗಿ ಹೇಳಿದ ಅವರು, ಸುಮಲತಾ ಅವರೊಂದಿಗೆ ಊಟಕ್ಕೆ ಹೋದವರನ್ನು ಪ್ರಶ್ನೆ ಮಾಡೋಕ್ಕಾಗಲ್ಲ. ಊಟಕ್ಕೆ ಹೋದವರ ವಿಚಾರವನ್ನೆಲ್ಲಾ ನಾನು ಮಾತನಾಡಲು ಸಾಧ್ಯವಾಗುತ್ತದೆಯೇ ಎಂದರು.

“ಭ್ರಷ್ಟಾಚಾರದ ಪಟ್ಟಕಟ್ಟಿ ಕೊಂಡು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ನಿಧನರಾದರು’ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, “ನರೇಂದ್ರ ಮೋದಿ ಯಾವತ್ತಾದರೂ ಸತ್ಯ ಹೇಳಿದ್ದಾರಾ? ಸುಳ್ಳನ್ನೇ ಮಾರ್ಕೆಟಿಂಗ್‌ ಮಾಡಿ ಕಳೆದ ಬಾರಿ ಪ್ರಧಾನಿಯಾದರು. ಆದರೆ, ಈ ಬಾರಿ ಮತ್ತೆ ಸುಳ್ಳನ್ನು ಮಾರ್ಕೆಟಿಂಗ್‌ ಮಾಡಿ ಮತ್ತೂಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ’ ಎಂದು ಹೇಳಿದರು.

Advertisement

ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇವೆ ಎನ್ನುವ ಮೋದಿ ಗನ್‌ ಹಿಡಿದುಕೊಂಡು ಯುದ್ಧ ಮಾಡಲು ಹೋಗಿದ್ರಾ.? ಸರ್ಕಾರಕ್ಕೆ ತಿಳಿಸಿಯೇ ಸೇನೆ ತನ್ನ ಕರ್ತವ್ಯ ಪಾಲಿಸಿರುತ್ತೆ. ಅವರಿಗೆ ಗೌರವ ಕೊಡುವುದು ಬೇಡವೇ ಎಂದು ತಿರುಗೇಟು ನೀಡಿದರು.

ಬಾಲಕಿ ಮೇಲೆ ಅತ್ಯಾಚಾರವಾದಾಗ ಸಿದ್ದರಾಮಯ್ಯ ಕ್ರಮ ಕೈಗೊಳ್ಳಲಿಲ್ಲ ಎಂಬ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಪ್ರತಿಪಕ್ಷದಲ್ಲಿ ಅವನೇಕೆ ಸುಮ್ಮನೆ ಕುಳಿತಿದ್ದ ಎಂದು ಈಶ್ವರಪ್ಪಗೆ ಏಕವಚನದಲ್ಲೇ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next